ವೈಟ್ಟಾಪಿಂಗ್ ಕಾಮಗಾರಿ ಪ್ರಶ್ನಿಸಿ ಪಿಐಎಲ್; ಬಿಬಿಎಂಪಿಗೆ ಹೈಕೋರ್ಟ್ ನೋಟಿಸ್
- by Jagan Ramesh
- December 24, 2024
- 332 Views
ಬೆಂಗಳೂರು: ನಗರದ ಚಾಮರಾಜಪೇಟೆ (ವಾರ್ಡ್ ಸಂಖ್ಯೆ 140) ರಸ್ತೆಗಳ ವೈಟ್ಟಾಪಿಂಗ್ ಕಾಮಗಾರಿ ಪ್ರಶ್ನಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಂಬಂಧ ಬಿಬಿಎಂಪಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಚಾಮರಾಜಪೇಟೆಯ ವಿಠಲನಗರ ನಿವಾಸಿ ಶಶಾಂಕ ಜೆ. ಶ್ರೀಧರ ಎಂಬುವರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಹಾಗೂ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ರಜಾ ಕಾಲದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ಕೆಲಕಾಲ ವಾದ ಆಲಿಸಿದ ನ್ಯಾಯಪೀಠ, ಬಿಬಿಎಂಪಿ ಮುಖ್ಯ ಆಯುಕ್ತ ಹಾಗೂ ಇತರ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಡಿಸೆಂಬರ್ 27ಕ್ಕೆ ಮುಂದೂಡಿತು.
ಅರ್ಜಿದಾರರ ಆಕ್ಷೇಪವೇನು?
ಬಿಬಿಎಂಪಿ ವ್ಯಾಪ್ತಿಯ ವಾರ್ಡ್ ಸಂಖ್ಯೆ 137 (ರಾಯಪುರ), 138 (ಛಲವಾದಿಪಾಳ್ಯ) ಮತ್ತು 140ರ ರಸ್ತೆಗಳ ಡಾಂಬರೀಕರಣಕ್ಕಾಗಿ 2024ರ ಫೆಬ್ರವರಿ 8ರಂದು 29.31 ಕೋಟಿ ರೂ. ಮೊತ್ತದ ಕಾಮಗಾರಿಗೆ ಟೆಂಡರ್ ಕರೆದು, ಕಾರ್ಯಾದೇಶ ನೀಡಲಾಗಿದೆ. ಎರಡು-ಮೂರು ತಿಂಗಳ ಹಿಂದೆ 8 ಕೋಟಿ ರೂ. ಸಹ ಪಾವತಿಸಲಾಗಿದೆ. ಈ ಮಧ್ಯೆ, ಆರೆಂಟು ತಿಂಗಳ ಅಂತರದಲ್ಲಿ ಇದೇ ವಾರ್ಡ್ನ ರಸ್ತೆಗಳ ವೈಟ್ಟಾಪಿಂಗ್ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಇದರಿಂದ, ಸ್ಥಳೀಯರಿಗೆ ಸಾಕಷ್ಟು ಅನನುಕೂಲ ಆಗುವ ಜತೆಗೆ ಸಾರ್ವಜನಿಕರ ತೆರಿಗೆ ಹಣ ಅಪವ್ಯಯವಾಗಲಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.
ಅರ್ಜಿಯಲ್ಲಿನ ಮನವಿ:
ವಾರ್ಡ್ನ 8 ಪ್ರಮುಖ ರಸ್ತೆಗಳ ಸಮಗ್ರ ಅಭಿವೃದ್ದಿಗೆ ಕರೆದಿರುವ ಟೆಂಡರ್ ರದ್ದುಪಡಿಸಬೇಕು. ಈ ಸಂಬಂಧ 2024ರ ಡಿಸೆಂಬರ್ 19ರಂದು ಸಲ್ಲಿಸಿರುವ ಮನವಿ ಪರಿಗಣಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ನಿರ್ದೇಶನ ನೀಡಬೇಕು. ವೈಟ್ಟಾಪಿಂಗ್ ಕಾಮಗಾರಿ ಸ್ಥಗಿತಗೊಳಿಸುವಂತೆ ನಿರ್ದೇಶಿಸಬೇಕು. ಈ ರೀತಿ ಸಾರ್ವಜನಿಕ ತೆರಿಗೆ ಹಣದ ದುರ್ಬಳಕೆ ಕುರಿತು ಸಮಗ್ರ ತನಿಖೆ ನಡೆಸುವಂತೆ ಸಂಬಂಧಪಟ್ಟವರಿಗೆ ಆದೇಶ ನೀಡಬೇಕು ಎಂದು ಅರ್ಜಿದಾರರು ಪಿಐಎಲ್ನಲ್ಲಿ ಮನವಿ ಮಾಡಿದ್ದಾರೆ.
Related Articles
Thank you for your comment. It is awaiting moderation.
Comments (0)