ಶಾಸಕ ಎಸ್.ಆರ್. ವಿಶ್ವನಾಥ್ಗೆ ಕೊಲೆ ಬೆದರಿಕೆ; ಮೊದಲ ಆರೋಪಿ ವಿರುದ್ಧದ ಕೇಸ್ ರದ್ದತಿಗೆ ಹೈಕೋರ್ಟ್ ನಕಾರ
- by Jagan Ramesh
- November 21, 2024
- 158 Views
ಬೆಂಗಳೂರು: ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ಗೆ ಕೊಲೆ ಬೆದೆರಿಕೆಯೊಡ್ಡಿದ ಆರೋಪ ಸಂಬಂಧ ಎಂ.ಎನ್. ಗೋಪಾಲಕೃಷ್ಣ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಪ್ರಕರಣ ರದ್ದುಕೋರಿ ಮೊದಲನೇ ಆರೋಪಿಯಾದ ಹೆಸರಘಟ್ಟ ಹೋಬಳಿಯ ಗೋಪಾಲಕೃಷ್ಣ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ಜಿ. ಉಮಾ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದೆ.
ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ತನಿಖಾಧಿಕಾರಿ ಪೆನ್ ಡ್ರೈವ್, ಪತ್ರ ಸೇರಿ ಸಾಕಷ್ಟು ಸಾಕ್ಷ್ಯ ಸಂಗ್ರಹ ಮಾಡಿದ್ದಾರೆ. ಮೇಲ್ನೋಟಕ್ಕೆ ಆರೋಪಿಯ ವಿರುದ್ಧದ ಆರೋಪಗಳಿಗೆ ಸಾಕ್ಷ್ಯಗಳಿವೆ ಎನ್ನುವುದು ಕಂಡು ಬರುತ್ತಿದೆ. ವಿಸ್ತೃತ ತನಿಖೆಯಿಂದ ಮಾತ್ರ ಅರ್ಜಿದಾರರ ವಿರುದ್ಧ ದೂರುದಾರ ವಿಶ್ವನಾಥ್ ಮಾಡಿರುವ ಆರೋಪಗಳ ಸತ್ಯಾಂಶ ಹೊರಬರಲು ಸಾಧ್ಯ. ಈ ಹಂತದಲ್ಲಿ ಕ್ರಿಮಿನಲ್ ಪ್ರಕ್ರಿಯೆ ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಈ ಹಿಂದೆ, ತಾಂತ್ರಿಕ ಕಾರಣಗಳಿಂದಾಗಿ ಪ್ರಕರಣವನ್ನು ನ್ಯಾಯಾಲಯ ರದ್ದುಗೊಳಿಸಿತ್ತು. ಅದೇ ಆಧಾರದಲ್ಲಿ ದೂರುದಾರರು ಮಾಡಿರುವ ಆರೋಪದಲ್ಲಿ ಹುರುಳಿಲ್ಲ. ಆದ್ದರಿಂದ, ಪ್ರಕರಣ ರದ್ದುಗೊಳಿಸಬೇಕೆಂದು ಅರ್ಜಿದಾರರು ಕೋರಿದ್ದಾರೆ. ಆದರೆ ಆ ವಾದವನ್ನು ಒಪ್ಪಲಾಗದು. ಆದ್ದರಿಂದ, ಅರ್ಜಿ ವಜಾಗೊಳಿಸುತ್ತಿರುವುದಾಗಿ ನ್ಯಾಯಾಲಯ ಆದೇಶದಲ್ಲಿ ಹೇಳಿದೆ. ಹೈಕೋರ್ಟ್ ಆದೇಶದಿಂದ ಪ್ರಕರಣದ ತನಿಖೆಯ ಹಾದಿ ಸುಗಮವಾಗಿದೆ.
ಪ್ರಕರಣವೇನು?
ಆರೋಪಿ ಎಂ.ಎನ್.ಗೋಪಾಲಕೃಷ್ಣ ಹಾಗೂ ಮತ್ತೊಬ್ಬ ವ್ಯಕ್ತಿ ವಿಶ್ವನಾಥ್ ಅವರನ್ನು ಮುಗಿಸುವುದಾಗಿ ಮಾತನಾಡಿದ್ದ ಸಂಭಾಷಣೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅದನ್ನು ಆಧರಿಸಿ ವಿಶ್ವನಾಥ್ 2021ರ ಡಿಸೆಂಬರ್ 1ರಂದು ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 120ಬಿ, 506ರಡಿ ದೂರು ದಾಖಲಿಸಿದ್ದರು. ಆ ದೂರು ಸಲ್ಲಿಸಿದ ದಿನವೇ ಶಾಸಕರ ಕಚೇರಿಗೆ ಒಂದು ಲಕೋಟೆ ಬಂದಿತ್ತು, ಅದರಲ್ಲಿ ಪೆನ್ ಡ್ರೈವ್ ಹಾಗೂ ಬೆದರಿಕೆ ಪತ್ರವಿತ್ತು. ಪೊಲೀಸರು ತನಿಖೆಗಾಗಿ ಅವುಗಳನ್ನೂ ವಶಕ್ಕೆ ಪಡೆದುಕೊಂಡಿದ್ದರು.
ಈ ಮಧ್ಯೆ, ತಮ್ಮ ವಿರುದ್ಧದ ದೂರು ರದ್ದು ಕೋರಿ ಗೋಪಾಲಕೃಷ್ಣ ಹೈಕೋರ್ಟ್ ಮೊರೆ ಹೋಗಿದ್ದರು. ಆ ಅರ್ಜಿಯನ್ನು 2022ರ ಸೆಪ್ಟೆಂಬರ್ 27ರಂದು ಮಾನ್ಯ ಮಾಡಿದ್ದ ನ್ಯಾಯಾಲಯ, ತಾಂತ್ರಿಕ ಕಾರಣಗಳಿಂದಾಗಿ ದೂರು ಸಲ್ಲಿಸಿರುವ ಪ್ರಕ್ರಿಯೆ ಸರಿಯಾಗಿಲ್ಲ. ಆದ್ದರಿಂದ, ಪ್ರಕರಣ ರದ್ದುಗೊಳಿಸಲಾಗುತ್ತಿದೆ. ಆದರೆ ಅರ್ಜಿದಾರರು ಹೊಸದಾಗಿ ದೂರು ಸಲ್ಲಿಸಲು ಸ್ವತಂತ್ರರು ಎಂದು ಆದೇಶಿಸಿತ್ತು.
ಆನಂತರ, ವಿಶ್ವನಾಥ್ ಅವರು ಆರೋಪಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು. ಆದರೆ, ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದ್ದರಿಂದ ಸಾಕ್ಷ್ಯಗಳನ್ನು ಆಧರಿಸಿ ಗೋಪಾಲಕೃಷ್ಣ ವಿರುದ್ಧ ವಿಚಾರಣಾ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ದೂರಿನ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಮೇಲ್ನೋಟಕ್ಕೆ ಆರೋಪದಲ್ಲಿ ಹುರುಳಿದೆ ಎಂದು ಅಭಿಪ್ರಾಯಪಟ್ಟು ಆರೋಪಿ ವಿರುದ್ಧ ತನಿಖೆ ನಡೆಸುವಂತೆ ರಾಜಾನುಕುಂಟೆ ಪೊಲೀಸರಿಗೆ ನಿರ್ದೇಶಿಸಿತ್ತು. ಇದರಿಂದ, ಮತ್ತೆ ಹೈಕೋರ್ಟ್ ಮೆಟ್ಟಿಲೇರಿದ್ದ ಗೋಪಾಲಕೃಷ್ಣ, ಪ್ರಕರಣ ರದ್ದುಪಡಿಸುವಂತೆ ಕೋರಿದ್ದರು.
Related Articles
Thank you for your comment. It is awaiting moderation.
Comments (0)