ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪಾದಚಾರಿಗಳ ಜೀವಕ್ಕೆ ಆಪತ್ತು; ಹೈಕೋರ್ಟ್ ತರಾಟೆ
- by Jagan Ramesh
- November 11, 2024
- 57 Views
ಬೆಂಗಳೂರು: ಅತ್ಯಂತ ಬೇಜವಾಬ್ದಾರಿತನದಿಂದ ವರ್ತಿಸುವ ಬೆಸ್ಕಾಂ ಅಧಿಕಾರಿಗಳು ಪಾದಚಾರಿಗಳ ಜೀವವನ್ನು ಸುಲಭವಾಗಿ ತೆಗೆಯುತ್ತಾರೆ ಎಂದು ಹೈಕೋರ್ಟ್ ಕಿಡಿಕಾರಿದೆ.
ಹೊಲಕ್ಕೆ ತೆರಳುವಾಗ ರಸ್ತೆ ಬದಿಯ ವಿದ್ಯುತ್ ಕಂಬದ ತಂತಿ ಸ್ಪರ್ಶಿಸಿ ಬಾಲಕನೊಬ್ಬ ತೀವ್ರವಾಗಿ ಗಾಯಗೊಂಡ ಪ್ರಕರಣದಲ್ಲಿ ವ್ಯಕ್ತಿಯ ಜೀವಕ್ಕೆ ಅಪಾಯ ಉಂಟು ಮಾಡಿದ ಆರೋಪದಡಿ ದಾಖಲಾಗಿರುವ ಪ್ರಕರಣ ರದ್ದು ಕೋರಿ ಬೆಸ್ಕಾಂನ ಜಗಳೂರು ವಿಭಾಗದ ಇಬ್ಬರು ಅಧಿಕಾರಿಗಳು ಮತ್ತು ಲೈನ್‌ಮ್ಯಾನ್ ಒಬ್ಬರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಬೆಸ್ಕಾಂ ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿತಲ್ಲದೆ ಅರ್ಜಿದಾರರ ವಿರುದ್ಧದ ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ತಡೆ ನೀಡಲು ಮೌಖಿಕವಾಗಿ ನಿರಾಕರಿಸಿ, ಅರ್ಜಿ ವಿಚಾರಣೆಯನ್ನು 20205ರ ಜನವರಿ ಮೊದಲ ವಾರಕ್ಕೆ ಮುಂದೂಡಿತು.
ಸುಲಭವಾಗಿ ಜೀವ ತೆಗೆಯುತ್ತಾರೆ:
ಅರ್ಜಿ ವಿಚಾರಣೆಗೆ ಬರುತ್ತಿದ್ದಾರಂತೆ ನ್ಯಾಯಮೂರ್ತಿಗಳು, ಅರ್ಜಿದಾರರು ಬೆಸ್ಕಾಂ ಉದ್ಯೋಗಿಗಳಲ್ಲವೇ ಎಂದು ಪ್ರಶ್ನಿಸಿದರು. ಅರ್ಜಿದಾರರ ಪರ ವಕೀಲರು, ಹೌದು.. ಎಂದು ಉತ್ತರಿಸಿ ಪ್ರಕರಣದ ಅಂಶಗಳನ್ನು ವಿವರಿಸಲು ಮುಂದಾದರು.
ಅಷ್ಟಕ್ಕೇ ಅರ್ಜಿದಾರರ ಪರ ವಕೀಲರ ವಾದ ಮಂಡನೆಯನ್ನು ತಡೆದ ನ್ಯಾಯಮೂರ್ತಿಗಳು, ನನಗೇನಾದರೂ ಅವಕಾಶ ಸಿಕ್ಕರೆ ನೇರವಾಗಿ ಅರ್ಜಿದಾರರಿಗೆ ಶಿಕ್ಷೆ ವಿಧಿಸುತ್ತೇನೆ. ಏಕೆಂದರೆ, ಬೆಸ್ಕಾಂ ಅಧಿಕಾರಿಗಳು ಅತ್ಯಂತ ಬೇಜವಾಬ್ದಾರಿ ಅಧಿಕಾರಿಗಳು. ಬೇಜವಾಬ್ದಾರಿತನದಿಂದ ರಸ್ತೆಯಲ್ಲಿ ನಡೆದುಹೋಗುವ ಪಾದಚಾರಿಗಳ ಜೀವನವನ್ನು ಸುಲಭವಾಗಿ ತೆಗೆಯುತ್ತಾರೆ ಎಂದು ತರಾಟೆಗೆ ತೆಗೆದುಕೊಂಡರು.
ವಿದ್ಯುತ್ ಪ್ರವಹಿಸುವ ತಂತಿ ರಸ್ತೆಯಲ್ಲಿ ಬಿದ್ದಿರುವ ಬಗ್ಗೆ ಸಾರ್ವಜನಿಕರು ದೂರು ನೀಡಿದರೂ ಬೆಸ್ಕಾಂ ಅಧಿಕಾರಿಗಳು ಮಾತ್ರ ಜೀವಕ್ಕೆ ಅಪಾಯವಿರುವ ತಂತಿಯನ್ನು ತೆರವುಗೊಳಿಸುವುದಿಲ್ಲ. ದೂರಿನ ಬಗ್ಗೆ ಕ್ಯಾರೇ ಎನ್ನುವುದಿಲ್ಲ. ಅವರಿಗೆ ಏನಾಗಬೇಕು? ಹವಾನಿಯಂತ್ರಿತ ಕಚೇರಿಯಲ್ಲಿಯೇ ಕೂತು ಎಲ್ಲ ಕೆಲಸ ಮಾಡುತ್ತಾರೆ. ಒಂದು ಸ್ಥಳವನ್ನೂ ಸಹ ಪರಿಶೀಲನೆ ಮಾಡುವುದಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಇನ್ನೆಷ್ಟು ಸಾವು ಸಂಭವಿಸಬೇಕು. ಪುಣ್ಯ ಎಂದರೆ ಈ ಪ್ರಕರಣದಲ್ಲಿ ಸಾವು ಸಂಭವಿಸಿಲ್ಲ. ಪ್ರಕರಣ ರದ್ದು ಕೋರುವ ಬೆಸ್ಕಾಂ ಅಧಿಕಾರಿಗಳ ಅರ್ಜಿಗಳನ್ನು ನಾನು ಪರಿಗಣಿಸುವುದೇ ಇಲ್ಲ ಎಂದು ನ್ಯಾಯಮೂರ್ತಿಗಳು ತೀಕ್ಷ್ಣವಾಗಿ ನುಡಿದರು.
ಪ್ರಕರಣವೇನು?
ಜಗಳೂರು ತಾಲೂಕಿನ ಮೂಡಲ ಮಾಚಿಕೆರೆ ಗ್ರಾಮದ ನಿವಾಸಿ ಆರ್. ರವಿ ಎಂಬುವರು 2020ರ ಅಕ್ಟೋಬರ್ 27ರಂದು ಪೊಲೀಸರಿಗೆ ದೂರು ನೀಡಿ, ಅಕ್ಟೋಬರ್ 26ರಂದು ಬೆಳಗ್ಗೆ 10.30ಕ್ಕೆ ತಮ್ಮ ಪುತ್ರ ಪಾಂಡುರಂಗ (15) ಹೊಲಕ್ಕೆ ಹೋಗುವ ರಸ್ತೆಯಲ್ಲಿ ತೆರಳುತ್ತಿದ್ದಾಗ ಆತನ ಕಾಲು ರಸ್ತೆಬದಿ ಇದ್ದ ಕೆಇಬಿ ಕಂಬದ ತಂತಿಗೆ ಸ್ಪರ್ಶವಾಗಿ, ವಿದ್ಯುತ್ ಪ್ರವಹಿಸಿದೆ. ಇದರಿಂದ, ಆತನ ಎರಡು ಕಾಲು ಮತ್ತು ಕೈಗೆ ತೀವ್ರ ಗಾಯವಾಗಿದೆ. ಘಟನೆಗೆ ಬೆಸ್ಕಾಂನ ದಾವಣಗೆರೆ ವಿಭಾಗದ ಸಹಾಯಕ ಕಾರ್ಯಕಾರಿ ಇಂಜಿನಿಯರ್ ಜಿ.ಎಂ. ಪ್ರವೀಣ್, ಸೆಕ್ಷನ್ ಆಫೀಸರ್ ಎಸ್.ಸಿ. ಚಂದ್ರಶೇಖರ ತಿಲಕ್ ಮತ್ತು ಲೈನ್‌ಮ್ಯಾನ್ ಆಸೀಫ್ ಸೋಮಲಪುರ ಕಾರಣ ಎಂದು ಆರೋಪಿಸಿದ್ದರು.
ದೂರಿನ ತನಿಖೆ ನಡೆಸಿದ್ದ ಜಗಳೂರು ಠಾಣೆ ಪೊಲೀಸರು ಅರ್ಜಿದಾರರ ವಿರುದ್ಧ ವ್ಯಕ್ತಿಯ ಜೀವಕ್ಕೆ ಅಪಾಯ ಉಂಟು ಮಾಡಿದ ಆರೋಪದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಜಗಳೂರು ಸಿವಿಲ್ ಮತ್ತು ಜೆಎಂಎಫ್‌ಸಿ ಕೋರ್ಟ್‌ನಲ್ಲಿ ಪ್ರಕರಣ ವಿಚಾರಣಾ ಹಂತದಲ್ಲಿದೆ. ಈ ಪ್ರಕರಣ ಮತ್ತು ವಿಚಾರಣೆ ರದ್ದು ಕೋರಿ ಅರ್ಜಿದಾರ ಅಧಿಕಾರಿಗಳು ಹೈಕೋರ್ಟ್‌ಗೆ ಮೆಟ್ಟಿಲೇರಿದ್ದಾರೆ.
Related Articles
Thank you for your comment. It is awaiting moderation.
Comments (0)