ರೇಣುಕಾಸ್ವಾಮಿ ಕೊಲೆ ಆರೋಪಿಗಳ ಜಾಮೀನು ತೀರ್ಪು ಕಾಯ್ದಿರಿಸಿದ ಹೈಕೋರ್ಟ್; ದರ್ಶನ್ ವೈದ್ಯಕೀಯ ಜಾಮೀನು ಅವಧಿ ವಿಸ್ತರಣೆ
- by Jagan Ramesh
- December 9, 2024
- 120 Views
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಕೋರಿ ನಟ ದರ್ಶನ್, ಪವಿತ್ರಾ ಗೌಡ ಮತ್ತಿತರ ಆರೋಪಿಗಳು ಸಲ್ಲಿಸಿರುವ ಅರ್ಜಿಗಳ ಕುರಿತ ತೀರ್ಪು ಕಾಯ್ದಿರಿಸಿರುವ ಹೈಕೋರ್ಟ್, ತೀರ್ಪು ಪ್ರಕಟಿಸುವವರೆಗೆ ಬೆನ್ನುಹುರಿ ಸಮಸ್ಯೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಲು ನಟ ದರ್ಶನ್‌ಗೆ ನೀಡಿರುವ ವೈದ್ಯಕೀಯ ಮಧ್ಯಂತರ ಜಾಮೀನು ಅವಧಿಯನ್ನು ವಿಸ್ತರಿಸಿದೆ.
ಕೊಲೆ ಆರೋಪಿಗಳಾದ ನಟ ದರ್ಶನ್, ಪವಿತ್ರಾ ಗೌಡ, ಆರ್.ನಾಗರಾಜು, ಎಂ.ಲಕ್ಷ್ಮಣ್, ಅನು ಕುಮಾರ್, ಜಗದೀಶ್, ಪ್ರದೋಶ್ ಎಸ್. ರಾವ್ ಸಲ್ಲಿಸಿರುವ ಜಾಮೀನು ಅರ್ಜಿಗಳ ಕುರಿತು ಸೋಮವಾರ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ, ತೀರ್ಪು ಕಾಯ್ದಿರಿಸಿತು.
ಇದೇ ವೇಳೆ, 2024ರ ಅಕ್ಟೋಬರ್ 30ರಂದು ನಟ ದರ್ಶನ್‌ಗೆ ಮಂಜೂರು ಮಾಡಲಾಗಿದ್ದ ಆರು ವಾರಗಳ ಕಾಲ ವೈದ್ಯಕೀಯ ಜಾಮೀನು ಅವಧಿಯನ್ನು ತೀರ್ಪು ಪ್ರಕಟಿಸುವವರೆಗೆ ವಿಸ್ತರಿಸಿ ಆದೇಶಿಸಿತು.
ಜಾಮೀನು ಅರ್ಜಿಗೆ ಎಸ್‌ಪಿಪಿ ಆಕ್ಷೇಪ:
ಇದಕ್ಕೂ ಮುನ್ನ ಜಾಮೀನು ಅರ್ಜಿಗಳಿಗೆ ಬಲವಾಗಿ ಆಕ್ಷೇಪಿಸಿದ ವಿಶೇಷ ಸರ್ಕಾರಿ ಅಭಿಯೋಜಕ ಪಿ.ಪ್ರಸನ್ನ ಕುಮಾರ್, ಪವಿತ್ರಾಗೌಡ ಹಾಗೂ ದರ್ಶನ್ ತನ್ನನ್ನು ಬೆಂಗಳೂರಿಗೆ ಕರೆಸಿರುವ ವಿಚಾರವನ್ನು ರೇಣುಕಾಸ್ವಾಮಿ ತನ್ನ ಗೆಳತಿಗೆ ವಾಟ್ಸ್‌ಆ್ಯಪ್ ಕರೆ ಮಾಡಿ ತಿಳಿಸಿದ್ದಾನೆ. ಪ್ರಕರಣದ 10ನೇ ಆರೋಪಿ ವಿನಯ್, ದರ್ಶನ್ ಅವರನ್ನು ಭೇಟಿ ಮಾಡಿಸುವುದಾಗಿ ತಿಳಿಸಿ ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಮೋಸದಿಂದ ಅಪಹರಿಸಿ ಬೆಂಗಳೂರಿಗೆ ಕರೆತಂದಿದ್ದಾನೆ. ಪಟ್ಟಣಗೆರೆ ಶೆಡ್‌ಗೆ ಕರೆತಂದ ನಂತರ ಆರೋಪಿಗಳು ರೇಣುಕಾಸ್ವಾಮಿ ಮೇಲೆ ಐದು ಬಾರಿ ಹಲ್ಲೆ ಮಾಡಿದ್ದರು. ಆರೋಪಿ ಧನರಾಜ್ ತಂದಿದ್ದ ಯಂತ್ರದಲ್ಲಿ ಶಾಕ್ ಕೊಟ್ಟಿದ್ದಾನೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ರೇಣುಕಾಸ್ವಾಮಿಯನ್ನು ಶೆಡ್‌ಗೆ ಕರೆ ತಂದಿರುವ ವಿಚಾರ ತಿಳಿದ ದರ್ಶನ್, ಬ್ಲಾಕ್ ಸ್ಕಾರ್ಪಿಯೋ ಕಾರಿನಲ್ಲಿ ಬಂದಿದಿದ್ದರು. ಕಾರಿನಿಂದ ಇಳಿದ ಬಂದು ರೇಣುಕಾಸ್ವಾಮಿಯ ಎದೆಗೆ ಒದ್ದಿದ್ದಾರೆ. ನಂತರ ಪವಿತ್ರಾಗೌಡ ಚಪ್ಪಲಿಯಿಂದ ಹೊಡೆಯುತ್ತಾರೆ. ದರ್ಶನ್ ಸಹ ಪವಿತ್ರಾ ಗೌಡ ಚಪ್ಪಲಿ ತೆಗೆದುಕೊಂಡು ನನ್ನ ಹೆಂಡತಿಗೆ ಮೆಸೇಜ್ ಮಾಡುತ್ತೀಯಾ ಎಂದು ಹೇಳುತ್ತಾ ಹೊಡೆಯುತ್ತಾರೆ. ದರ್ಶನ್ ರೇಣುಕಾಸ್ವಾಮಿಯ ಎದೆಯ ಭಾಗಕ್ಕೆ ತುಳಿಯುತ್ತಿದ್ದಾರೆ. ಪ್ಯಾಂಟ್ ಬಿಚ್ಚಿಸಿ ಪವನ್ ಕೈಲಿ ಮೆಸೇಜ್ ಓದಿಸಿ ಮರ್ಮಾಂಗಕ್ಕೆ ದರ್ಶನ್ ಒದ್ದಿದ್ದಾರೆ ಎಂದು ಘಟನೆ ಕುರಿತು ವಿವರಣೆ ನೀಡಿದರು.
ಆರೋಪಿಗಳ ಹಲ್ಲೇಯಿಂದಲೇ ರೇಣುಕಾಸ್ವಾಮಿ ಸಾವು:
ಪವಿತ್ರಾಗೌಡ ಅವರನ್ನು ಬಿಟ್ಟು ಬರುವಂತೆ ಪುನೀತ್‌ಗೆ ಸೂಚಿಸಿದ ನಂತರವೂ ದರ್ಶನ್ ರೇಣುಕಾಸ್ವಾಮಿಗೆ ಹೊಡೆಯುತ್ತಲೇ ಇದ್ದರು. ದರ್ಶನ್ ಹೊರಟ ನಂತರ ಆರೋಪಿಗಳು ಸಾಕ್ಷಿಯ ಮೊಬೈಲ್‌ನಲ್ಲೇ ಫೋಟೋ ತೆಗೆಸಿಕೊಂಡಿದ್ದು, ಅದು ರಿಕವರಿಯಾಗಿದೆ. ರೇಣುಕಾಸ್ವಾಮಿಯ ದೇಹದಲ್ಲಿ ಪತ್ತೆಯಾಗಿರುವುದು ಒಂದೇ ಒಂದು 2.5 ಸೆಂಟಿ ಮೀಟರ್ ಗಾಯ ಮಾತ್ರ ಎಂದು ಆರೋಪಿಯ ಪರ ವಕೀಲರು ವಾದಿಸಿದ್ದಾರೆ. ಆದರೆ, ಮರಣೋತ್ತರ ಪರೀಕ್ಷೆ ಪ್ರಕಾರ ರೇಣುಕಾಸ್ವಾಮಿ ಎದೆಯ ಒಟ್ಟು 17 ಮೂಳೆಗಳು ಮುರಿದಿವೆ. ದೇಹದಲ್ಲಿ 13 ರಕ್ತಗಾಯಗಳಿವೆ. ದರ್ಶನ್ ಹಲ್ಲೆಯಿಂದ ರೇಣುಕಾಸ್ವಾಮಿ ವೃಷಣಕ್ಕೆ ತೀವ್ರ ಹಾನಿಯಾಗಿದೆ. ಆರೋಪಿಗಳು ಮಾಡಿರುವ ಹಲ್ಲೆಯಿಂದಲೇ ರೇಣುಕಾಸ್ವಾಮಿ ಮೃತಪಟ್ಟಿದ್ದಾನೆ ಎಂದು ತಿಳಿಸಿದರು.
ಊಟ ಮಾಡಿದ ಒಂದೆರಡು ಗಂಟೆಯಲ್ಲಿ ರೇಣುಕಾಸ್ವಾಮಿ ಪ್ರಾಣ ಹೋಗಿದೆ. ದೇಹದಲ್ಲಿರುವ ಆಹಾರ ಹಾಗೂ ದ್ರವ ಪರಿಶೀಲಿಸಿ ವೈದ್ಯರು ವರದಿ ನೀಡಿದ್ದಾರೆ. ವೈದ್ಯರ ಅಭಿಪ್ರಾಯ ಹಾಗೂ ದೋಷಾರೋಪ ಪಟ್ಟಿ ಪರಸ್ಪರ ಹೋಲಿಕೆಯಾಗಿದೆ. ದರ್ಶನ್ ಬಟ್ಟೆ ಹಾಗೂ ಶೂನಲ್ಲಿ ರೇಣುಕಾಸ್ವಾಮಿ ರಕ್ತದ ಡಿಎನ್ಎ ಪತ್ತೆಯಾಗಿದೆ. ಕೊಲೆ ನಡೆದ ಸ್ಥಳದ ಮಣ್ಣಿನಲ್ಲೂ ಡಿಎನ್‌ಎ ಪತ್ತೆಯಾಗಿದೆ. ಆರೋಪಿಗಳ ಹಲ್ಲೆಯಿಂದ ರೇಣುಕಾಸ್ವಾಮಿ ಮೃತಪಟ್ಟಿದ್ದು, ಇಡೀ ಘಟನೆ ಬಗ್ಗೆ ಪ್ರತ್ಯಕ್ಷ ಸಾಕ್ಷಿ ಹೇಳಿದ್ದಾನೆ. ಕೊಲೆ ಮುಚ್ಚಿಹಾಕುವುದಕ್ಕೆ ದರ್ಶನ್ 30 ಲಕ್ಷ ರೂ. ನೀಡಿದ್ಧಾರೆ. ಘಟನಾ ಸ್ಥಳಕ್ಕೆ ದರ್ಶನ್, ಪವಿತ್ರಾ ಗೌಡ ಮತ್ತಿತರರು ಕಾರಿನಲ್ಲಿ ಬಂದಿರುವುದಕ್ಕೆ ಸಿಸಿ ಕ್ಯಾಮರಾ ದೃಶ್ಯಾವಳಿ, ಕರೆ ದಾಖಲೆಗಳಿವೆ. ಆದ್ದರಿಂದ, ಆರೋಪಿಗಳಿಗೆ ಜಾಮೀನು ಮಂಜೂರು ಮಾಡಬಾರದು ಎಂದು ಮನವಿ ಮಾಡಿ, ವಾದ ಪೂರ್ಣಗೊಳಿಸಿದರು.
Related Articles
Thank you for your comment. It is awaiting moderation.
Comments (0)