ವಾಲ್ಮೀಕಿ ಹಗರಣದ ತನಿಖೆ ಸಿಬಿಐಗೆ ವಹಿಸಲು ಕೋರಿದ್ದ ಅರ್ಜಿ ವಜಾ; ನ್ಯಾಯಾಲಯ ನೀಡಿದ ಕಾರಣಗಳೇನು?
- by Jagan Ramesh
- November 13, 2024
- 218 Views
ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಈ ಕುರಿತು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ 38 ಪುಟಗಳ ತೀರ್ಪು ಪ್ರಕಟಿಸಿದ್ದು, ತೀರ್ಪಿನ ಸಾರಾಂಶ ಇಲ್ಲಿದೆ.
ಬ್ಯಾಂಕಿಂಗ್ ನಿಬಂಧನೆಗಳ ಕಾಯ್ದೆ-1949ರ ಸೆಕ್ಷನ್ 35ಎ ಪ್ರಕಾರ ಬ್ಯಾಂಕ್ ವ್ಯವಹಾರಗಳ ಕುರಿತು ಯಾವುದೇ ಬ್ಯಾಂಕ್‌ಗಳಿಗೆ ಕಾಲಕಾಲಕ್ಕೆ ನಿರ್ದೇಶನ ನೀಡುವ ಅಧಿಕಾರವನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೊಂದಿದೆ. ಈ ಸೆಕ್ಷನ್ ಅನ್ವಯ ಬ್ಯಾಂಕ್ ವ್ಯವಹಾರಗಳಲ್ಲಿ ನಡೆದಿರುವ ವಂಚನೆ ಹಾಗೂ ಅಕ್ರಮದ ಬಗ್ಗೆ ಸಿಬಿಐನಂತಹ ಸ್ವತಂತ್ರ ಸಂಸ್ಥೆಯ ತನಿಖೆಗೆ ವಹಿಸಲು ಕೋರಬಹುದಾಗಿದೆ. ಬ್ಯಾಂಕಿಂಗ್ ವ್ಯವಹಾರದಲ್ಲಿ 50 ಕೋಟಿ ರೂ. ಗಳಿಗೂ ಅಧಿಕ ಅಕ್ರಮ ವ್ಯವಹಾರ ನಡೆದ ಸಂದರ್ಭದಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸಬಹದಾಗಿದೆ. ಹಗರಣದಲ್ಲಿ ವಾಲ್ಮೀಕಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಉನ್ನತ ಶ್ರೇಣಿಯ ಅಧಿಕಾರಿಗಳು ಮತ್ತು ನಿಗಮದ ಅಧ್ಯಕ್ಷರು, ಶಾಸಕರು ಭಾಗಿಯಾಗಿದ್ದಾರೆ. ಇದರಿಂದ, ರಾಜ್ಯ ಸರ್ಕಾರ ರಚಿಸಿರುವ ಎಸ್‌ಐಟಿಯಿಂದ ನ್ಯಾಯಯುತ ತನಿಖೆ ಸಾಧ್ಯವಿಲ್ಲ. ಆದ್ದರಿಂದ, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಪರ ಅಟಾರ್ನಿ ಜನರಲ್ ಅವರು ವಾದ ಮಂಡಿಸಿದ್ದರು.
ಅಟಾರ್ನಿ ಜನರಲ್ ಅವರು ಸೆಕ್ಷನ್ 35ಎ ಅನ್ನು ವ್ಯಾಖ್ಯಾನ ಮಾಡಿರುವುದನ್ನು ಒಪ್ಪಲಾಗದು. ಸೆಕ್ಷನ್ 35ಎ ಕೇವಲ ಬ್ಯಾಂಕಿಂಗ್ ಸಂಸ್ಥೆಗಳ ವ್ಯವಹಾರಗಳನ್ನು ಸಂಪೂರ್ಣವಾಗಿ ನಿಯಂತ್ರಿಸುವುದಕ್ಕೆ ಮತ್ತು ಮೇಲ್ವಿಚಾರಣೆ ನಡೆಸುವುದಕ್ಕೆ ಸಂಬಂಧಿಸಿದ್ದಾಗಿದೆ. ಯಾವುದೇ ಬ್ಯಾಂಕಿಂಗ್ ಸಂಸ್ಥೆಗೆ ತನಿಖೆಯನ್ನು ಸಿಬಿಐಗೆ ವರ್ಗಾಯಿಸಲು ಅನುಮತಿ ನೀಡಿದರೆ, ಅದು ಸೆಕ್ಷನ್ 35ಎಗೆ ಶಾಸನ ನೀಡಿರದ ಅಧಿಕಾರವನ್ನು ನೀಡಿದಂತಾಗುತ್ತದೆ. ವಾಲ್ಮೀಕಿ ಹಗರಣದ ಕುರಿತು ದೂರು ದಾಖಲಾದ ಸಂದರ್ಭದಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಕೆಲ ಅಧಿಕಾರಿಗಳು ಆರೋಪಿಗಳಾಗಿದ್ದರು ಎಂಬ ಕಾರಣಕ್ಕೆ ಹಗರಣವನ್ನು ಸಿಬಿಐಗೆ ವಹಿಸುವಂತೆ ಅರ್ಜಿದಾರ ಬ್ಯಾಂಕ್ ಕೋರಿದೆ. ಹಾಗೆಂದ ಮಾತ್ರಕ್ಕೆ ಅಟಾರ್ನಿ ಜನರಲ್ ಅವರು ಹೇಳಿರುವಂತೆ ಸೆಕ್ಷನ್ 35ಎ ವ್ಯಾಖ್ಯಾನವನ್ನು ನ್ಯಾಯಾಲಯ ಒಪ್ಪಬೇಕಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಹಾಲಿ ಶಾಸಕ ಮತ್ತು ಉನ್ನತ ಶ್ರೇಣಿಯ ಅಧಿಕಾರಿಗಳು ಹಣದ ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ. ಸಚಿವರು ಮತ್ತು ಅಧಿಕಾರಿಗಳು ಹಗರಣದಲ್ಲಿ ಭಾಗಿಯಾಗಿರುವ ಆರೋಪ ಎದುರಾದಾಗ, ಅಂತಹ ಆರೋಪಗಳ ಬಗ್ಗೆ ತನಿಖೆ ನಡೆಸಬೇಕಾಗುತ್ತದೆ. ತನಿಖೆಯನ್ನು ರಾಜ್ಯ ಸರ್ಕಾರದ ಅಧೀನ/ನಿಯಂತ್ರಣದಲ್ಲಿರದ ಸ್ವತಂತ್ರ ತನಿಖಾ ಸಂಸ್ಥೆಗೆ ವಹಿಸಬೇಕಾಗುತ್ತದೆ. ಆಗ ಮಾತ್ರ ಅದು ಸಾರ್ವಜನಿಕರಲ್ಲಿ ವಿಶ್ವಾಸವನ್ನು ಮೂಡಿಸುತ್ತದೆ ಅಥವಾ ಅಂತಹ ತನಿಖೆಗೆ ವಿಶ್ವಾಸಾರ್ಹತೆಯನ್ನು ಒದಗಿಸುತ್ತದೆ. ಆದರೆ, ಬ್ಯಾಂಕಿಂಗ್ ನಿಬಂಧನೆಗಳ ಕಾಯ್ದೆ ಸೆಕ್ಷನ್ 35ಎ ವ್ಯಾಖ್ಯಾನದ ಮೇಲೆ ಪ್ರಕರಣದ ತನಿಖೆಯನ್ನು ಸ್ವತಂತ್ರ ತನಿಖಾ ಸಂಸ್ಥೆಗೆ ವಹಿಸುವುದಲ್ಲ. ಇತರ ವ್ಯಾಖ್ಯಾನವನ್ನು ಮಂಡಿಸಿದ್ದರೆ, ಆಗ ಅರ್ಜಿದಾರರ ಮನವಿಯನ್ನು ನ್ಯಾಯಾಲಯವು ಪರಿಗಣಿಸಬಹುದಿತ್ತು ಎಂದು ನ್ಯಾಯಪೀಠ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ಪ್ರಕರಣ ಸಂಬಂಧ ದೂರು ದಾಖಲಾದಾಗ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕಾರಿಗಳೂ ಸಹ ಆರೋಪಿಗಳಾಗಿದ್ದರು. ಅದಕ್ಕಾಗಿಯೇ ಯೂನಿಯನ್ ಬ್ಯಾಂಕ್ ತನಿಖೆಯನ್ನು ಸಿಬಿಐ ವಹಿಸಲು ಕೋರಿದೆ. ಬ್ಯಾಂಕ್ ಸಿಬಿಐ ತನಿಖೆ ಕೇಳಿದ ಮಾತ್ರಕ್ಕೆ ಸೆಕ್ಷನ್ 35ಎ ವ್ಯಾಖ್ಯಾನದ ಆಧಾರದಲ್ಲಿ ಸಿಬಿಐ ತನಿಖೆಗೆ ವಹಿಸಲು ಸಾಧ್ಯವಿಲ್ಲ. ಇನ್ನು ಎಸ್‌ಐಟಿಯ ದೋಷಾರೋಪ ಪಟ್ಟಿಯಿಂದ ಬ್ಯಾಂಕ್ ಅಧಿಕಾರಿಗಳನ್ನು ಕೈಬಿಡಲಾಗಿದೆ. ಆದರೆ, ಕಾನೂನು ಅನುಗುಣವಾದ ಮಾರ್ಗದಲ್ಲಿ ಸಿಬಿಐ ತನಿಖೆಗೆ ಅಭ್ಯಂತರವಿಲ್ಲ. ಆಗ ರಾಜ್ಯದ ತನಿಖಾ ಸಂಸ್ಥೆಯು ಹಗರಣದಿಂದ ಕೈ ಬಿಟ್ಟಿರುವ ವ್ಯಕ್ತಿಗಳನ್ನೂ ಸಿಬಿಐ ತನಿಖೆಗೊಳಪಡಿಸಬಹುದು ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್ ಅರ್ಜಿ ವಜಾಗೊಳಿಸಿದೆ.
ಆತ್ಮಸಾಕ್ಷಿಗೆ ಆಘಾತ:
ವಾಲ್ಮೀಕಿ ನಿಗಮವು ಪರಿಶಿಷ್ಟ ಪಂಡಗದ ಸಮುದಾಯದವರು ಆರ್ಥಿಕವಾಗಿ ಅಭಿವೃದ್ಧಿ ಹೊಂದುವುದಕ್ಕೆ ಹಣಕಾಸು ನೆರವು ಕಲ್ಪಿಸಲು, ಕೃಷಿ ಕಾರ್ಮಿಕರಿಗೆ ಬೆಂಬಲ ನೀಡಲು ಸ್ಥಾಪಿಸಲಾಗಿದೆ. ಪರಿಶಿಷ್ಟ ಪಂಗಡದವರಿಗ ಸೇರಿದ ಹಣದ ಅತ್ಯಂತ ಕಾಳಜಿ ವಹಿಸಬೇಕಿದೆ. ಆದರೆ, ನಿಗಮಕ್ಕೆ ಸೇರಿದ ಹಣದ ಅವ್ಯವಹಾರ ನಡೆದಿರುವುದು ನ್ಯಾಯಾಲಯದ ಆತ್ಮಸಾಕ್ಷಿಗೆ ಆಘಾತ ತರಿಸಿದೆ ಎಂದು ನ್ಯಾಯಪೀಠ ಆದೇಶದಲ್ಲಿ ವಿಷಾದ ವ್ಯಕ್ತಪಡಿಸಿದೆ.
Related Articles
Thank you for your comment. It is awaiting moderation.
Comments (0)