ಅಪ್ರಾಪ್ತೆಗೆ ಗರ್ಭಪಾತ ನಡೆಸಲು ಹೈಕೋರ್ಟ್ ಅನುಮತಿ; ಅತ್ಯಾಚಾರದಿಂದ ಗರ್ಭಿಣಿಯಾಗಿದ್ದ ಸಂತ್ರಸ್ತೆ
- by Jagan Ramesh
- November 6, 2024
- 440 Views
ಬೆಂಗಳೂರು: ಅತ್ಯಾಚಾರಕ್ಕೆ ಗುರಿಯಾಗಿ ಗರ್ಭವತಿಯಾಗಿದ್ದ 13 ವರ್ಷದ ಬಾಲಕಿಗೆ ವೈದ್ಯಕೀಯ ಗರ್ಭಪಾತ ಪ್ರಕ್ರಿಯೆ ನಡೆಸಲು ಹೈಕೋರ್ಟ್ ಅವಕಾಶ ಮಾಡಿಕೊಟ್ಟಿದೆ.
ಅತ್ಯಾಚಾರಕ್ಕೀಡಾಗಿ 28 ವಾರಗಳ ಗರ್ಭ ಧರಿಸಿರುವ ಮಗಳಿಗೆ ಗರ್ಭಪಾತ ನಡೆಸಲು ವಾಣಿವಿಲಾಸ ಆಸ್ಪತ್ರೆ ವೈದ್ಯರಿಗೆ ನಿರ್ದೇಶಿಸುವಂತೆ ಕೋರಿ ಸಂತ್ರಸ್ತೆಯ ತಾಯಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ವೈದ್ಯಕೀಯ ಗರ್ಭಪಾತ ಸಮಾಪನ ಅಧಿನಿಯಮ-1971’ರ ನಿಯಮಗಳಂತೆ ಅಪ್ರಾಪ್ತೆಯ ಗರ್ಭಪಾತ ಪ್ರಕ್ರಿಯೆ ಕೈಗೊಳ್ಳುವಂತೆ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಯ ಮುಖ್ಯ ಶಸ್ತ್ರಚಿಕಿತ್ಸಕರಿಗೆ (ಚೀಫ್ ಸರ್ಜನ್) ನಿರ್ದೇಶಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.
ತಜ್ಞ ವೈದ್ಯರ ವೈದ್ಯಕೀಯ ಮಂಡಳಿಯ ವರದಿ ಆಧರಿಸಿ ಈ ಆದೇಶ ನೀಡಲಾಗಿದೆ. ಸಂತ್ರಸ್ತೆಯ ಜೀವಕ್ಕೆ ಹಾನಿಯಾಗದಂತೆ ಗರ್ಭಪಾತ ಮಾಡುವ ಸಂಬಂಧ ವೈದ್ಯರಿಂದ ಅಗತ್ಯ ಪರೀಕ್ಷೆಗಳ ಬಳಿಕ ನಿರ್ಧರಿಸಿ ಕ್ರಮಕ್ಕೆ ಮುಂದಾಗಬೇಕು. ಗರ್ಭಪಾತದ ಚಿಕಿತ್ಸೆಗೆ ಸಂತ್ರಸ್ತೆಯಿಂದ ಹಣ ಪಡೆದುಕೊಳ್ಳಬಾರದು. ಸಂತ್ರಸ್ತೆಯ ವೈದ್ಯಕೀಯ ಚಿಕಿತ್ಸೆ ಹಾಗೂ ಮುಂದಿನ ಆರೋಗ್ಯ ಸುಧಾರಣೆ ನಿರ್ವಹಣೆಗೆ ಬೆಂಗಳೂರು ನಗರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ 3 ಲಕ್ಷ ರೂ. ಬಿಡುಗಡೆ ಮಾಡಬೇಕು ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.
ಭ್ರೂಣ ಸಂರಕ್ಷಣೆಗೆ ನಿರ್ದೇಶನ:
ವೈದ್ಯರು ಗರ್ಭಪಾತ ಪ್ರಕ್ರಿಯೆ ನಡೆಸಿದ ಬಳಿಕ ಭ್ರೂಣವನ್ನು ಡಿಎನ್ಎ ಪರೀಕ್ಷೆಗೆ ಅನುಕೂಲವಾಗುವಂತೆ ಸಂರಕ್ಷಿಸಿಡಬೇಕು. ಭ್ರೂಣದ ಅಂಗಾಂಶ ಮಾದರಿಯನ್ನು ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್ಎಸ್ಎಲ್) ರವಾನಿಸಬೇಕು ಎಂದು ವಾಣಿ ವಿಲಾಸ ಆಸ್ಪತ್ರೆಯ ಚೀಫ್ ಸರ್ಜನ್ಗೆ ಹೈಕೋರ್ಟ್ ನಿರ್ದೇಶಿಸಿದೆ.
ಅತ್ಯಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಸಂತ್ರಸ್ತೆ ಮತ್ತವರ ಕುಟುಂಬ ಸದಸ್ಯರು ಮನೆಯಿಂದ ಆಸ್ಪತ್ರೆಗೆ ಹೋಗಿ ಬರುವುದಕ್ಕೆ ವಾಹನ ವ್ಯವಸ್ಥೆ ಮಾಡಬೇಕು. ಅದರ ವೆಚ್ಚವನ್ನೂ ಸರ್ಕಾರದ ವತಿಯಿಂದಲೇ ಭರಿಸಬೇಕು ಎಂದು ಆದೇಶಿಸಿರುವ ಹೈಕೋರ್ಟ್, ಈ ಆದೇಶ ಪಾಲನೆ ಮಾಡಿದ ಬಗ್ಗೆ 2 ವಾರಗಳಲ್ಲಿ ವಸ್ತುಸ್ಥಿತಿ ವರದಿ ಸಲ್ಲಿಸಬೇಕು ಎಂದು ಪೊಲೀಸರು, ವಾಣಿ ವಿಲಾಸ ಆಸ್ಪತ್ರೆ ವೈದ್ಯಾಧಿಕಾರಿ, ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿಗಳಿಗೆ ನಿರ್ದೇಶಿಸಿದೆ.
ಪ್ರಕರಣವೇನು?
ಅತ್ಯಾಚಾರಕ್ಕೊಳಗಾಗಿದ್ದ 13 ವರ್ಷದ ಬಾಲಕಿ ಗರ್ಭಿಣಿಯಾಗಿದ್ದಳು. ಈ ವಿಷಯ ತಿಳಿದ ತಕ್ಷಣ ಆಕೆಯ ತಾಯಿ ಆರೋಪಿಗಳ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆಯಡಿ ದೂರು ದಾಖಲಿಸಿದ್ದರು. ಈ ಮಧ್ಯೆ, ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ ಸಂತ್ರಸ್ತೆಯ ತಾಯಿ, ಮಗಳಿಗೆ ಗರ್ಭಪಾತ ನಡೆಸಲು ವಾಣಿ ವಿಲಾಸ ಆಸ್ಪತ್ರೆ ವೈದ್ಯರಿಗೆ ನಿರ್ದೇಶಿಸಬೇಕು ಮತ್ತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಭ್ರೂಣವನ್ನು ಡಿಎನ್ಎ ಪರೀಕ್ಷೆಗಾಗಿ ಸಂಗ್ರಹಿಸಿಡುವಂತೆ ಆದೇಶಿಸಬೇಕು ಎಂದು ಕೋರಿದ್ದರು.
ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಅಪ್ರಾಪ್ತ ಸಂತ್ರಸ್ತೆಗೆ ಗರ್ಭಪಾತ ಮಾಡುವ ಸಂಬಂಧ ತಪಾಸಣೆ ನಡೆಸಿ, ವರದಿ ಸಲ್ಲಿಸಲು ವೈದ್ಯಕೀಯ ಮಂಡಳಿ ರಚಿಸುವಂತೆ ವಾಣಿ ವಿಲಾಸ ಆಸ್ಪತ್ರೆಯ ಚೀಫ್ ಸರ್ಜನ್ಗೆ ನಿರ್ದೇಶಿಸಿತ್ತು. ಕೋರ್ಟ್ ಆದೇಶದಂತೆ ರಚಿಸಲ್ಪಟ್ಟ ವೈದ್ಯಕೀಯ ಮಂಡಳಿ, ಸಂತ್ರಸ್ತೆಯನ್ನು ತಪಾಸಣೆಗೊಳಪಡಿಸಿ, ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಆ ವರದಿಯ ಅನುಸಾರ ಬಾಲಕಿಯ ಗರ್ಭಪಾತ ನಡೆಸಲು ಹೈಕೋರ್ಟ್ ಅನುವು ಮಾಡಿಕೊಟ್ಟಿದೆ.
Related Articles
Thank you for your comment. It is awaiting moderation.
Comments (0)