ಚುನಾವಣಾ ಬಾಂಡ್ ಮೂಲಕ ಹಣ ಸುಲಿಗೆಗೆ ಇಡಿ ದುರ್ಬಳಕೆ ಆರೋಪ; ನಳೀನ್ ಕುಮಾರ್ ಕಟೀಲ್ ವಿರುದ್ಧದ ಎಫ್ಐಆರ್ ರದ್ದು
- by Jagan Ramesh
- December 3, 2024
- 208 Views
ಬೆಂಗಳೂರು: ಚುನಾವಣಾ ಬಾಂಡ್ಗಳ ಮೂಲಕ ಬಹುಕೋಟಿ ದೇಣಿಗೆ ಪಡೆಯಲು ಜಾರಿ ನಿರ್ದೇಶನಾಲಯವನ್ನು (ಇಡಿ) ದುರ್ಬಳಕೆ ಮಾಡಿಕೊಂಡ ಆರೋಪ ಸಂಬಂಧ ಬಿಜೆಪಿ ರಾಜ್ಯ ಘಟಕದ ಮಾಜಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಿರುದ್ಧ ದಾಖಲಾಗಿದ್ದ ಎಫ್ಐಆರ್ ರದ್ದುಪಡಿಸಿ ಹೈಕೋರ್ಟ್ ಆದೇಶಿಸಿದೆ.
ಎಫ್ಐಆರ್ ರದ್ದು ಕೋರಿ ಪ್ರಕರಣದಲ್ಲಿ 4ನೇ ಆರೋಪಿಯಾದ ನಳೀನ್ ಕುಮಾರ್ ಕಟೀಲ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ.
ಅರ್ಜಿದಾರರ ವಿರುದ್ಧ ಬೆಂಗಳೂರಿನ ತಿಲಕ್ ನಗರ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ಮತ್ತು ಆ ಕುರಿತ ನಗರದ 42ನೇ ಎಸಿಎಂಎಂ ಕೋರ್ಟ್ನ (ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ) ವಿಚಾರಣೆ ರದ್ದುಪಡಿಸಲಾಗುತ್ತಿದೆ ಎಂದು ನ್ಯಾಯಾಲಯ ಹೇಳಿದೆ.
ಹೈಕೋರ್ಟ್ ಆದೇಶದಲ್ಲೇನಿದೆ?
ಪ್ರಕರಣದಲ್ಲಿ ಆರೋಪಿಗಳು ಇಡಿ ಅಧಿಕಾರಿಗಳಿಂದ ಖಾಸಗಿ ಕಂಪನಿಗಳ ಮೇಲೆ ದಾಳಿ ನಡೆಸುವ ಮೂಲಕ ಕಂಪನಿಗಳ ಅಧಿಕಾರಿಗಳಲ್ಲಿ ಭಯ ಹುಟ್ಟಿಸಿ ಬಲವಂತವಾಗಿ ಕೋಟ್ಯಂತರ ಮೌಲ್ಯದ ಚುನಾವಣಾ ಬಾಂಡ್ ಖರೀದಿಸುವಂತೆ ಮಾಡಿದ್ದಾರೆ ಎಂಬ ಆರೋಪವಿದೆ. ಅದಕ್ಕಾಗಿ ಎಸಿಎಂಎಂ ಕೋರ್ಟ್ ನಿರ್ದೇಶನದ ಮೇರೆಗೆ ಆರೋಪಿಗಳ ವಿರುದ್ಧ ಪೊಲೀಸರು ಐಪಿಸ ಸೆಕ್ಷನ್ 383, 120-ಬಿ ಅಡಿಯಲ್ಲಿ ಸುಲಿಗೆ ಮತ್ತು ಅಪರಾಧಿಕ ಒಳಸಂಚು ಅಪರಾಧದಡಿ ಎಫ್ಐಆರ್ ದಾಖಲಿಸಿದ್ದಾರೆ. ಆದರೆ, ಪ್ರಕರಣ ದಾಖಲೆಗಳನ್ನು ಪರಿಶೀಲಸಿದರೆ, ಅರ್ಜಿದಾರರ ಮೇಲಿನ ಆರೋಪಗಳಲ್ಲಿ ಸುಲಿಗೆ ಅಪರಾಧದ ಅಂಶಗಳು ಇಲ್ಲ. ಸುಲಿಗೆ ಆರೋಪವೇ ಸಾಬೀತಾಗದೆ ಇದ್ದಾಗ ಅಪರಾಧಿಕ ಒಳಸಂಚು ಪ್ರಕರಣವೂ ಅಸ್ತಿತ್ವ ಕಳೆದುಕೊಳ್ಳುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ನೊಂದವರು ಮಾತ್ರ ಸುಲಿಗೆ ದೂರು ದಾಖಲಿಸಬಹುದು. ಪ್ರಕರಣದಲ್ಲಿ ದೂರುದಾರ ನೊಂದ ವ್ಯಕ್ತಿ ಅಲ್ಲ. ಅವರಿಗೆ ಯಾವುದೇ ಹಾನಿಯಾಗಿಲ್ಲ ಮತ್ತು ಅವರು ಭೀತಿಗೂ ಒಳಗಾಗಿಲ್ಲ. ಆದ್ದರಿಂದ, ಖಾಸಗಿ ದೂರು ದಾಖಲಿಸಲು ಅವರು ಅರ್ಹರಾಗಿಲ್ಲ. ಈ ಅಂಶವನ್ನು ಪರಿಗಣಿಸದೆ ವಿಚಾರಣಾ ನ್ಯಾಯಾಲಯ ಪ್ರಕರಣದ ತನಿಖೆಗೆ ಆದೇಶಿಸಿದೆ. ಈ ಆದೇಶ ಮಾಡುವಾಗ ಎಸಿಎಂಎಂ ಕೋರ್ಟ್ ಸೂಕ್ತ ರೀತಿಯಲ್ಲಿ ವಿವೇಚನೆ ಬಳಸಿಲ್ಲ. ಸುಲಿಗೆ ದೂರು ನೀಡಿದಾಕ್ಷಣ ಮ್ಯಾಜಿಸ್ಟ್ರೇಟ್ ರಬ್ಬರ್ ಸ್ಟಾಂಪ್ ಅಂತೆ ಆಗಬಾರದು. ದೂರಿನಲ್ಲಿರುವ ಆರೋಪಗಳನ್ನು ಪರಿಗಣಿಸಿದರೂ ಅದು ಅಪರಾಧವಾಗುವುದಿಲ್ಲ. ಮೇಲ್ನೋಟಕ್ಕೆ ದೂರಿನ ಆರೋಪಗಳಲ್ಲಿ ಅಪರಾಧದ ಅಂಶಗಳು ಕಂಡುಬರದೇ ಇದ್ದಾಗ, ಅಂತಹ ದೂರುಗಳನ್ನು ಮೊಗ್ಗಿನಲ್ಲಿಯೇ ಚಿವುಟಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಹೈಕೋರ್ಟ್, ಕಟೀಲ್ ವಿರುದ್ಧದ ಎಫ್ಐಆರ್ ರದ್ದುಪಡಿಸಿದೆ.
ಪ್ರಕರಣವೇನು?
ಚುನಾವಣಾ ಬಾಂಡ್ ಮೂಲಕ ಕೋಟ್ಯಂತರ ರೂ.ಗಳನ್ನು ದೇಣಿಗೆ ಹೆಸರಿನಲ್ಲಿ ಸುಲಿಗೆ ಮಾಡಲಾಗಿದೆ ಎಂದು ಆರೋಪಿಸಿ ಬೆಂಗಳೂರಿನ ಜನಾಧಿಕಾರ ಸಂಘರ್ಷ ಪರಿಷತ್ನ ಸಹ ಅಧ್ಯಕ್ಷರಾಗಿರುವ ಆದರ್ಶ್ ಆರ್. ಐಯ್ಯರ್ ಎಸಿಎಂಎಂ ಕೋರ್ಟ್ಗೆ ಖಾಸಗಿ ದೂರು ಸಲ್ಲಿಸಿದ್ದರು. ಆ ದೂರು ಪರಿಗಣಿಸಿದ್ದ ನ್ಯಾಯಾಲಯ 2024ರ ಸೆಪ್ಟೆಂಬರ್ 27ರಂದು ತನಿಖೆಗೆ ಆದೇಶಿಸಿತ್ತು. ಇದರಿಂದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಬಿಜೆಪಿ ರಾಜ್ಯ ಘಟಕದ ಮಾಜಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿರುದ್ಧ ಸುಲಿಗೆ, ಅಪರಾಧಿಕ ಒಳಸಂಚು ಅಪರಾಧದಡಿ ತಿಲಕ್ ನಗರ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಇದೀಗ, ನಳೀನ್ ಕುಮಾರ್ ಕಟೀಲ್ ವಿರುದ್ಧದ ಎಫ್ಐಆರ್ ಅನ್ನು ಹೈಕೋರ್ಟ್ ರದ್ದುಪಡಿಸಿರುವುದರಿಂದ, ಈ ಆದೇಶ ಪ್ರಕರಣದ ಇತರ ಆರೋಪಿಗಳಾಗಿರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಬಿ.ವೈ.ವಿಜೇಂದ್ರ ಅವರಿಗೂ ಅನ್ವಯವಾಗುವ ಸಾಧ್ಯತೆಯಿದೆ.
Related Articles
Thank you for your comment. It is awaiting moderation.
Comments (0)