- Uncategorized
- ಹೈಕೋರ್ಟ್
- Like this post: 0
ವಕ್ಫ್ ಮಂಡಳಿಗೆ ವಿವಾಹ ನೋಂದಣಿ ಪ್ರಮಾಣಪತ್ರ ವಿತರಣೆಗೆ ಅವಕಾಶ; ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ
- by Jagan Ramesh
- November 21, 2024
- 353 Views
ಬೆಂಗಳೂರು: ಮುಸ್ಲಿಮರ ವಿವಾಹ ನೋಂದಣಿ ಪ್ರಮಾಣಪತ್ರ ವಿತರಿಸಲು ಕರ್ನಾಟಕ ರಾಜ್ಯ ವಕ್ಫ್ ಮಂಡಳಿಗೆ ಅನುವು ಮಾಡಿಕೊಟ್ಟು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ 2025ರ ಜನವರಿ 7ರವರೆಗೆ ತಡೆ ನೀಡಿ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರದ ಅಲ್ಪಸಂಖ್ಯಾತ, ವಕ್ಫ್ ಮತ್ತು ಹಜ್ ಇಲಾಖೆ 2023ರ ಸೆಪ್ಟೆಂಬರ್ 30ರಂದು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಬೆಂಗಳೂರಿನ ಆಲಂ ಪಾಷಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಗುರುವಾರ ವಿಚಾರಣೆ ನಡಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಈ ಮಧ್ಯಂತರ ಆದೇಶ ಮಾಡಿತು.
ನ್ಯಾಯಾಲಯದ ಮುಂದಿನ ಆದೇಶದವರೆಗೆ ಸರ್ಕಾರ ತನ್ನ ಆದೇಶವನ್ನು ಅಮಾನತಿನಲ್ಲಿಡಬೇಕು. ವಕ್ಫ್ ಮಂಡಳಿ ಯಾವುದೇ ವಿವಾಹ ನೋಂದಣಿ ಪ್ರಮಾಣಪತ್ರಗಳನ್ನು ವಿತರಿಸಬಾರದು. ಯಾವುದೇ ಅಧಿಕಾರ ಇಲ್ಲದೆ ವಕ್ಫ್ ಮಂಡಳಿ ಆ ರೀತಿ ಮದುವೆ ಪ್ರಮಾಣಪತ್ರ ವಿತರಣೆ ಮಾಡುವುದನ್ನು ಒಪ್ಪಲಾಗದು ಎಂದ ಹೈಕೋರ್ಟ್, ಅರ್ಜಿಯ ಮುಂದಿನ ವಿಚಾರಣೆಯನ್ನು ಜನವರಿ 7ಕ್ಕೆ ನಿಗದಿಪಡಿಸಿತು.
ಕಳೆದ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ರಾಜ್ಯ ಸರ್ಕಾರದ ಅಲ್ಪಸಂಖ್ಯಾತ, ವಕ್ಫ್ ಮತ್ತು ಹಜ್ ಇಲಾಖೆ 2023ರ ಸೆ.30ರಂದು ಆದೇಶ ಹೊರಡಿಸಿ, ಮುಸ್ಲಿಂ ಸಮುದಾಯದವರ ವಿವಾಹ ನೋಂದಣಿ ಪ್ರಮಾಣಪತ್ರಗಳನ್ನು ವಿತರಿಸುವ ಅಧಿಕಾರವನ್ನು ವಕ್ಫ್ ಮಂಡಳಿಗೆ ನೀಡಿದೆ. ಇದು ವಕ್ಫ್ ಕಾಯ್ದೆ- 1995ರ ನಿಯಮಗಳಿಗೆ ವಿರುದ್ಧವಾಗಿದೆ. ಆದ್ದರಿಂದ, ಸರ್ಕಾರದ ಆದೇಶ ರದ್ದುಪಡಿಸಿ, ಮೊದಲಿದ್ದ ವ್ಯವಸ್ಥೆಯನ್ನೇ ಮುಂದುವರಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದ್ದರು.
ವಕ್ಫ್ ಮಂಡಳಿಗೆ ಇಂತಹ ಅಧಿಕಾರ ನೀಡಿರುವುದನ್ನು ಎಲ್ಲೂ ಕೇಳಿಲ್ಲ ಎಂದು ಮೌಖಿಕವಾಗಿ ನುಡಿದಿದ್ದ ನ್ಯಾಯಾಲಯ, ಸರ್ಕಾರ ಯಾವ ಕಾನೂನಿನಡಿ ಅಧಿಕಾರ ಬಳಸಿ ಇಂತಹ ಆದೇಶ ಹೊರಡಿಸಿದೆ ಎಂಬ ಬಗ್ಗೆ ಉತ್ತರ ನೀಡಬೇಕು ಎಂದು ಆದೇಶಿಸಿತ್ತು.
Related Articles
Thank you for your comment. It is awaiting moderation.
Comments (0)