ಕೊಲೆ ಪ್ರಕರಣದಲ್ಲಿ ದರ್ಶನ್ ಆ್ಯಂಡ್ ಗ್ಯಾಂಗ್‌ಗೆ ಬೇಲ್; ಹೈಕೋರ್ಟ್ ನೀಡಿರುವ ಕಾರಣಗಳೇನು?
- by Jagan Ramesh
- December 13, 2024
- 453 Views
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿ 7 ಆರೋಪಿಗಳಿಗೆ ಹೈಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದ್ದು, ಕಳೆದ 6 ತಿಂಗಳಿನಿಂದ ಜೈಲಿನಲ್ಲಿ ಕಾಲ ದೂಡುತ್ತಿದ್ದ ಆರೋಪಿಗಳಿಗೆ ಹೊಸ ವರ್ಷಕ್ಕೂ ಮೊದಲೇ ಬಿಡುಗಡೆಯ ಭಾಗ್ಯ ದೊರೆತಿದೆ.
ಪ್ರಕರಣದ ಆರೋಪಿಗಳಾಗಿರುವ ನಟ ದರ್ಶನ್, ಮತ್ತವರ ಗೆಳತಿ ಪವಿತ್ರಾ ಗೌಡ, ಮ್ಯಾನೇಜರ್ ಆರ್. ನಾಗರಾಜು, ದರ್ಶನ್ ಕಾರು ಚಾಲಕ ಎಂ.ಲಕ್ಷ್ಮಣ್, ಆಪ್ತರಾದ ಅನುಕುಮಾರ್, ಜಗದೀಶ್ ಮತ್ತು ಪ್ರದೋಷ್ ಎಸ್. ರಾವ್ ಅವರ ಜಾಮೀನು ಅರ್ಜಿಗಳನ್ನು ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ಪುರಸ್ಕರಿಸಿದೆ. 68 ಪುಟಗಳ ಸುದೀರ್ಘ ತೀರ್ಪಿನಲ್ಲಿ ಜಾಮೀನು ಮಂಜೂರಾತಿಗೆ ಕಾರಣಗಳು ಹಾಗೂ ಜಾಮೀನು ಷರತ್ತುಗಳನ್ನು ನ್ಯಾಯಾಲಯ ಉಲ್ಲೇಖಿಸಿದೆ.
ಜಾಮೀನಿಗೆ ಕೋರ್ಟ್ ನೀಡಿರುವ ಕಾರಣಗಳು:
- ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಅಪಹರಿಸಿ ಬೆಂಗಳೂರಿಗೆ ಕರೆತಂದು, ಪಟ್ಟಣಗೆರೆ ಶೆಡ್‌ನಲ್ಲಿ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ ಎಂಬ ಆರೋಪ ಅರ್ಜಿದಾರರ ಮೇಲಿದೆ. ದಾಖಲೆಗಳನ್ನು ಪರಿಶೀಲಿಸಿದರೆ ಬೆಂಗಳೂರಿಗೆ ಬರುವ ಮುನ್ನ ರೇಣುಕಾಸ್ವಾಮಿ, ತನ್ನ ಸ್ನೇಹಿತರೊಂದಿಗೆ ಇದ್ದೇನೆ. ಮಧ್ಯಾಹದ ಊಟಕ್ಕೆ ಮನೆಗೆ ಬರುವುದಿಲ್ಲ ಎಂದು ಪೋಷಕರಿಗೆ ತಿಳಿಸಿದ್ದಾನೆ. ಬೆಂಗಳೂರಿಗೆ ಕಾರಿನಲ್ಲಿ ಬರುವಾಗ ಮಾರ್ಗ ಮಧ್ಯೆ ಆರೋಪಿಗಳೊಂದಿಗೆ ಬಾರ್ ಮತ್ತು ರೆಸ್ಟೋರೆಂಟ್‌ಗೆ ಹೋಗಿ ಮದ್ಯ ಖರೀದಿ ಮಾಡಿದ್ದಾರೆ. ಇದರಿಂದ, ರೇಣುಕಾಸ್ವಾಮಿ ಸ್ವಯಿಚ್ಛೆಯಿಂದ ಆರೋಪಿಗಳೊಂದಿಗೆ ಬೆಂಗಳೂರಿಗೆ ಬಂದಿರುವುದು ತಿಳಿಯುತ್ತದೆ.
- ರೇಣುಕಾಸ್ವಾಮಿಯ ಮೇಲೆ ಆರೋಪಿಗಳು ಕೈ-ಕಾಲುಗಳಿಂದ, ಮರದ ಲಾಠಿ ಮತ್ತು ನೈಲಾನ್ ಹಗ್ಗದಿಂದ ಹಲ್ಲೆ ಮಾಡಿರುವುದು ದಾಖಲೆಯಿಂದ ಕಂಡುಬರುತ್ತದೆ. ಈ ಆಯುಧಗಳನ್ನು ಗಮನಿಸೊದರೆ, ಹಲ್ಲೆ ಮಾಡಿ ರೇಣುಕಾಸ್ವಾಮಿಯನ್ನು ಕೊಲೆ ಮಾಡಲು ಆರೋಪಿಗಳು ತಯಾರಿ ಮಾಡಿಕೊಂಡಿದ್ದರು ಎನ್ನಲಾಗದು.
- ನಿಜವಾಗಿಯೂ ಕೊಲೆ ಮಾಡಲು ಉದ್ದೇಶಿಸಿದ್ದರೇ? ಮೃತದೇಹದ ಮೇಲಿನ 39 ಗಾಯಗಳು, ರಕ್ತದ ಕಲೆ ಆರೋಪಿಗಳ ಬಟ್ಟೆ, ಶೂಗಳ ಮೇಲೆ ದೊರೆತಿರುವ ಬಗ್ಗೆ ಇರುವ ಸಾಕ್ಷ್ಯಗಳೇನು? ಮರಣೋತ್ತರ ಪರೀಕ್ಷೆಯ ವರದಿಯ ಸತ್ಯಾಸತ್ಯೆ ವಿಚಾರಣಾ ನ್ಯಾಯಾಲಯದ ಪೂರ್ಣ ಪ್ರಮಾಣದ ವಿಚಾರಣೆಯಿಂದ ತಿಳಿಯಬೇಕಿದೆ. ಈ ಹಂತದಲ್ಲಿ ಹೈಕೋರ್ಟ್ ಮಿನಿ ಟ್ರಯಲ್ ಮಾಡಲಾಗದು.
- ಅರ್ಜಿದಾರ ಆರೋಪಿಗಳಿಗೆ ಗಂಭೀರವಾದ ಅಪರಾಧ ಹಿನ್ನೆಲೆ ಇಲ್ಲ. ಅವರೆಲ್ಲರೂ ಸಮಾಜದಲ್ಲಿ ಆಳವಾದ ಬೇರುಗಳನ್ನು ಹೊಂದಿರುವ ವ್ಯಕ್ತಿಗಳಾಗಿದ್ದಾರೆ. ಅರ್ಜಿದಾರರು ಕಳೆದ 6 ತಿಂಗಳಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪ್ರಾಸಿಕ್ಯೂಷನ್ ಪ್ರಕರಣದ ದೋಷಾರೋಪಟ್ಟಿಯಲ್ಲಿ 262 ಸಾಕ್ಷಿಗಳನ್ನು ತೋರಿಸಿದೆ. 13 ಸಂಪುಟಗಳಲ್ಲಿ 587 ದಾಖಲೆಗಳನ್ನು ನೀಡಿದೆ. ಪ್ರಕರಣದ ವಿಚಾರಣೆಯನ್ನು ವಿಚಾರಣಾ ನ್ಯಾಯಾಲಯ ಶೀಘ್ರವಾಗಿ ಪೂರ್ಣಗೊಳಿಸುವ ಸಾಧ್ಯತೆ ಕಡಿಮೆಯಿದೆ. ಆದ್ದರಿಂದ, ಎಲ್ಲ ಅರ್ಜಿದಾರರಿಗೆ ಜಾಮೀನು ನೀಡಲಾಗುತ್ತಿದೆ.
- ಪಂಕಜ್ ಬನ್ಸಾಲ್ ಮತ್ತು ಪುರ್ಕಾಯಾಸ್ತಾ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ, ಆರೋಪಿಗಳನ್ನು ಬಂಧಿಸಿದ ಕೂಡಲೇ ಅವರನ್ನು ಏಕೆ ಬಂಧಿಸಲಾಗಿದೆ ಎಂಬ ಕಾರಣ/ಆಧಾರಗಳನ್ನು (ಮೆಮೊ ಆಫ್ ಗ್ರೌಂಡ್ಸ್ ಆಫ್ ಅರೆಸ್ಟ್) ಒದಗಿಸಬೇಕು. ಈ ಪ್ರಕರಣದಲ್ಲಿ ಪವಿತ್ರಾಗೌಡ (ಎ-1), ದರ್ಶನ್ (ಎ-2) ನಾಗರಾಜು (ಎ-11), ಲಕ್ಷ್ಮಣ್ (ಎ-12), ಪ್ರದೋಷ್ (ಎ-14) ಅವರನ್ನು 2024ರ ಜೂನ್ 11ರಂದು ಬಂಧಿಸಲಾಗಿದೆ. ಜಗದೀಶ್ (ಎ-6) ಅನುಕುಮಾರ್ (ಎ-7) ಅವರನ್ನು ಜೂನ್ 14ರಂದು ಬಂಧಿಸಲಾಗಿದೆ. ವಿಚಾರಣಾ ನ್ಯಾಯಾಲಯದ ಆದೇಶವನ್ನು ಪರಿಶೀಲಿಸಿದರೆ, ಆರೋಪಿಗಳನ್ನು ಬಂಧಿಸಿದ ಕೂಡಲೇ, ಅವರಿಗೆ ಬಂಧನದ ಕಾರಣ/ಆಧಾರಗಳನ್ನು ಒದಗಿಸಿಲ್ಲ ಎಂಬುದು ಕಂಡುಬರುತ್ತದೆ.
- ಆರೋಪಿಗಳ ಬಂಧನದ ವೇಳೆ ಕೋರ್ಟ್ ಸಾಕ್ಷಿಗಳು ಹಾಜರಿದ್ದು, ತಾವು ಏಕೆ ಬಂಧನ ಮೆಮೊಗೆ ಸಹಿ ಹಾಕಿದ್ದೇವೆ ಎಂಬ ಬಗ್ಗೆ ತನಿಖಾಧಿಕಾರಿಗಳ ಮುಂದೆ ದಾಖಲಿಸಿರುವ ಹೇಳಿಕೆಯಲ್ಲಿ ಎಲ್ಲಿಯೂ ಹೇಳಿಲ್ಲ. ಇನ್ನು ಸಾಕ್ಷಿಗಳ ಹೇಳಿಕೆಯನ್ನು ವಿಳಂಬವಾಗಿ ದಾಖಲಿಸಿಕೊಳ್ಳಲಾಗಿದೆ.
- ಆರೋಪಿಗಳನ್ನು ಬಂಧಿಸಿದ ಕೂಡಲೇ ಬಂಧನದ ಆಧಾರದ ಮೊಮೊ ಒದಗಿಸಲಾಗಿದೆ ಎಂಬ ಪ್ರಾಸಿಕ್ಯೂಷನ್ ವಾದ ತೀರ ಸಂಶಯಾಸ್ಪದವಾಗಿದೆ. ಈ ಪ್ರಕರಣದಲ್ಲಿ ಆರೋಪಿಗಳನ್ನು ವಿವಿಧ ದಿನಾಂಕದಲ್ಲಿ ಬಂಧಿಸಲಾಗಿದೆ. ಬಂಧನಕ್ಕೆ ನೀಡಲಾಗಿರುವ ಕಾರಣಗಳು ಮಾತ್ರ ಒಂದೇ ರೀತಿ ಇವೆ. ಅದು ಸೈಕ್ಲೋಸ್ಟೈಲ್ ಕಾಪಿಯಾಗಿದೆ. 2023ರ ಅಕ್ಟೋಬರ್ 3ರ ನಂತರ ಆರೋಪಿಯನ್ನು ಬಂಧಿಸಿದ ಕೂಡಲೇ ಬಂಧನ ಆಧಾರದ ಮೆಮೊವನ್ನು ಒದಗಿಸುವುದು ಕಡ್ಡಾಯ. ತನಿಖಾಧಿಕಾರಿಗಳು (ಪ್ರಾಸಿಕ್ಯೂಷನ್ ) ಈ ನಿಯಮ ಪಾಲನೆ ಮಾಡದಿರುವುದರಿಂದ ಅರ್ಜಿದಾರರು ಜಾಮೀನು ಪಡೆಯಲು ಅರ್ಹರಾಗಿದ್ದಾರೆ.
ಜಾಮೀನು ಷರತ್ತುಗಳು:
ಅರ್ಜಿದಾರ ಆರೋಪಿಗಳು ತಲಾ 1 ಲಕ್ಷ ರೂ. ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತಕ್ಕೆ ಇಬ್ಬರ ಶ್ಯೂರಿಟಿ ಒದಗಿಸಬೇಕು. ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ತಪ್ಪದೆ ಹಾಜರಾಗಬೇಕು. ಸೂಕ್ತ ಕಾರಣಗಳಿಲ್ಲದೆ, ವಿಚಾರಣಾ ನ್ಯಾಯಾಲಯದ ಅನುಮತಿ ಇಲ್ಲದೆ ವಿಚಾರಣೆಗೆ ಗೈರಾಗುವಂತಿಲ್ಲ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪ್ರಾಸಿಕ್ಯೂಷನ್ ಸಾಕ್ಷಿಗಳಿಗೆ ಬೆದರಿಕೆ ಹಾಕುವಂತಿಲ್ಲ. ಸಾಕ್ಷ್ಯಧಾರಗಳನ್ನು ತಿರುಚುವುದಕ್ಕೆ ಯತ್ನಿಸಬಾರದು. ಇಂಥದ್ದೇ ಅಪರಾಧ ಕೃತ್ಯದಲ್ಲಿ ಭಾಗಿಯಾಗಬಾರದು. ಪ್ರಕರಣ ಇತ್ಯರ್ಥವಾಗುವರೆಗೂ ವಿಚಾರಣಾ ನ್ಯಾಯಾಲಯದ ಪೂರ್ವಾನುಮತಿಯಿಲ್ಲದೆ ವ್ಯಾಪ್ತಿ ಬಿಟ್ಟು ತೆರಳುವಂತಿಲ್ಲ ಎಂಬ ಷರತ್ತುಗಳನ್ನು ವಿಧಿಸಿ ಹೈಕೋರ್ಟ್ ಜಾಮೀನು ನೀಡಿದೆ.
ಏಕರೂಪ ಮೆಮೊ ಮಾದರಿ ಸಿದ್ಧಪಡಿಸಲು ಸೂಚನೆ:
ಅಪರಾಧ ಪ್ರಕರಣಗಳಲ್ಲಿ ಆರೋಪಿಗಳಿಗೆ ಒದಗಿಸುವದಕ್ಕಾಗಿ ಏಕರೂಪ ಮೊಮೊ ಮಾದರಿಯನ್ನು ಸಿದ್ಧಪಡಿಸಲು ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಕೂಡಲೇ ಕ್ರಮ ಜರುಗಿಸಬೇಕು. ಆ ಮೆಮೊ ಅನ್ನು ಆರೋಪಿಯ ರಿಮಾಂಡ್‌ಗೆ ಕೋರುವ ವೇಳೆ ರಿಮಾಂಡ್ ವರದಿಯೊಂದಿಗೆ ಲಗತ್ತಿಸಬೇಕು. ಅದನ್ನು ಮ್ಯಾಜಿಸ್ಟ್ರೇಟ್ ಮತ್ತು ಜಿಲ್ಲಾ ನ್ಯಾಯಾಲಯಗಳು ತಪ್ಪದೇ ದಾಖಲೆಗೆ ತೆಗೆದುಕೊಳ್ಳಬೇಕು ಎಂದು ನಿರ್ದೇಶಿಸಿರುವ ಹೈಕೋರ್ಟ್, ಈ ಆದೇಶದ ಪ್ರತಿಯನ್ನು ರಾಜ್ಯದ ಎಲ್ಲ ಮ್ಯಾಜಿಸ್ಟ್ರೇಟ್ ಹಾಗೂ ಜಿಲ್ಲಾ ನ್ಯಾಯಾಲಯಗಳಿಗೆ ರವಾನಿಸುವಂತೆ ರಿಜಿಸ್ಟ್ರಿಗೆ ನಿರ್ದೇಶಿಸಿದೆ.
Related Articles
Thank you for your comment. It is awaiting moderation.
Comments (0)