ಬಿಪಿ ಏರಿಳಿತದಿಂದಾಗಿ ಶಸ್ತ್ರಚಿಕಿತ್ಸೆ ಬಗ್ಗೆ ನಿರ್ಧರಿಸಿಲ್ಲ; ದರ್ಶನ್ ಪರ ವಕೀಲರಿಂದ ಹೈಕೋರ್ಟ್‌ಗೆ ಮಾಹಿತಿ

ಬೆಂಗಳೂರು: ಬೆನ್ನುಹುರಿ ಸಮಸ್ಯೆಯ ಕಾರಣಕ್ಕೆ ವೈದ್ಯಕೀಯ ಜಾಮೀನಿನ ಮೇಲೆ ಹೊರಗಿರುವ ನಟ ದರ್ಶನ್‌ ಅವರ ರಕ್ತದೊತ್ತಡದಲ್ಲಿ ಏರಿಳಿತವಾಗುತ್ತಿರುವುದರಿಂದ ಶಸ್ತ್ರಚಿಕಿತ್ಸೆಯ ಬಗ್ಗೆ ವೈದ್ಯರು ಇನ್ನೂ ನಿರ್ಧರಿಸಿಲ್ಲ ಎಂದು ಹಿರಿಯ ವಕೀಲ ಸಿ.ವಿ. ನಾಗೇಶ್‌ ಹೈಕೋರ್ಟ್‌ಗೆ ತಿಳಿಸಿದರು.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್‌, ಪವಿತ್ರಾ ಗೌಡ, ಆರ್. ನಾಗರಾಜು, ಎಂ. ಲಕ್ಷ್ಮಣ್, ಅನು ಕುಮಾರ್‌ ಹಾಗೂ ಜಗದೀಶ್‌ ಸಲ್ಲಿಸಿರುವ ಜಾಮೀನು ಅರ್ಜಿಗಳನ್ನು ನ್ಯಾಯಮೂರ್ತಿ ಎಸ್‌. ವಿಶ್ವಜಿತ್‌ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಈ ವೇಳೆ ನ್ಯಾಯಪೀಠ ದರ್ಶನ್‌ ಪರ ಹಿರಿಯ ವಕೀಲ ಸಿ.ವಿ. ನಾಗೇಶ್‌ ಅವರನ್ನು ಕುರಿತು, ದರ್ಶನ್‌ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲು ಯಾವುದೇ ಸಮಸ್ಯೆಯಿಲ್ಲ ಎಂದು ವೈದ್ಯರು ನೀಡಿರುವ ಸರ್ಟಿಫಿಕೇಟ್‌ನಲ್ಲಿ ಇದೆಯಲ್ಲ ಎಂದು ಪ್ರಶ್ನಿಸಿತು.

ಇದಕ್ಕೆ ಪ್ರತಿಕ್ರಿಯಿಸಿದ ಸಿ.ವಿ. ನಾಗೇಶ್‌, ದರ್ಶನ್‌ಗೆ ಎಂಆರ್‌ಐ ಮಾಡಿಸಲಾಗಿದೆ. ಅವರ ರಕ್ತದೊತ್ತಡದಲ್ಲಿ ಏರುಪೇರಾಗುತ್ತಿರುವ ಕಾರಣ ವೈದ್ಯರು ಅವರಿಗೆ ಶಸ್ತ್ರಚಿಕಿತ್ಸೆ ಮಾಡಿಲ್ಲ. ಯಾವಾಗ ಶಸ್ತ್ರಚಿಕಿತ್ಸೆ ಮಾಡಬೇಕು ಎಂಬುದನ್ನು ವೈದ್ಯರು ನಿರ್ಧರಿಸಬೇಕಿದೆ ಎಂದರು.

ದರ್ಶನ್ ವಕೀಲರ ವಾದ ಪೂರ್ಣ:
ರೇಣುಕಾಸ್ವಾಮಿಯನ್ನು ಕೊಲೆ ಮಾಡುವ ಉದ್ದೇಶ ದರ್ಶನ್ ಅವರಿಗಿದ್ದರೆ ಆತನಿಗೆ ನೀರು ಕೊಡಿ, ಊಟ ತಂದು ಕೊಡಿ, ಆತನ ಫೋಟೊ ತೆಗೆಯಿರಿ, ವಿಡಿಯೊ ಮಾಡಿ, ಆತನನ್ನು ಪೊಲೀಸ್‌ ಠಾಣೆಗೆ ಕರೆದುಕೊಂಡು ಹೋಗಿ ಬಿಡಿ ಎಂದು ಹೇಳುತ್ತಿದ್ದರೆ? ಇದು ದರ್ಶನ್‌ ನಡತೆಯಾಗಿದ್ದು, ದಾಖಲೆಯ ರೂಪದಲ್ಲಿ ಸಾಕ್ಷ್ಯವಿದೆ ಎಂದು ಪ್ರತಿಪಾದಿಸಿದರಲ್ಲದೆ, ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆಯನ್ನು ತಡವಾಗಿ ದಾಖಲಿಸಲಾಗಿದೆ. ಅವರ ಹೇಳಿಕೆಗಳಲ್ಲಿ ವಿರೋಧಭಾಸವಿದೆ ಎಂಬುದನ್ನು ಸಿಆರ್‌ಪಿಸಿ ಸೆಕ್ಷನ್‌ 164ರ ಅಡಿಯ ಹೇಳಿಕೆಗಳನ್ನು ಉಲ್ಲೇಖಿಸಿ ವಾದ ಪೂರ್ಣಗೊಳಿಸಿದರು.

ಶುಕ್ರವಾರಕ್ಕೆ ವಿಚಾರಣೆ ಮುಂದೂಡಿಕೆ:
ಪ್ರಕರಣದ 11ನೇ ಆರೋಪಿಯಾಗಿರುವ ದರ್ಶನ್‌ ವ್ಯವಸ್ಥಾಪಕ ಆರ್‌. ನಾಗರಾಜು ಪರ ವಾದ ಆರಂಭಿಸಿರುವ ಹಿರಿಯ ವಕೀಲ ಸಂದೇಶ್‌ ಚೌಟ, ಯಾವ ಕಾರಣಕ್ಕಾಗಿ ಆರೋಪಿಗಳನ್ನು ಬಂಧಿಸಲಾಗಿದೆ ಎಂಬ ವಿಚಾರವನ್ನು ರಿಮ್ಯಾಂಡ್‌ ಅರ್ಜಿಯಲ್ಲಿ ತನಿಖಾಧಿಕಾರಿಗಳು ಉಲ್ಲೇಖಿಸಿಲ್ಲ. ಈ ವಿಚಾರವನ್ನು ವಿಚಾರಣಾ ನ್ಯಾಯಾಲಯವು ಪರಿಗಣಿಸಿಲ್ಲ ಎಂದು ಆಕ್ಷೇಪಿಸಿದರು. ದಿನದ ಕಲಾಪದ ಅವಧಿ ಮುಗಿದ ಹಿನ್ನೆಲೆಯಲ್ಲಿ ನ್ಯಾಯಾಲಯ ವಿಚಾರಣೆಯನ್ನು ಡಿಸೆಂಬರ್‌ 29ರ ಮಧ್ಯಾಹ್ನಕ್ಕೆ ಮುಂದೂಡಿತು.

Related Articles

Comments (0)

Leave a Comment