ವಾಲ್ಮೀಕಿ ನಿಗಮ ಹಗರಣ ಸಿಬಿಐ ತನಿಖೆಗೆ ವಹಿಸಲು ಹೈಕೋರ್ಟ್ ನಕಾರ; ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಅರ್ಜಿ ವಜಾ

ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂ. ಗಳ ಹಗರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವಹಿಸುವಂತೆ ಕೋರಿ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.

ವಾಲ್ಮೀಕಿ ನಿಗಮದ ಹಗರಣವನ್ನು ಸಿಬಿಐ ತನಿಖೆಗೆ ವಹಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಲ್ಲಿಸಿದ್ದ ಅರ್ಜಿ ಕುರಿತು ವಾದ-ಪ್ರತಿವಾದ ಆಲಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ಪ್ರಕಟಿಸಿತು.

ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವುದಕ್ಕೆ ಸಂಬಂಧಿಸಿದಂತೆ ಬ್ಯಾಂಕಿಂಗ್‌ ನಿಯಂತ್ರಣ ಕಾಯ್ದೆ ಸೆಕ್ಷನ್‌ 35ಎ ಅಡಿಯ ವ್ಯಾಖ್ಯಾನವನ್ನು ಒಪ್ಪಲಾಗದು. ಒಂದೊಮ್ಮೆ ಅರ್ಜಿದಾರರ ಮನವಿಗೆ ಅನುಮತಿಸಿದರೆ ಪ್ರತಿಯೊಂದು ಬ್ಯಾಂಕಿಂಗ್‌ ಸಂಸ್ಥೆಯೂ ಅದನ್ನೇ ಕೋರಬಹುದು. ಆಗ ದೆಹಲಿ ವಿಶೇಷ ಪೊಲೀಸ್‌ ಸ್ಥಾಪನಾ ಕಾಯ್ದೆ ಅನುಪಯುಕ್ತವಾಗಲಿದೆ ಎಂದು ತೀರ್ಪು ಪ್ರಕಟಿಸುವ ಸಂದರ್ಭದಲ್ಲಿ ನ್ಯಾಯಪೀಠ ಮೌಖಿಕವಾಗಿ ಹೇಳಿದೆ. ತೀರ್ಪಿನ ವಿಸ್ತೃತ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ಅರ್ಜಿಗೆ ಆಕ್ಷೇಪಿಸಿದ್ದ ರಾಜ್ಯ ಸರ್ಕಾರ:
ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಬಿ.ವಿ. ಆಚಾರ್ಯ, ಯಾವುದೇ ಪ್ರಕರಣದ ತನಿಖೆ ನಡೆಸುವ ಅಂತರ್ಗತ ಅಧಿಕಾರ ಸಿಬಿಐಗೆ ಇಲ್ಲ. ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಲಾಗದು. ಪೊಲೀಸ್‌ ಅಧಿಕಾರ ಶಾಸನಬದ್ಧವಾಗಿದ್ದು, ಅದು ಸಾಂವಿಧಾನಿಕ ನಿಬಂಧನೆಗಳಿಗೆ ಅನುಗುಣವಾಗಿದೆ. ಸಿಬಿಐ ಎಂದರೆ ಕೇಂದ್ರ ಸರ್ಕಾರವಾಗಿದ್ದು, ಅದು ಪ್ರಕರಣದಲ್ಲಿ ಪಕ್ಷಗಾರ ಅಲ್ಲದಿದ್ದರೂ ನ್ಯಾಯಾಲಯದ ಮುಂದೆ ಬಂದಿದೆ. ಕೇಂದ್ರ ತನ್ನ ಎರಡು ಬಾಹುಗಳಾದ ಸಿಬಿಐ ಮತ್ತು ಯೂನಿಯನ್‌ ಬ್ಯಾಂಕ್‌ ಮೂಲಕ ಇಲ್ಲಿ ಬಂದಿದೆ ಎಂದು ಆಕ್ಷೇಪಿಸಿದ್ದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಪರ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್‌ ವಾದ ಮಂಡಿಸಿ, ಕೇಂದ್ರ ಸರ್ಕಾರವು ಪ್ರತಿನಿಧಿ (ಪ್ರಾಕ್ಸಿ) ಮುಖಾಂತರ ಯುದ್ಧಕ್ಕೆ ಇಳಿದಿದೆ. ಯೂನಿಯನ್‌ ಬ್ಯಾಂಕ್‌ ಆಫ್ ಇಂಡಿಯಾ ಹಿಂದಿನ ದಿನ ಸಿಬಿಐ ತನಿಖೆಗೆ ಕೋರುತ್ತದೆ. ಮರುದಿನ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ ಎಂದು ದೂರಿದ್ದರು.

ಅರ್ಜಿದಾರ ಯೂನಿಯನ್‌ ಬ್ಯಾಂಕ್‌ ಆಫ್ ಇಂಡಿಯಾ ಪರವಾಗಿ ವಾದ ಮಂಡಿಸಿದ್ದ ಅಟಾರ್ನಿ ಜನರಲ್‌ ಆರ್‌. ವೆಂಕಟರಮಣಿ, ಸಿಬಿಐ ಕೇಂದ್ರ ಸರ್ಕಾರದ ಪ್ರತಿರೂಪ ಎಂಬ ವಾದಕ್ಕೆ ಆಕ್ಷೇಪಿಸಿದ್ದರಲ್ಲದೆ, ಸಿಬಿಐ ಕೇಂದ್ರ ಸರ್ಕಾರದ ಪ್ರತಿರೂಪ ಎಂಬ ಕುರಿತು ವಾದಿಸಲು ಇಚ್ಛಿಸುವುದಿಲ್ಲ. ಅದು ಈ ಪ್ರಕರಣಕ್ಕೆ ಹೊಂದುವುದಿಲ್ಲ. ಇಂಥ ಪ್ರಕರಣದಲ್ಲಿ ಸಿಬಿಐ ಒಂದೇ ತನಿಖಾ ಸಂಸ್ಥೆ ಎಂದು ಆರ್‌ಬಿಐ ಹೇಳಿದೆ. ಬ್ಯಾಂಕಿಂಗ್‌ ಕ್ಷೇತ್ರದ ನಿರ್ವಹಣೆಗೆ ವ್ಯವಸ್ಥಿತ ಆಪತ್ತು ಎದುರಾದಾಗ ಬ್ಯಾಂಕಿಂಗ್‌ ನಿಯಂತ್ರಣ ಕಾಯ್ದೆ ಸೆಕ್ಷನ್‌ 35ಎ ಅನ್ವಯಿಸುತ್ತದೆ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.

Related Articles

Comments (0)

Leave a Comment