ದೇವರಾಜ ಅರಸು ಟ್ರಕ್ ಟರ್ಮಿನಲ್ ನಿಯಮಿತದ ಅವ್ಯವಹಾರ ಪ್ರಕರಣ; ವೀರಯ್ಯ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆ

ಬೆಂಗಳೂರು: ಕರ್ನಾಟಕ ಸರ್ಕಾರದ ಉದ್ದಿಮೆಯಾದ ಡಿ. ದೇವರಾಜ ಅರಸು ಟ್ರಕ್ ಟರ್ಮಿನಲ್ ನಿಯಮಿತದಲ್ಲಿ (ಡಿಡಿಯುಟಿಟಿಎಲ್‌) ನಡೆದಿದೆ ಎನ್ನಲಾದ 47.50 ಕೋಟಿ ರೂ. ಅವ್ಯವಹಾರ ಆರೋಪ ಸಂಬಂಧ ನಿಗಮದ ಮಾಜಿ ಅಧ್ಯಕ್ಷ ಡಿ.ಎಸ್‌. ವೀರಯ್ಯ ವಿರುದ್ಧದ ತನಿಖೆ ಮತ್ತು ಆರೋಪ ಪಟ್ಟಿಗೆ ಹೈಕೋರ್ಟ್‌ ತಡೆಯಾಜ್ಞೆ ವಿಧಿಸಿದೆ.

ಪ್ರಕರಣ ರದ್ದು ಕೋರಿ ಎರಡನೇ ಆರೋಪಿಯಾಗಿರುವ ಬಿಜೆಪಿ ಮುಖಂಡ ಡಿ.ಎಸ್‌. ವೀರಯ್ಯ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಡಿಡಿಯುಟಿಟಿಎಲ್‌ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಶಂಕರಪ್ಪ ಮತ್ತು ಮಾಜಿ ಅಧ್ಯಕ್ಷ ವೀರಯ್ಯ ಪಿತೂರಿ ನಡೆಸಿ ಕಂಪನಿಯ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬುದು ಆರೋಪವಾಗಿದೆ. ಈ ಪ್ರಕರಣದಲ್ಲಿ ಪ್ರಾಥಮಿಕ ತನಿಖೆ ನಡೆಸಿಲ್ಲ ಮತ್ತು ಭ್ರಷ್ಟಾಚಾರ ತಡೆ (ಪಿಸಿ) ಕಾಯ್ದೆ ಸೆಕ್ಷನ್‌ 17ಎ ಅಡಿ ಅನುಮತಿ ಪಡೆದಿಲ್ಲ. ಪ್ರಾಥಮಿಕ ತನಿಖೆ ನಡೆಸದೆಯೂ ಆರೋಪ ಪಟ್ಟಿಯಲ್ಲಿ ವೀರಯ್ಯ ಅವರನ್ನು ಆರೋಪಿಯನ್ನಾಗಿಸಲಾಗಿದೆ ಎಂದು ಆಕ್ಷೇಪಿಸಿದರು.

ಪ್ರಕರಣ ಸಂಬಂಧ 2023ರ ಸೆಪ್ಟೆಂಬರ್‌ನಲ್ಲಿ ಅನಾಮಿಕರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿತ್ತು. ಇದಾದ ಬಳಿಕ 9 ತಿಂಗಳು ತನಿಖೆ ನಡೆಸಲಾಗಿದೆ. ಆನಂತರ ಪಿಸಿ ಕಾಯ್ದೆ ಸೆಕ್ಷನ್‌ 17ಎ ಅಡಿ ಪೂರ್ವಾನುಮತಿ ಕೋರಿದ್ದು, ಮೊದಲ ಆರೋಪಿ ಶಂಕರಪ್ಪ ವಿರುದ್ಧ ಪೂರ್ವಾನುಮತಿ ದೊರೆತಿದೆ. ಆದರೆ, ವೀರಯ್ಯ ವಿಚಾರದಲ್ಲಿ ಯಾವುದೇ ಪ್ರಕ್ರಿಯೆ ಪಾಲಿಸಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರ ವೀರಯ್ಯ ವಿರುದ್ಧದ ಹೆಚ್ಚುವರಿ ತನಿಖೆ ಮತ್ತು ಈಗಾಗಲೇ ಸಲ್ಲಿಕೆ ಮಾಡಲಾಗಿರುವ ಆರೋಪ ಪಟ್ಟಿಗೆ ತಡೆಯಾಜ್ಞೆ ವಿಧಿಸಿ, ವಿಚಾರಣೆಯನ್ನು ಡಿಸೆಂಬರ್‌ 19ಕ್ಕೆ ಮುಂದೂಡಿತು.

Related Articles

Comments (0)

Leave a Comment