ಮುಡಾ ಹಗರಣದ ಸಿಬಿಐ ತನಿಖೆಗೆ ಕೋರಿದ ಅರ್ಜಿ; ಸಿಎಂ ಸಿದ್ದರಾಮಯ್ಯಗೆ ಹ್ಯಾಂಡ್ ಸಮನ್ಸ್ ನೀಡಲು ಹೈಕೋರ್ಟ್ ನಿರ್ದೇಶನ

ಬೆಂಗಳೂರು: ಮುಡಾ ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ಸಂಸ್ಥೆಗೆ (ಸಿಬಿಐ) ವಹಿಸಲು ಕೋರಿರುವ ಅರ್ಜಿ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ ಮತ್ತು ಬಾವಮೈದುನ ಮಲ್ಲಿಕಾರ್ಜುನ ಸ್ವಾಮಿಗೆ ಹ್ಯಾಂಡ್‌ ಸಮನ್ಸ್‌ ನೀಡಲು ಅರ್ಜಿದಾರ ಸ್ಮೇಹಮಯಿ ಕೃಷ್ಣಗೆ ಹೈಕೋರ್ಟ್‌ ನಿರ್ದೇಶಿಸಿದೆ.

ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಖಾಸಗಿ ದೂರುದಾರ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ತಕರಾರು ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ನಿರ್ದೇಶನ ನೀಡಿತು. ಜತೆಗೆ, ಅರ್ಜಿಯಲ್ಲಿ ಜಾರಿ ನಿರ್ದೇಶನಾಲಯವನ್ನು (ಇಡಿ) ಪ್ರತಿವಾದಿಯಾಗಿಸುವಂತೆ ಕೋರಿ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ಮಧ್ಯಂತರ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಒಂದು ವಾರ ಕಾಲಾವಕಾಶ ನೀಡಿತು.

ಇದಕ್ಕೂ ಮುನ್ನ ಮುಡಾ ಪ್ರಕರಣದಲ್ಲಿನ ವಿವಾದಿತ 3.14 ಗುಂಟೆ ಜಮೀನಿನ ಮೂಲ ಮಾಲೀಕ ದೇವರಾಜು ಪರ ಹಿರಿಯ ವಕೀಲ ದುಷ್ಯಂತ್ ದವೆ ವಾದ ಮಂಡಿಸಿ, ಪ್ರಕರಣದ ಪೊಲೀಸ್‌ ತನಿಖೆಗೆ ಅನುಮತಿಸಿದ ಆದೇಶ ಪ್ರಶ್ನಿಸಿದ ಅರ್ಜಿ ಮತ್ತು ತನಿಖೆಯನ್ನು ಸಿಬಿಐ ವಹಿಸಲು ಕೋರಿರುವ ಅರ್ಜಿ ಸಂಬಂಧ ನೋಟಿಸ್‌ ಜಾರಿ ಮಾಡಿರುವ ಏಕಸದಸ್ಯ ನ್ಯಾಯಪೀಠದ (ನ್ಯಾ.ಎಂ.ನಾಗಪ್ರಸನ್ನ) ಆದೇಶ ಪ್ರಶ್ನಿಸಿ ದೇವರಾಜು ಅವರು ವಿಭಾಗೀಯ ನ್ಯಾಯಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ. ಮೇಲ್ಮನವಿಯಲ್ಲಿನ ಪ್ರತಿವಾದಿಗಳಿಗೆ ನೋಟಿಸ್‌ ನೀಡಿರುವ ವಿಭಾಗೀಯ ನ್ಯಾಯಪೀಠ, ವಿಚಾರಣೆಗೆ ದಿನಾಂಕವನ್ನೂ ನಿಗದಿಪಡಿಸಿದೆ. ಆದ್ದರಿಂದ, ಈ ಅರ್ಜಿ ವಿಚಾರಣೆ ಮುಂದೂಡಬೇಕು ಎಂದು ಕೋರಿದರು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೋಕೇಟ್‌ ಜನರಲ್‌ ಶಶಿಕಿರಣ್ ಶೆಟ್ಟಿ ಮತ್ತು ಹಿರಿಯ ವಕೀಲ ಕಪಿಲ್‌ ಸಿಬಲ್‌, ಅರ್ಜಿ ಸಂಬಂಧ ನ್ಯಾಯಾಲಯ ಜಾರಿಗೊಳಿಸಿರುವ ನೋಟಿಸ್‌ ಪ್ರತಿವಾದಿಗಳಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ ಮತ್ತು ಬಾವಮೈದುನ ಮಲ್ಲಿಕಾರ್ಜುನ ಅವರಿಗೆ ತಲುಪಿಲ್ಲ. ನೋಟಿಸ್‌ ಜಾರಿಯಾಗಿ, ಅವರ ಪರ ವಕೀಲರು ವಿಚಾರಣೆಗೆ ಹಾಜರಾಗದೇ ಪ್ರಕರಣವನ್ನು ಸಿಬಿಐ ತನಿಖೆಗೆ ವರ್ಗಾಯಿಸಲು ಕೋರಿರುವ ಈ ಅರ್ಜಿಯ ವಿಚಾರಣೆ ಮುಂದುವರಿಸಬಾರದು ಎಂದು ಕೋರಿದರಲ್ಲದೆ, ಅರ್ಜಿಯಲ್ಲಿ ಜಾರಿ ನಿರ್ದೇಶನಾಲಯವನ್ನು ಪ್ರತಿವಾದಿಯಾಗಿಸಲು ಕೋರಿ ಅರ್ಜಿದಾರರು ಮಧ್ಯಂತರ ಮನವಿ ಸಲ್ಲಿಸಿದ್ದಾರೆ. ಅದಕ್ಕೆ ಆಕ್ಷೇಪಣೆ ಸಲ್ಲಿಸಬೇಕಿರುವುದರಿಂದ ಮತ್ತು ವಿಭಾಗೀಯ ಪೀಠದಲ್ಲಿ ಮೇಲ್ಮನವಿ ವಿಚಾರಣೆಗೆ ಬಾಕಿಯಿರುವುದರಿಂದ ಈ ಅರ್ಜಿ ವಿಚಾರಣೆ ಮುಂದೂಡಬೇಕು. ಅರ್ಜಿ ವಿಚಾರಣೆ ಮುಂದೂಡಿದರೆ ಸ್ವರ್ಗವೇನು ಕಳಚಿಬೀಳುವುದಿಲ್ಲ ಎಂದರು. ಅದನ್ನು ಪರಿಗಣಿಸಿದ ಹೈಕೋರ್ಟ್‌, ಅರ್ಜಿ ವಿಚಾರಣೆಯನ್ನು ಡಿಸೆಂಬರ್ 19ಕ್ಕೆ ಮುಂದೂಡಿತು.

ವಸ್ತುಸ್ಥಿತಿ ವರದಿ ಸಲ್ಲಿಕೆ:
ನ್ಯಾಯಾಲಯದ ಹಿಂದಿನ ಸೂಚನೆಯಂತೆ ಪ್ರಕರಣ ಕುರಿತು ಡಿಸೆಂಬರ್ 9ರವರೆಗೆ ನಡೆಸಿರುವ ತನಿಖೆಗೆ ಸಂಬಂಧಿಸಿದ ವಸ್ತುಸ್ಥಿತಿ ವರದಿಯನ್ನು ಲೋಕಾಯುಕ್ತ ಪೊಲೀಸರು ನ್ಯಾಯಪೀಠಕ್ಕೆ ಸಲ್ಲಿಸಿದರು. ಜತೆಗೆ, ಪ್ರಕರಣದ ಕೇಸ್‌ ಡೈರಿ ಮತ್ತು ಸಾಕ್ಷಿಗಳ ಹೇಳಿಕೆಗಳನ್ನೊಳಗೊಂಡ ಮತ್ತೊಂದು ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ ಲೋಕಾಯಕ್ತ ಪರ ವಕೀಲರು, ಜನಪ್ರತಿನಿಧಿಗಳ ನ್ಯಾಯಾಲಯದ ಮುಂದೆ ಡಿಸೆಂಬರ್ 24ರಂದು ಪ್ರಕರಣ ವಿಚಾರಣೆಗೆ ಬರಲಿದೆ ಎಂದು ತಿಳಿಸಿದರು. ವಸ್ತುಸ್ಥಿತಿ ವರದಿಯನ್ನು ದಾಖಲಿಸಿಕೊಂಡ ನ್ಯಾಯಪೀಠ, ಮುಂದಿನ ವಿಚಾರಣೆಯ ವೇಳೆಯೂ ತನಿಖೆಯ ವಿವರ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಸೂಚಿಸಿತು.

ದೂರುದಾರರ ನಡೆಗೆ ಸಿಬಲ್ ಆಕ್ಷೇಪ:
ಅಡ್ವೋಕೇಟ್‌ ಜನರಲ್ ಶಶಿಕಿರಣ್‌ ಶೆಟ್ಟಿ ವಿರುದ್ಧ ಅರ್ಜಿದಾರ ಸ್ನೇಹಮಯಿ ಕೃಷ್ಣ ಗಂಭೀರ ಆರೋಪ ಮಾಡುತ್ತಿದ್ದು, ಆ ಕುರಿತ ವರದಿ ಪತ್ರಿಕೆಯಲ್ಲಿ ಪ್ರಕಟವಾಗಿವೆ. ಅದು ಅರ್ಜಿ ಕುರಿತ ನ್ಯಾಯಾಲಯದ ವಿಚಾರಣೆ ಮೇಲೆ ಅಡ್ಡಪರಿಣಾಮ ಉಂಟು ಮಾಡುತ್ತದೆ. ಅರ್ಜಿದಾರರ ಈ ನಡಾವಳಿಯನ್ನು ಕೋರ್ಟ್‌ ಗಂಭೀರವಾಗಿ ಪರಿಗಣಿಸಬೇಕು ಎಂದು ಕಪಿಲ್‌ ಸಿಬಲ್‌ ಕೋರಿದರು.

ಆಗ, ಸ್ನೇಹಮಯಿ ಕೃಷ್ಟ ಪರ ಹಿರಿಯ ವಕೀಲ ಕೆ.ಜಿ.ರಾಘವನ್‌ ಅವರನ್ನು ಉದ್ದೇಶಿಸಿ ಪ್ರತಿಕ್ರಿಯಿಸಿದ ನ್ಯಾಯಪೀಠ, ಏನು ಇದೆಲ್ಲ? ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿರುವ ಹಂತದಲ್ಲಿ ಹೀಗೆ ಮಾಡುವುದು ಎಷ್ಟು ಸರಿ? ಅರ್ಜಿದಾರರು ಸ್ವಯಂ ನಿಯಂತ್ರಣ ವಿಧಿಸಿಕೊಳ್ಳಬೇಕು ಎಂದು ಸೂಚಿಸಿದರು. ಅರ್ಜಿದಾರರ ನಡೆಗೆ ತಾವು ಕ್ಷಮೆ ಕೋರುವುದಾಗಿ ಕೆ.ಜಿ.ರಾಘವನ್ ತಿಳಿಸಿದರು.

Related Articles

Comments (0)

Leave a Comment