ಮರಕುಂಬಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣ; ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 97 ಮಂದಿಗೆ ಜಾಮೀನು
- by Jagan Ramesh
- November 13, 2024
- 286 Views
ಬೆಂಗಳೂರು/ಧಾರವಾಡ: ಕೊಪ್ಪಳ ಜಿಲ್ಲೆ ಮರಕುಂಬಿ ಗ್ರಾಮದ ದಲಿತರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಕೊಪ್ಪಳ ಜಿಲ್ಲಾ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 97 ಮಂದಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಪ್ರಕರಣದಲ್ಲಿ 4ನೇ ಆರೋಪಿಯಾಗಿರುವ ಪಂಪಾವತಿ ಸೇರಿ ಇತರ ಆರೋಪಿಗಳು ಸಲ್ಲಿಸಿದ್ದ 10 ಪ್ರತ್ಯೇಕ ಕ್ರಿಮಿನಲ್ ಮೇಲ್ಮನವಿಗಳನ್ನು ಧಾರವಾಡದಲ್ಲಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಹಾಗೂ ನ್ಯಾಯಮೂರ್ತಿ ಟಿ.ಜಿ. ಶಿವಶಂಕರೇಗೌಡ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ.
ಮೇಲ್ಮನವಿಗಳನ್ನು ಮಾನ್ಯ ಮಾಡಿರುವ ನ್ಯಾಯಪೀಠ, ಎಲ್ಲ ಮೇಲ್ಮನವಿದಾರರೂ ತಲಾ 1 ಲಕ್ಷ ರೂ. ವೈಯಕ್ತಿಕ ಬಾಂಡ್ ಮತ್ತು ಒಬ್ಬರ ಭದ್ರತೆ ಒದಗಿಸಬೇಕು. ವಿಚಾರಣಾ ನ್ಯಾಯಾಲಯ ವಿಧಿಸಿರುವ ದಂಡದ ಮೊತ್ತವನ್ನು ಪಾವತಿಸಬೇಕು ಎಂದು ಷರತ್ತು ವಿಧಿಸಿದೆ. ಆದೇಶದ ವಿಸ್ತೃತ ಪ್ರತಿ ಇನ್ನಷ್ಟೇ ಪ್ರಕಟವಾಗಬೇಕಿದೆ.
ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಪ್ರಕರಣದ ಮೊದಲನೇ ಆರೋಪಿ ಮಂಜುನಾಥ್ ಹೊರತುಪಡಿಸಿ ಉಳಿದವರಿಗೆ ಜಾಮೀನು ದೊರೆತಿದೆ. ಇನ್ನು ಇದೇ ಪ್ರಕರಣದಲ್ಲಿ 5 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಮತ್ತಿಬ್ಬರಿಗೂ ಜಾಮೀನು ಮಂಜೂರಾಗಿದ್ದು, ಒಟ್ಟು 99 ಜನರಿಗೆ ಜಾಮೀನು ಸಿಕ್ಕಂತಾಗಿದೆ.
ಪ್ರಕರಣವೇನು?
ಮರಕುಂಬಿ ಗ್ರಾಮದ ಮೇಲ್ವರ್ಗಕ್ಕೆ ಸೇರಿದ ಮಂಜುನಾಥ್ ಮತ್ತಿತರರು 2014ರಲ್ಲಿ ಚಲನಚಿತ್ರ ವೀಕ್ಷಿಸಲು ಗಂಗಾವತಿಯ ಶಿವ ಟಾಕೀಸ್ಗೆ ತೆರಳಿದ್ದರು. ಟಿಕೆಟ್ ಖರೀದಿಸುವ ವೇಳೆ ಬೇರೆಯವರೊಂದಿಗೆ ಕಲಹ ಉಂಟಾಗಿ ಪರಸ್ಪರ ಹೊಡೆದಾಡಿಕೊಂಡಿದ್ದರು. ಈ ಘಟನೆಯ ಹಿಂದೆ ಮರಕುಂಬಿಯ ದಲಿತರು ಇದ್ದಾರೆ ಎಂದು ಭಾವಿಸಿದ ಮಂಜುನಾಥ್ ಊರಿಗೆ ತೆರಳಿ ವಿಚಾರ ತಿಳಿಸಿದ್ದನು. ಇದೇ ಕಾರಣಕ್ಕೆ 2014ರ ಆಗಸ್ಟ್ 28ರಂದು ಮರಕುಂಬಿಯ ಪರಿಶಿಷ್ಟ ಜಾತಿಯ ಮಾದಿಗ ಸಮುದಾಯದವರನ್ನು ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿ, ಅವರ ಮನೆಗಳಿಗೆ ಬೆಂಕಿ ಹಚ್ಚಿ, ಅಲ್ಲಿನ ನಿವಾಸಿಗಳ ಮೇಲೆ ಕಲ್ಲು, ಇಟ್ಟಿಗೆ, ದೊಣ್ಣೆಯಿಂದ ಹಲ್ಲೆ ನಡೆಸಲಾಗಿತ್ತು.
ಘಟನೆಯಲ್ಲಿ ಸಮುದಾಯದ ಮಹಿಳೆಯರು, ಪುರುಷರು ಗಾಯಗೊಂಡಿದ್ದರು. ಜಾತಿ ನಿಂದನೆ, ಮಹಿಳೆಯರ ಘನತೆಗೆ ಹಾನಿ, ಮನೆಗಳಿಗೆ ಬೆಂಕಿ ಹಚ್ಚಿರುವುದು, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಆರೋಪದ ಮೇಲೆ 117 ಮಂದಿಯ ವಿರುದ್ಧ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ವಿಚಾರಣಾ ಹಂತದಲ್ಲಿರುವಾಗಲೇ ಕೆಲ ಆರೋಪಿಗಳು ಮೃತಪಟ್ಟಿದ್ದರು.
ಪ್ರಕರಣದಲ್ಲಿ ದಲಿತ ಸಮುದಾಯದವರ ಮನೆಗೆ ಬೆಂಕಿ ಹಚ್ಚಿರುವುದು ಸಾಬೀತಾದ ಹಿನ್ನೆಲೆಯಲ್ಲಿ, 101 ಆರೋಪಿಗಳಲ್ಲಿ 98 ಮಂದಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಜೀವಾವಧಿ ಶಿಕ್ಷೆ ಹಾಗೂ ತಲಾ 5 ಸಾವಿರ ರೂ. ದಂಡ ವಿಧಿಸಿ 2024ರ ಅಕ್ಟೋಬರ್ 24ರಂದು ಕೊಪ್ಪಳದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿತ್ತು. ಇನ್ನುಳಿದ ಮೂವರಿಗೆ ಅಕ್ರಮ ಕೂಟ, ಆಸ್ತಿ ಹಾನಿ ಮಾಡಿದ ಅಪರಾಧಗಳಿಗಾಗಿ 5 ವರ್ಷ ಜೈಲು ಶಿಕ್ಷೆ ಹಾಗೂ ತಲಾ 2 ಸಾವಿರ ರೂ. ದಂಡ ವಿಧಿಸಲಾಗಿತ್ತು.
Related Articles
Thank you for your comment. It is awaiting moderation.
Comments (0)