ಕಂಬಳದಿಂದ ಪಿಲಿಕುಳದಲ್ಲಿ ಪ್ರಾಣಿಗಳ ಮೇಲಿನ ಪರಿಣಾಮ ಅಧ್ಯಯನಕ್ಕೆ ಸಮಿತಿ ರಚನೆ; ಹೈಕೋರ್ಟ್ಗೆ ಸರ್ಕಾರದ ಮಾಹಿತಿ
- by Jagan Ramesh
- November 20, 2024
- 72 Views
ಬೆಂಗಳೂರು: ಮಂಗಳೂರಿನ ಪಿಲಿಕುಳದಲ್ಲಿ ಕಂಬಳ ಉತ್ಸವ ಆಯೋಜಿಸುವುದರಿಂದ ಅಲ್ಲಿನ ಜೈವಿಕ ಉದ್ಯಾನವನದ ಪ್ರಾಾಣಿಗಳಿಗೆ ತೊಂದರೆ ಆಗಲಿದೆಯೇ ಎಂಬ ಬಗ್ಗೆೆ ಅಧ್ಯಯನ ನಡೆಸಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ನಾಲ್ವರು ಸದಸ್ಯರ ತಾಂತ್ರಿಕ ಸಮಿತಿಯನ್ನು ರಚಿಸಿದ್ದಾರೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್ಗೆ ಮಾಹಿತಿ ನೀಡಿದೆ.
ಪಿಲಿಕುಳ ಜೈವಿಕ ಉದ್ಯಾನವನದ (ನಿಸರ್ಗಧಾಮ) ಬಳಿ ಕಂಬಳ ಆಯೋಜನೆ ಆಕ್ಷೇಪಿಸಿ ‘ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್’ (ಪೆಟಾ) ಸಂಸ್ಥೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ರಾಜ್ಯ ಸರ್ಕಾರದ ಪರವಾಗಿ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ, ಪಿಲಿಕುಳದ ಜೈವಿಕ ಉದ್ಯಾನವನದಲ್ಲಿ ಕಂಬಳ ಆಯೋಜನೆಯಿಂದ ಅಲ್ಲಿನ ಪ್ರಾಣಿಗಳಿಗೆ ತೊಂದರೆ ಆಗಲಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ. ಈ ಹಿನ್ನೆೆಲೆಯಲ್ಲಿ ಮೈಸೂರಿನ ಶ್ರೀಚಾಮರಾಜೇಂದ್ರ ಮೃಗಾಲಯದ ಉಪ ನಿರ್ದೇಶಕಿ ಸಿ.ವಿ. ದೀಪ, ಪಶುಸಂಗೋಪನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಮಂಗಳೂರು ಉಪ ನಿರ್ದೇಶಕ ಡಾ. ಅರುಣಕುಮಾರ್ ಶೆಟ್ಟಿ, ಎನ್ಐಟಿಕೆ ಸುರತ್ಕಲ್ನ ಪ್ರಾಧ್ಯಾಪಕ ಪ್ರೊ. ಶ್ರೀನಿಕೇತನ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಬೈಕಂಪಾಡಿ, ಮಂಗಳೂರು ಇಲ್ಲಿನ ಪರಿಸರ ಅಧಿಕಾರಿ ಲಕ್ಷ್ಮೀಕಾಂತ್ ಅವರನ್ನೊಳಗೊಂಡ ಸಮಿತಿ ರಚಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ನವೆಂಬರ್ 15ರಂದು ಆದೇಶ ಹೊರಡಿಸಿದ್ದಾರೆ ಎಂದು ನ್ಯಾಯಪೀಠದ ಗಮನಕ್ಕೆ ತಂದರಲ್ಲದೇ ಆ ಕುರಿತ ಆದೇಶ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.
ಸಮಿತಿಯಿಂದ ತಾಂತ್ರಿಕ ಅಧ್ಯಯನ:
ಜಿಲ್ಲಾಧಿಕಾರಿ ರಚಿಸಿರುವ ಸಮಿತಿಯು ಪಿಲಿಕುಳ ಕಂಬಳ ಉತ್ಸವ ನಡೆಯುವ ಸ್ಥಳ ಮತ್ತು ಜೈವಿಕ ಉದ್ಯಾನವನವನ್ನು ಪರಿಶೀಲನೆ ನಡೆಸಿ, ಕಂಬಳ ಆಯೋಜನೆಯಿಂದ ಅಲ್ಲಿನ ಜೈವಿಕ ಉದ್ಯಾನವನದ ಪ್ರಾಣಿಗಳ ಮೇಲೆ ಯಾವುದಾದರೂ ಪ್ರಭಾವ ಬೀರಲಿದೆಯೇ ಎಂಬ ಬಗ್ಗೆ ತಾಂತ್ರಿಕ ಅಧ್ಯಯನ ನಡೆಸಿ ಸ್ಪಷ್ಟ ಅಭಿಪ್ರಾಯದೊಂದಿಗೆ 2 ವಾರದೊಳಗೆ ವರದಿ ಸಲ್ಲಿಸಲಿದೆ. ಆ ವರದಿಯನ್ನು ನ್ಯಾಯಾಲಯದ ಮುಂದೆ ಮಂಡಿಸಲಾಗುವುದು ಎಂದು ತಿಳಿಸಿದರು.
ಅದನ್ನು ಪರಿಗಣಿಸಿ, ಅರ್ಜಿ ವಿಚಾರಣೆಯನ್ನು ಡಿಸೆಂಬರ್ 4ಕ್ಕೆೆ ಮುಂದೂಡಿದ ನ್ಯಾಯಪೀಠ, ಅರ್ಜಿಯಲ್ಲಿ ಹೊಸದಾಗಿ ಪ್ರತಿವಾದಿಗಳನ್ನಾಗಿ ಸೇರಿಸಲಾಗಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ಮತ್ತಿತರರಿಗೆ ನೋಟಿಸ್ ಜಾರಿಗೊಳಿಸಿತು.
Related Articles
Thank you for your comment. It is awaiting moderation.
Comments (0)