ರೇಣುಕಾಸ್ವಾಮಿ ಕೊಲೆ ಪ್ರಕರಣ; ನಟ ದರ್ಶನ್ ಸೇರಿ ಏಳು ಆರೋಪಿಗಳಿಗೆ ಹೈಕೋರ್ಟ್ ಜಾಮೀನು

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌, ಪವಿತ್ರಾ ಗೌಡ ಸೇರಿ 7 ಆರೋಪಿಗಳಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಇದರಿಂದ, ವೈದ್ಯಕೀಯ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ದರ್ಶನ್‌ ಚಿಕಿತ್ಸೆಯ ಬಳಿಕ ಮತ್ತೆ ಜೈಲಿಗೆ ಹೋಗುವ ಅಗತ್ಯ ಇಲ್ಲವಾಗಿದೆ. ಮತ್ತೊಂದೆಡೆ, ಕಳೆದ 6 ತಿಂಗಳಿನಿಂದ ನ್ಯಾಯಾಂಗ ಬಂಧನದಲ್ಲಿದ್ದ ಪವಿತ್ರಾ ಗೌಡ ಮತ್ತಿತರರಿಗೆ ಬಿಡುಗಡೆಯ ಭಾಗ್ಯ ಸಿಕ್ಕಂತಾಗಿದೆ.

ಕೊಲೆ ಪ್ರಕರಣದಲ್ಲಿ ಜಾಮೀನು ಕೋರಿ ಆರೋಪಿಗಳಾದ ದರ್ಶನ್‌, ಪವಿತ್ರಾ ಗೌಡ, ಆರ್‌.ನಾಗರಾಜು, ಎಂ.ಲಕ್ಷ್ಮಣ್, ಅನು ಕುಮಾರ್‌, ಜಗದೀಶ್‌, ಪ್ರದೋಷ್ ಎಸ್‌. ರಾವ್‌ ಸಲ್ಲಿಸಿದ್ದ ಅರ್ಜಿಗಳ ಕುರಿತ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಸ್‌. ವಿಶ್ವಜಿತ್‌ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ಪ್ರಕಟಿಸಿತು.

ತೀರ್ಪು ಪ್ರಕಟಿಸುವ ಸಂದರ್ಭದಲ್ಲಿ ಎಲ್ಲ ಜಾಮೀನು ಅರ್ಜಿಗಳನ್ನು ಪುರಸ್ಕರಿಸಲಾಗಿದೆ ಎಂದು ನ್ಯಾಯಪೀಠ ತಿಳಿಸಿದೆ. ಆರೋಪಿಗಳು ತನಿಖೆಗೆ ಸಹಕರಿಸಬೇಕು, ಪ್ರಕರಣದ ಸಾಕ್ಷ್ಯ ನಾಶಕ್ಕೆ ಯತ್ನಿಸಬಾರದು, ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು, ವಿಚಾರಣಾ ನ್ಯಾಯಾಲಯದ ವ್ಯಾಪ್ತಿ ಬಿಟ್ಟು ತೆರಳಬಾರದು ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ. ತೀರ್ಪಿನ ವಿಸ್ತೃತ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ಪ್ರಕರಣವೇನು?
ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಂಬಂಧ ಜೂನ್‌ 11ರಂದು ದರ್ಶನ್‌ ಮತ್ತಿತರರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದರು. ಜೂನ್‌ 22ರಿಂದ ದರ್ಶನ್‌ ಮತ್ತಿತರ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದರು. ಅಕ್ಟೋಬರ್‌ 14ರಂದು ವಿಚಾರಣಾ ನ್ಯಾಯಾಲಯ ದರ್ಶನ್‌, ಪವಿತ್ರಾ ಗೌಡ, ನಾಗರಾಜು ಮತ್ತು ಲಕ್ಷ್ಮಣ್‌ಗೆ ಜಾಮೀನು ನಿರಾಕರಿಸಿತ್ತು. ಎಂಟನೇ ಆರೋಪಿ ರವಿಶಂಕರ್‌, 13ನೇ ಆರೋಪಿ ದೀಪಕ್‌ ಕುಮಾರ್‌‌ಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಅದಕ್ಕೂ ಮುನ್ನ, ಕಾರ್ತಿಕ್‌, ಕೇಶವಮೂರ್ತಿ ಮತ್ತು ನಿಖಿಲ್‌ ನಾಯಕ್‌ಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು.

ಈ ಮಧ್ಯೆ, ಬೆನ್ನುಹುರಿ ನೋವಿನ ಸಮಸ್ಯೆ ಹಿನ್ನೆಲೆಯಲ್ಲಿ ಅಕ್ಟೋಬರ್‌ 30ರಂದು ಹೈಕೋರ್ಟ್‌ ದರ್ಶನ್‌ಗ ವೈದ್ಯಕೀಯ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಜೈಲಿನಿಂದ ಹೊರ ಬಂದಿದ್ದ ದರ್ಶನ್ ಬೆಂಗಳೂರಿನ ಬಿಜಿಎಸ್‌ ಆಸ್ಪತ್ರೆಯಲ್ಲಿ ಬೆನ್ನುಹುರಿ ನೋವಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ ಐವರಿಗೆ ಸಿಕ್ಕಿಲ್ಲ ಬೇಲ್:
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ ಸೇರಿ 17 ಮಂದಿ ಆರೋಪಿಗಳಿದ್ದು, ಈಗಾಗಲೇ ಐವರಿಗೆ ವಿಚಾರಣಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಈಗ ಹೈಕೋರ್ಟ್ ಏಳು ಮಂದಿಗೆ ಜಾಮೀನು ನೀಡಿದ್ದು, ಒಟ್ಟು 12 ಮಂದಿಗೆ ಜಾಮೀನು ಸಿಕ್ಕಂತಾಗಿದೆ. ಪುಟ್ಟಸ್ವಾಮಿ ಅಲಿಯಾಸ್‌ ಪವನ್‌, ರಾಘವೇಂದ್ರ, ನಂದೀಶ್‌, ಧನರಾಜ್‌ ಡಿ ಅಲಿಯಾಸ್‌ ರಾಜು, ವಿ. ವಿನಯ್‌ಗೆ ಜಾಮೀನು ದೊರೆಯಬೇಕಿದೆ.

Related Articles

Comments (0)

Leave a Comment