ಬಿಎಸ್‌ವೈ ತಪ್ಪಿತಸ್ಥರೆಂದು ನಿರ್ಧರಿಸಲು ಸಂತ್ರಸ್ತೆಯ ಸ್ವಯಿಚ್ಛೆ ಹೇಳಿಕೆಯೊಂದೇ ಸಾಕು; ಹೈಕೋರ್ಟ್‌ನಲ್ಲಿ ಎಸ್‌ಪಿಪಿ ಪ್ರತಿಪಾದನೆ

ಬೆಂಗಳೂರು: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಕೃತ್ಯವನ್ನು ಖುದ್ದು ಯಡಿಯೂರಪ್ಪ ಅವರೇ ಒಪ್ಪಿಕೊಂಡಿದ್ದಾರೆ. ಅವರು ತಮ್ಮ ಕೃತ್ಯ ಒಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಸ್ವಯಿಚ್ಛೆ ಹೇಳಿಕೆ ದಾಖಲಿಸಿದ್ದಾರೆ. ಯಡಿಯೂರಪ್ಪ ಅವರನ್ನು ತಪ್ಪಿತಸ್ಥರೆಂದು ತೀರ್ಮಾನಿಸಲು ಸಂತ್ರಸ್ತೆಯ ಈ ಹೇಳಿಕೆಯೊಂದೇ ಸಾಕು ಎಂದು ಸಿಐಡಿ ಪರ ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ.ರವಿವರ್ಮ ಕುಮಾರ್‌ ಅವರು ಹೈಕೋರ್ಟ್‌ಗೆ ವಿವರಿಸಿದರು.

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಸಂಬಂಧ ‘ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆ’ ಅಡಿ ದಾಖಲಾಗಿರುವ ಎಫ್‌ಐಆರ್‌ ಮತ್ತು ಪೋಕ್ಸೋ ವಿಶೇಷ ನ್ಯಾಯಾಲಯದ ವಿಚಾರಣೆ ರದ್ದು ಕೋರಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ಪ್ರಕರಣದ ತನಿಖೆ ನಡೆಸಿರುವ ಸಿಐಡಿ ಪೊಲೀಸರ ಪರ ಹಾಜರಿದ್ದ ಎಸ್‌ಪಿಪಿ ಪ್ರೊ. ರವಿವರ್ಮ ಕುಮಾರ್, ತನಿಖಾಧಿಕರಿ ಮತ್ತು ಮ್ಯಾಜಿಸ್ಟ್ರೇಟ್‌ ಮುಂದೆ ಸಂತ್ರಸ್ತೆ ದಾಖಲಿಸಿರುವ ಸ್ವಯಿಚ್ಛೆ ಹೇಳಿಕೆಯನ್ನು ಓದುತ್ತಾ, “ಆರೂವರೆ ವರ್ಷದ ಹಿಂದೆ ನನ್ನ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನ್ಯಾಯ ಒದಗಿಸಲು ಕೋರಿ ಯಡಿಯೂರಪ್ಪ ಮನೆಗೆ ನಾನು ಮತ್ತು ನನ್ನ ತಾಯಿ ಹೋಗಿದ್ದೆವು. ಈ ವೇಳೆ ನನ್ನನ್ನು ಯಡಿಯೂರಪ್ಪ ಅವರು ಕೊಣೆಗೆ ಕರೆದು, ತಾಯಿ ಹೊರಗಡೆ ಇರಲಿ ಎಂದು ಸೂಚಿಸಿದರು. ನಂತರ ಯಡಿಯೂರಪ್ಪ ಅವರನ್ನು ನಾನು ಹಿಂಬಾಲಿಸಿ ಕೋಣೆಗೆ ಹೋದೆ. ಒಳಗೆ ಹೋದ ಕೂಡಲೇ ಯಡಿಯೂರಪ್ಪ ಅವರು ಕೊಣೆಯ ಬಾಗಿಲು ಮುಚ್ಚಿದರು” ಎಂದು ಸಂತ್ರಸ್ತೆಯ ಹೇಳಿಕೆಯಲ್ಲಿನ ಅಂಶಗಳನ್ನು ನ್ಯಾಯಪೀಠಕ್ಕೆ ವಿವರಿಸಿದರು.

ಮುಂದುವರಿದು, “ಯಡಿಯೂರಪ್ಪ ಅವರು ನನ್ನ ಬಳಿಗೆ ಬಂದು, ಹಿಂದೆ ನಿನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ದೋಷಿಗಳ ಗುರುತು ಪತ್ತೆ ಹಚ್ಚುತ್ತೀಯಾ ಎಂದು ಕೇಳಿದರು. ಅದಕ್ಕೆ ನಾನು ಹೌದು ಎಂದು ಹೇಳಿದೆ. ಹಿಂದಿನ ಪ್ರಕರಣ ಎಷ್ಟು ವರ್ಷದ ಹಿಂದೆ ನಡೆಯಿತು ಎಂದು ಮತ್ತೆ ಕೇಳಿದರು. ಆರೂವರೆ ವರ್ಷದ ಹಿಂದೆ ಎಂದು ನಾನು ಹೇಳಿದೆ” ಎಂದು ರವಿವರ್ಮ ಕುಮಾರ್‌  ಸಂತ್ರಸ್ತೆಯ ಹೇಳಿಕೆಯನ್ನು ಓದುತ್ತಿದ್ದರು. ಈ ವೇಳೆ, ಮಧ್ಯಪ್ರವೇಶಿಸಿದ ನ್ಯಾಯಮೂರ್ತಿಗಳು ಮುಂದಿನದ್ದನ್ನು ಓದಬೇಡಿ., ಅದು ಓದಲಾಗದಂತಹದು ಎಂದರು.

ಕೊನೆಯದಾಗಿ ಇನ್ನೊಂದು ಹೇಳಿಕೆಯನ್ನು ಓದುತ್ತೇನೆ ಎಂದು ತಿಳಿಸಿ ಮುಂದುವರಿಸಿದ ರವಿವರ್ಮ ಕುಮಾರ್, ಕೋಣೆಯಿಂದ ಹೊರಗೆ ಸಂತ್ರಸ್ತೆ ಅಳುತ್ತಾ ಬಂದರು. ಇದಾದ ನಂತರ ತಾಯಿ ಮತ್ತು ಸಂತ್ರಸ್ತೆ ಯಡಿಯೂರಪ್ಪ ಅವರ ಮನೆಯಿಂದ ಹೋದರು. ಆಗ ಕೋಣೆಯೊಳಗೆ ನಡೆದ ಘಟನೆಯನ್ನು ಸಂತ್ರಸ್ತೆ ತನ್ನ ತಾಯಿಗೆ ಹೇಳಿದರು. ಮರುಕ್ಷಣವೇ ಮತ್ತೆ ಮನೆಯೊಳಗೆ ಬಂದ ತಾಯಿ ಯಡಿಯೂರಪ್ಪ ಅವರನ್ನು ಕುರಿತು, “ಕೋಣೆಯಲ್ಲಿ ಏಕೆ ನೀವು ನನ್ನ ಮಗಳಿಗೆ ಆ ರೀತಿ ಮಾಡಿದಿರಿ. ಏಕೆ ನನ್ನ ಮಗಳ ರವಿಕೆಯೊಳಗೆ ಕೈ ಹಾಕಿದಿರಿ” ಎಂದು ಕೇಳಿದರು. ಆಗ ಯಡಿಯೂರಪ್ಪ ಅವರು, ನಾನು ಚೆಕ್‌ ಮಾಡಿದೆ. ನಿನ್ನ ಮಗಳು ನನ್ನ ಮೊಮ್ಮಗಳಿದ್ದಂತೆ ಎಂದು ಹೇಳಿದರು. ಈ ಎಲ್ಲ ಘಟನೆಯನ್ನು ನಾನು ವಿಡಿಯೋ ಮಾಡಿಕೊಂಡಿದ್ದೇನೆ ಎಂದು ಸಂತ್ರಸ್ತೆ ಸ್ವಯಿಚ್ಛೆ ಹೇಳಿಕೆ ನೀಡಿದ್ದಾರೆ. ಅಲ್ಲಿಗೆ ಇಡೀ ಘಟನೆಯನ್ನು ಯಡಿಯೂರಪ್ಪ ಅವರು ಪ್ರಮಾಣಿಕವಾಗಿ ಒಪ್ಪಿಕೊಂಡಿದ್ದಾರೆ. ಸಂತ್ರಸ್ತೆಯ ಈ ಒಂದೇ ಹೇಳಿಕೆ ಸಾಕು ಯಡಿಯೂರಪ್ಪ ಅವರನ್ನು ತಪ್ಪಿತಸ್ಥ ಎಂದು ತೀಮಾರ್ನಿಸಲು, ಬೇರಾವುದೇ ಸಾಕ್ಷ್ಯ-ದಾಖಲೆಯ ಅಗತ್ಯವಿಲ್ಲ ಎಂದು ಪ್ರತಿಪಾದಿಸಿದರು.

ಬಿ‌ಎಸ್‌ವೈ ಪರ ವಕೀಲರ ಆಕ್ಷೇಪ:
ಯಡಿಯೂರಪ್ಪ ಪರ ಹಾಜರಿದ್ದ ಹಿರಿಯ ವಕೀಲ ಸಿ.ವಿ. ನಾಗೇಶ್‌, ದೂರು ದಾಖಲಿಸಿದ ಮರು ದಿನವೇ ಸಂತ್ರಸ್ತೆಯ ತಾಯಿ, ರಾಜಕಾರಣಿಯೊಬ್ಬರು ಯಡಿಯೂರಪ್ಪ ಅವರ ಮೇಲೆ ದೂರು ದಾಖಲಿಸಲು ನನಗೆ ಹೇಳಿದ್ದರು. ಅದರಂತೆ ನಾನು ದೂರು ದಾಖಲಿಸಿದ್ದೇನೆ. ಅದಕ್ಕಾಗಿ ಯಡಿಯೂರಪ್ಪ ಅವರಲ್ಲಿ ನಾನು ಕ್ಷಮೆ ಕೋರುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ. ಘಟನೆ ನಡೆದ ಮರು ದಿನ ಪೊಲೀಸ್ ಆಯುಕ್ತರ ಕಚೇರಿಗೆ ಹೋದರೂ ಈ ದೂರು ನೀಡಿಲ್ಲ. ಅದನ್ನು ನಾನು ಕೋರ್ಟ್‌ಗೆ ತೋರಿಸುತ್ತೇನೆ ಎಂದರು.

ಸಂತ್ರಸ್ತೆಯ ತಾಯಿ ಈಗಾಗಲೇ ತನ್ನ ಸಂಬಂಧಿಕರು, ಅಧಿಕಾರಿಗಳು, ರಾಜಕಾರಣಿಗಳ ಮೇಲೆ ಒಟ್ಟು 56 ದೂರು ನೀಡಿದ್ದಾರೆ. ಈ ವಿವಾದಿತ  ಘಟನೆ ನಡೆದಿದೆ ಎನ್ನಲಾದ ದಿನದಿಂದ ಒಂದೂವರೆ ತಿಂಗಳ ಬಳಿಕ ಅಂದರೆ 2024ರ ಮಾರ್ಚ್ 14ರಂದು ಕೇಸ್ ದಾಖಲಿಸಿದ್ದಾರೆ. ಯಡಿಯೂರಪ್ಪ ಅವರು ತನ್ನನ್ನು ಅನುಚಿತವಾಗಿ ಸ್ಪರ್ಶಿಸಿದ್ದಾರೆಂದು ಬಾಲಕಿ ಹೇಳಿಕೆ ಇದೆ. ಸಂತ್ರಸ್ತೆಯು ಯಡಿಯೂರಪ್ಪ ಮನೆಯಲ್ಲಿದ್ದಾಗ ಹಲವು ಜನರು ಇದ್ದರು. ಅವರ ಸಮ್ಮುಖದಲ್ಲಿ ಈ ಘಟನೆ ನಡೆಯಲು ಸಾಧ್ಯವೇ? ಕೇವಲ ಬಾಲಕಿಯ ಹೇಳಿಕೆ ಆಧರಿಸಿ ದೋಷಾರೋಪಟ್ಟಿ ಸಲ್ಲಿಸಲಾಗಿದೆ. ಘಟನೆ ನಡೆದೇ ಇಲ್ಲ  ಎಂದು ಅರ್ಧ ಡಜನ್‌ ಸಾಕ್ಷಿಗಳು ಹೇಳಿದ್ದು, ಅವರ ಹೇಳಿಕೆ ಬೆಲೆ ನೀಡಬೇಕು ಎಂದು ಸಿ.ವಿ. ನಾಗೇಶ್ ನ್ಯಾಯಾಲಯಕ್ಕೆ ಮನವಿ ಮಾಡಿದರು.

ದಿನದ ಕಲಾಪದ ಅವಧಿ ಮುಗಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಅರ್ಜಿ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.

Related Articles

Comments (0)

Leave a Comment