ಮುಡಾ ಬದಲಿ ನಿವೇಶನ ಹಂಚಿಕೆ ಹಗರಣ; ಸಿಎಂ ಸಿದ್ದರಾಮಯ್ಯ ಮೇಲ್ಮನವಿ ವಿಚಾರಣೆ ನ.23ಕ್ಕೆ ನಿಗದಿಪಡಿಸಿದ ಹೈಕೋರ್ಟ್

ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ತನಿಖೆಗೆ ಅನುಮತಿ ನೀಡಿ ಹೈಕೋರ್ಟ್‌ ಏಕಸದಸ್ಯ ನ್ಯಾಯಪೀಠ ಹೊರಡಿಸಿರುವ ತೀರ್ಪು ರದ್ದು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಮೇಲ್ಮನವಿ ವಿಚಾರಣೆಯನ್ನು ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ನವೆಂಬರ್ 23ಕ್ಕೆ ನಿಗದಿಪಡಿಸಿದೆ.

ಮುಡಾ ಬದಲಿ ನಿವೇಶನ ಹಂಚಿಕೆ ಅಕ್ರಮದ ಕುರಿತು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದ ರಾಜ್ಯಪಾಲರ ಕ್ರಮವನ್ನು ಎತ್ತಿ ಹಿಡಿದಿದ್ದ ಏಕಸದಸ್ಯ ನ್ಯಾಯಪೀಠದ ತೀರ್ಪು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ವಿಭಾಗೀಯ ನ್ಯಾಯಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ.

ಗುರುವಾರ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ಪೀಠದ ಮುಂದೆ ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾದ ಸುಪ್ರೀಂಕೋರ್ಟ್‌ ಹಿರಿಯ ವಕೀಲ ಡಾ. ಅಭಿಷೇಕ್ ಮನು ಸಿಂಘ್ವಿ, ಏಕಸದಸ್ಯ ನ್ಯಾಯಪೀಠದ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿದೆ. ಈವರೆಗೂ ಅದು ವಿಚಾರಣೆಗೆ ನಿಗದಿಯಾಗಿಲ್ಲ. ಮೇಲ್ಮನವಿಯ ತುರ್ತು ವಿಚಾರಣೆ ಅಗತ್ಯವಿದ್ದು, ಶೀಘ್ರ ವಿಚಾರಣೆಗೆ ನಿಗದಿ ಪಡಿಸಬೇಕು ಎಂದು ಮನವಿ ಮಾಡಿದರು. ಅದನ್ನು ಪರಿಗಣಿಸಿದ ನ್ಯಾಯಪೀಠ, ಇದೇ 23ಕ್ಕೆ ವಿಚಾರಣೆ ನಿಗದಿಪಡಿಸಿತು.

ತನಿಖೆಗೆ ಅನುಮತಿ ನೀಡಿ 2024ರ ಸೆಪ್ಟೆಂಬರ್ 24ರಂದು ಏಕಸದಸ್ಯ ನ್ಯಾಯಪೀಠ ನೀಡಿದ್ದ ತೀರ್ಪನ್ನು ಮೇಲ್ಮನವಿಯಲ್ಲಿ ಪ್ರಶ್ನಿಸಲಾಗಿದ್ದು, ಸರ್ಕಾರದ ಮುಖ್ಯಕಾರ್ಯದರ್ಶಿ, ರಾಜ್ಯಪಾಲರ ಕಚೇರಿಯ ವಿಶೇಷ ಕಾರ್ಯದರ್ಶಿ, ಪ್ರಕರಣದ ಮೂಲ ದೂರುದಾರರಾಗಿರುವ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ, ಸ್ನೇಹಮಯಿ ಕೃಷ್ಣ ಹಾಗೂ ಎಸ್‌.ಪಿ. ಪ್ರದೀಪ್‌ ಕುಮಾರ್‌ ಅವರನ್ನು ಪ್ರತಿವಾದಿಯಾಗಿ ಮಾಡಲಾಗಿದೆ.

ಸಿಎಂ ಆಕ್ಷೇಪವೇನು?
ರಾಜ್ಯಪಾಲರು ಆಗಸ್ಟ್ 16ರಂದು ಹೊರಡಿಸಿದ್ದ ಆದೇಶವನ್ನು ಏಕಸದಸ್ಯ ನ್ಯಾಯಪೀಠದಲ್ಲಿ ಪ್ರಶ್ನಿಸಲಾಗಿತ್ತು. ಪ್ರಕರಣದ ತನಿಖೆಗೆ ಮತ್ತು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬಾರದು ಎಂದು ರಾಜ್ಯ ಸಚಿವರ ಸಂಪುಟದ ಸದಸ್ಯರು ರಾಜ್ಯಪಾಲರಿಗೆ ಶಿಫಾರಸು ಮಾಡಿದ್ದರು. ಅದನ್ನು ಪರಿಗಣಿಸದೆ ಪ್ರಕರಣದ ತನಿಖೆಗೆ ಮತ್ತು ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರೇ ಆತುರದ ಅನುಮತಿ ನೀಡಿದ್ದರು. ಅಂತಹ ಆದೇಶ ಹೊರಡಿಸಲು ಸಮಂಜಸವಾದ ಕಾರಣಗಳನ್ನೂ ನೀಡಿಲ್ಲ ಮತ್ತು ಸೂಕ್ತವಾಗಿ ವಿವೇಚನೆಯನ್ನೂ ಬಳಸಿಲ್ಲ ಎಂದು ಮೇಲ್ಮನವಿಯಲ್ಲಿ ಆಕ್ಷೇಪಿಸಲಾಗಿದೆ.

ಸಂಪುಟದ ಸಲಹೆ ಮತ್ತು ಸೂಚನೆ ಆಧಾರದಲ್ಲಿ ರಾಜ್ಯಪಾಲರು ಕಾರ್ಯ ನಿರ್ವಹಿಸಬೇಕು ಎಂದು ಸಂವಿಧಾನದ ಪರಿಚ್ಛೇದ 163 ಸ್ಪಷ್ಟವಾಗಿ ಹೇಳುತ್ತದೆ. ಆ ಪರಿಚ್ಛೇದ ಹಾಗೂ ಸಾಂವಿಧಾನಿಕ ತತ್ವಗಳನ್ನು ಕಡೆಗಣಿಸಿ ರಾಜ್ಯಪಾಲರು ಅನುಮತಿ ನೀಡಿದ್ದರು. ರಾಜ್ಯಪಾಲರ ಪೂರ್ವಾನುಮತಿಯೇ ನಿರಂಕುಶ, ಅಸಂವಿಧಾನಿಕ ಮತ್ತು ಅಕ್ರಮವಾಗಿದೆ. ಅಂತಹ ಆದೇಶವನ್ನು ಪುರಸ್ಕರಿಸಿರುವ ಏಕಸದಸ್ಯ ನ್ಯಾಯಪೀಠದ ತೀರ್ಪು ಸಹ ಸಂಪೂರ್ಣವಾಗಿ ದೋಷಪೂರಿತವಾಗಿದೆ ಎಂದು ಮೇಲ್ಮನವಿಯಲ್ಲಿ ಸಿದ್ದರಾಮಯ್ಯ ಆಕ್ಷೇಪಿಸಿದ್ದಾರೆ.

ಅಪ್ರಸ್ತುತ ಸತ್ಯಗಳನ್ನು ಆಧರಿಸಿ ಏಕಸದಸ್ಯ ನ್ಯಾಯಪೀಠ ತೀರ್ಪು ನೀಡಿದೆ. ರಾಜ್ಯಪಾಲರು ಸಂಪುಟದ ಸಚಿವರ ಸಲಹೆ-ಸೂಚನೆ ಕಡೆಗಣಿಸಿ ಹಾಗೂ ವಿವೇಚನೆ ಬಳಸದೆ ಆದೇಶ ಹೊರಡಿಸಿರುವುದು ಮತ್ತು ಪಿಸಿ ಕಾಯ್ದೆ ಸೆಕ್ಷನ್‌ 17ಎ ಮತ್ತು ಬಿಎನ್‌ಎಸ್‌ಎಸ್‌ ಸೆಕ್ಷನ್‌ 218ರ ಕುರಿತ ವ್ಯಾಖ್ಯಾನಗಳು ಸೇರಿ ಅನೇಕ ಪ್ರಮುಖ ಕಾನೂನಾತ್ಮಕ ಅಂಶಗಳನ್ನು ಪರಿಗಣಿಸುವಲ್ಲಿ ನ್ಯಾಯಪೀಠ ನಿರ್ಲಕ್ಷಿಸಿದೆ ಹಾಗೂ ವಿಫಲವಾಗಿದೆ. ಆ ಮೂಲಕ ಏಕಸದಸ್ಯ ನ್ಯಾಯಪೀಠವೂ ದೋಷಪೂರಿತ ಹಾಗೂ ವಿವೇಚನಾರಹಿತ ತೀರ್ಪು ನೀಡಿದೆ. ಆದ್ದರಿಂದ, ಆ ತೀರ್ಪು ಮತ್ತು ರಾಜ್ಯಪಾಲರ ಆದೇಶವನ್ನು ರದ್ದುಪಡಿಸಬೇಕು ಎಂದು ಮುಖ್ಯಮಂತ್ರಿಗಳು ಮೇಲ್ಮನವಿಯಲ್ಲಿ ಮನವಿ ಮಾಡಿದ್ದಾರೆ.

ಪ್ರಕರಣವೇನು?
ಮುಡಾ ಹಗರಣ ಕುರಿತು ಮುಖ್ಯಮಂತ್ರಿಗಳ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ (ಪಿಸಿ) ಕಾಯ್ದೆಯ ಸೆಕ್ಷನ್‌ 17ಎ ಅಡಿಯಲ್ಲಿ ಪೊಲೀಸ್‌ ತನಿಖೆ ಮತ್ತು ಭಾರತೀಯ ನ್ಯಾಯ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್‌) ಸೆಕ್ಷನ್‌ 2023ರ ಸೆಕ್ಷನ್‌ 218 ಅಡಿಯಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿ ರಾಜ್ಯಪಾಲರು 2024ರ ಆಗಸ್ಟ್ 16ರಂದು ಆದೇಶ ಹೊರಡಿಸಿದ್ದರು.

ಅದನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಆಗಸ್ಟ್ 19ರಂದು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಅಂದೇ ರಾಜ್ಯಪಾಲರ ಆದೇಶ ಆಧರಿಸಿ ಮುಖ್ಯಮಂತ್ರಿಗಳ ವಿರುದ್ಧ ಆತುರದ ಕ್ರಮ ಜರುಗಿಸದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮತ್ತು ಲೋಕಾಯುಕ್ತ ಪೊಲೀಸರಿಗೆ ನಿರ್ದೇಶಿಸಿ ಹೈಕೋರ್ಟ್‌ ಏಕಸದಸ್ಯ ನ್ಯಾಯಪೀಠ ಮಧ್ಯಂತರ ಆದೇಶ ಮಾಡಿತ್ತು. ಸೆಪ್ಟೆಂಬರ್ 12ರಂದು ಅರ್ಜಿ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ್ದ ನ್ಯಾಯಪೀಠ, ಸೆಪ್ಟೆಂಬರ್ 24ರಂದು ಮುಖ್ಯಮಂತ್ರಿಗಳ ಅರ್ಜಿ ವಜಾಗೊಳಿಸಿ, ಪ್ರಕರಣ ಕುರಿತು ಪೊಲಿಸ್‌ ತನಿಖೆ ನಡೆಸಲು ಅನುಮತಿ ನೀಡಿ ತೀರ್ಪು ಪ್ರಕಟಿಸಿತ್ತು.

Related Articles

Comments (0)

Leave a Comment