ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಪಾತ್ರವಿಲ್ಲ – ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್
- by Jagan Ramesh
- December 3, 2024
- 177 Views
ಬೆಂಗಳೂರು: ರೇಣುಕಾಸ್ವಾಮಿ ಅಪಹರಣ ಮತ್ತು ಕೊಲೆಯಲ್ಲಿ ಪವಿತ್ರಾಗೌಡ ಅವರ ಪಾತ್ರವಿಲ್ಲ. ಆದ್ದರಿಂದ, ಅವರಿಗೆ ಜಾಮೀನು ಮಂಜೂರು ಮಾಡಬೇಕು ಎಂದು ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್ ಹೈಕೋರ್ಟ್‌ಗೆ ಮನವಿ ಮಾಡಿದರು.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್, ಪವಿತ್ರಾಗೌಡ, ಆರ್. ನಾಗರಾಜು, ಎಂ. ಲಕ್ಷ್ಮಣ್, ಅನು ಕುಮಾರ್ ಹಾಗೂ ಜಗದೀಶ್ ಸಲ್ಲಿಸಿರುವ ಜಾಮೀನು ಅರ್ಜಿಗಳ ಕುರಿತು ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ಮೊದಲನೇ ಆರೋಪಿ ಪವಿತ್ರಾಗೌಡ ಪರ ವಾದ ಮಂಡಿಸಿದ ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್, ರೇಣುಕಾಸ್ವಾಮಿ ಕೊಲೆಗೆ ಯಾವುದೇ ಪಿತೂರಿ ನಡೆದಿಲ್ಲ. ಪಟ್ಟಣಗೆರೆಯ ಜಯಣ್ಣ ಶೆಡ್‌ಗೆ ಕರೆತಂದಾಗ ಪವಿತ್ರಾಗೌಡ ಅವರು ದರ್ಶನ್ ಜತೆ ತೆರಳಿ ಆತನಿಗೆ ಚಪ್ಪಲಿಯಲ್ಲಿ ಹೊಡೆದು, ಅಲ್ಲಿಂದ ಹೊರಟು ಹೋಗಿದ್ದಾರೆ. ಆನಂತರ, ಏನಾಗಿದೆ ಎಂಬುದೂ ಅವರಿಗೆ ಗೊತ್ತಿಲ್ಲ ಎಂದರು.
ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಕರೆತರುವಾಗ ಅವರೆಲ್ಲರೂ ಬೆಂಗಳೂರು-ತುಮಕೂರು ರಸ್ತೆಯ ದುರ್ಗಾ ಬಾರ್ ಮತ್ತು ರೆಸ್ಟೋರೆಂಟ್‌ನಲ್ಲಿ ಊಟ ಸೇವಿಸಿದ್ದಾರೆ. ರೆಸ್ಟೋರೆಂಟ್ ಉಸ್ತುವಾರಿ ಶಿವಕುಮಾರ್ ಹೇಳಿಕೆ ನೋಡಿದರೆ ರೇಣುಕಸ್ವಾಮಿಯ ಅಪಹರಣವಾಗಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಹಾಗೆಯೇ, ನಟ ಚಿಕ್ಕಣ್ಣ, ನವೀನ್ ಕುಮಾರ್, ಯಶಸ್ ಸೂರ್ಯ ಅವರ ಹೇಳಿಕೆಗಳನ್ನು ಪರಿಶೀಲಿಸಿದರೆ ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ನಲ್ಲಿ ರೇಣುಕಾಸ್ವಾಮಿ ಕೊಲೆ ಮಾಡುವ ಸಂಬಂಧ ಯಾವುದೇ ಮಾತುಕತೆ ನಡೆದಿಲ್ಲ ಎಂಬುದು ಸ್ಪಷ್ಟವಾಗಿದೆ. ಯಾವ ಪ್ರತ್ಯಕ್ಷ ಸಾಕ್ಷಿಯೂ ಪವಿತ್ರಾಗೌಡ ಅವರತ್ತ ಬೆರಳು ಮಾಡಿಲ್ಲ ಎಂಬುದನ್ನು ಪರಿಗಣಿಸಿ ಜಾಮೀನು ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.
ದರ್ಶನ್ ಕಾರು ಚಾಲಕ ಎಂ. ಲಕ್ಷ್ಮಣ್ ಪರವಾಗಿ ಹಿರಿಯ ವಕೀಲ ಎಂ. ಅರುಣ್ ಶ್ಯಾಮ್ ವಾದ ಮಂಡಿಸಿ, ಗೋಲ್ಡನ್ ಅವರ್‌ನಲ್ಲಿ ಸರಿಯಾದ ರೀತಿಯಲ್ಲಿ ತನಿಖೆ ಮಾಡಲಾಗಿಲ್ಲ. ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆ ವಿಳಂಬವಾಗಿರುವುದರಿಂದ ತನಿಖೆ ನಂಬಲಾಗುತ್ತಿಲ್ಲ. ಅನಾಮಧೇಯರು ಎಂದು ಎಫ್‌ಐಆರ್ ಮಾಡಲಾಗಿದೆ. ಆರೋಪಿಗಳು ಗೊತ್ತು ಎಂದು ಯಾವ ಸಾಕ್ಷಿಯೂ ಹೇಳಿಲ್ಲ. ಹೇಳಿಕೆ ದಾಖಲಿಸುವುದು ವಿಳಂಬವಾಗಿರುವುದಕ್ಕೆ ಯಾವುದೇ ವಿವರಣೆ ನೀಡಿಲ್ಲ. ಗುರುತು ಪತ್ತೆ ಪರೇಡ್ ಸಹ ಮಾಡಿಲ್ಲ. ಸಿಸಿ ಕ್ಯಾಮರಾ ವಿಡಿಯೊ ತುಣುಕುಗಳಿಗೆ ಸಂಬಂಧಿಸಿದಂತೆ ಸೈಬರ್ ಕಾನೂನಿನ ವರದಿ ಪಡೆದಿಲ್ಲ ಎಂದು ಆಕ್ಷೇಪಿಸಿದರು.
ಪ್ರಕರಣದ ಸಂಬಂಧ ಜಪ್ತಿ ಮಾಡಿರುವ ಪ್ಯಾಂಟ್, ಶರ್ಟ್ ಮತ್ತು ಚಪ್ಪಲಿಯಲ್ಲಿ ರಕ್ತದ ಕಲೆ ಇತ್ತು ಎಂಬ ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ವರದಿಯು ಅಂತಿಮವಲ್ಲ. ಅದನ್ನೂ ತಿರುಚುವ ಸಾಧ್ಯತೆ ಇದೆ ಎಂಬುದಕ್ಕೆ ಹೈಕೋರ್ಟ್‌ನ ಸಮನ್ವಯ ಪೀಠದ ಆದೇಶವಿದೆ. ಲಕ್ಷ್ಮಣ್ ಅವರು ದರ್ಶನ್ ಕಾರು ಚಾಲಕನಾಗಿರುವುದರಿಂದ ಮೊದಲಿನಿಂದಲೂ ಆತನಿಗೆ ಕರೆ ಮಾಡುತ್ತಿದ್ದರು. ಇಲ್ಲಿ ಕೊಲೆ ಮಾಡುವ ಸಮಾನ ಉದ್ದೇಶ ಕಾಣುತ್ತಿಲ್ಲ. ಹೆಚ್ಚೆಂದರೆ ಐಪಿಸಿ ಸೆಕ್ಷನ್ 304 ಅನ್ವಯವಾಗುತ್ತದೆ. ಒಟ್ಟಾರೆ 260 ಸಾಕ್ಷಿಗಳಿರುವುದರಿಂದ ವಿಚಾರಣೆಯು ವಿಳಂವಾಗುತ್ತದೆ. ಆದ್ದರಿಂದ, ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದರು.
ವಾದ ಆಲಿಸಿದ ನ್ಯಾಯಪೀಠ, ವಿಚಾರಣೆಯನ್ನು ಶುಕ್ರವಾರಕ್ಕೆ (ಡಿಸೆಂಬರ್ 6) ಮುಂದೂಡಿತು.
Related Articles
Thank you for your comment. It is awaiting moderation.
Comments (0)