ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ; ಜಿ.ಪಂ. ಮಾಜಿ ಸದಸ್ಯೆ ಮೇಲೆ ಅತ್ಯಾಚಾರ ಪ್ರಕರಣ;

ಬೆಂಗಳೂರು: ಹಾಸನ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಮೇಲೆ ಅತ್ಯಾಚಾರವೆಸಗಿದ ಆರೋಪ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ಶುಕ್ರವಾರ ವಜಾಗೊಳಿಸಿದೆ.

ಪ್ರಜ್ವಲ್‌ ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ಪ್ರಕಟಿಸಿತು.

ಅರ್ಜಿದಾರರ ಪರ ವಕೀಲ ಜಿ. ಅರುಣ್‌ ಅವರು ಅರ್ಜಿ ಹಿಂಪಡೆಯಲಾಗುವುದು. ಈ ಪ್ರಕರಣದಲ್ಲಿ ಆರೋಪ ಪಟ್ಟಿ ನೀಡಲಾಗಿಲ್ಲ ಎಂದರು. ಆಗ ನ್ಯಾಯಪೀಠ, ಹಾಲಿ ಪ್ರಕರಣದಲ್ಲಿ ಆರೋಪ ಪಟ್ಟಿಯನ್ನು ಪರಿಗಣಿಸಿಯೇ ಇಲ್ಲ. ದೂರನ್ನಷ್ಟೇ ಆಧರಿಸಿ, ವಜಾ ಮಾಡಲಾಗಿದೆ ಎಂದು ತಿಳಿಸಿತು.

ಪ್ರಕರಣವೇನು?
2021ರಲ್ಲಿ ಬಿಸಿಎಂ ಹಾಸ್ಟೆಲ್‌ನಲ್ಲಿ ಬಾಲಕಿಯರಿಗೆ ಹಾಸ್ಟೆಲ್‌ ಸೌಲಭ್ಯ ಕಲ್ಪಿಸುವ ಕುರಿತು ಚರ್ಚಿಸಲು ಪ್ರಜ್ವಲ್‌ ಅವರ ಕಚೇರಿಗೆ ತೆರಳಿದ್ದಾಗ, ಇತರ ಕೆಲಸಗಳ ಮಧ್ಯೆ ಬಿಡುವಿರದ ಕಾರಣ ಮರುದಿನಬರುವಂತೆ ಸಂತ್ರಸ್ತೆಗೆ ಪ್ರಜ್ವಲ್‌ ಸೂಚಿಸಿದ್ದರು. ಅದರಂತೆ, ಮರುದಿನ ತೆರಳಿದಾಗ ಗನ್‌ ತೋರಿಸಿ, ಬೆದರಿಸಿ ಅತ್ಯಾಚಾರ ಎಸಗಿದ್ದರು. ಈ ಕೃತ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು. ಆನಂತರ, ಹಲವು ಬಾರಿ ವಿಡಿಯೋ ಕರೆ ಮಾಡಿ ನಗ್ನವಾಗುವಂತೆ ಸೂಚಿಸಿ, ವಿಡಿಯೋ ರೆಕಾರ್ಡ್‌ ಮಾಡಿಕೊಂಡಿದ್ದರು. ಈ ವಿಚಾರ ಬಹಿರಂಗಪಡಿಸಿದರೆ ಗಂಭೀರ ಕ್ರಮದ ಬೆದರಿಕೆ ಹಾಕಿದ್ದರು ಎಂದು ಸಂತ್ರಸ್ತೆ ದೂರಿದ್ದರು.

ಪ್ರಕರಣದ ಸಂಬಂಧ 2024ರ ಮೇ 1ರಂದು ವಿಶೇಷ ತನಿಖಾ ದಳ (ಎಸ್‌ಐಟಿ) ಮುಖ್ಯಸ್ಥರಿಗೆ ಸಂತ್ರಸ್ತೆ ದೂರು ನೀಡಿದ್ದರು. ಇದರ ಆಧಾರದಲ್ಲಿ ಬೆಂಗಳೂರಿನ ಸಿಐಡಿಯ ಸೈಬರ್‌ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ಗಳಾದ 376(2)(ಎನ್‌), 506, 354ಎ(1)(ii), 354ಬಿ, 354ಸಿ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್‌ 66ಇ ಅಡಿ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಪ್ರಜ್ವಲ್ ಹೈಕೋರ್ಟ್ ಮೊರೆ ಹೋಗಿದ್ದರು.

ಈ ಹಿಂದೆ, ಅಕ್ಟೋಬರ್‌ 21ರಂದು ಪ್ರಜ್ವಲ್‌ ಅವರ ಒಂದು ಜಾಮೀನು ಮತ್ತು ಎರಡು ನಿರೀಕ್ಷಣಾ ಜಾಮೀನು ಅರ್ಜಿಗಳನ್ನೂ ಸಹ ಹೈಕೋರ್ಟ್‌ ವಜಾ ಮಾಡಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂಕೋರ್ಟ್‌ ಸಹ ವಜಾ ಮಾಡಿತ್ತು.

Related Articles

Comments (0)

Leave a Comment