ಸಿ.ಪಿ. ಯೋಗೇಶ್ವರ್ ವಿರುದ್ಧ ಮಾನಹಾನಿ ಹೇಳಿಕೆ ನೀಡದಂತೆ ಪುತ್ರಿ ನಿಶಾ ಯೋಗೇಶ್ವರ್ಗೆ ಹೈಕೋರ್ಟ್ ನಿರ್ಬಂಧ
- by Jagan Ramesh
- November 4, 2024
- 98 Views
ಬೆಂಗಳೂರು: ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಸಿ.ಪಿ.ಯೋಗೇಶ್ವರ್ ವಿರುದ್ಧ ಅವರ ಮೊದಲ ಪತ್ನಿಯ ಪುತ್ರಿ ನಿಶಾ ಯೋಗೇಶ್ವರ್ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಮಾನಹಾನಿಕರ ಅಥವಾ ಅವಹೇಳನಕಾರಿ ಹೇಳಿಕೆ ನೀಡದಂತೆ ಹಾಗೂ ಅವರ ಹೇಳಿಕೆಗಳನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ಹೈಕೋರ್ಟ್ ನಿರ್ಬಂಧ ವಿಧಿಸಿದೆ.
ಸಿ.ಪಿ.ಯೋಗೇಶ್ವರ್ ಅವರ ಪತ್ನಿ ಪಿ.ವಿ. ಶೀಲಾ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ ಚಂದನಗೌಡರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಧ್ಯಂತರ ಆದೇಶ ಮಾಡಿದೆ.
ನಿಶಾ ಯೋಗೇಶ್ವರ್ ಅವರು ನಮ್ಮ ಕುಟುಂಬದ ಬಗ್ಗೆ ನಿಂದನಾತ್ಮಕ ಹೇಳಿಕೆ ನೀಡಬಾರದು. ಅವರ ಹೇಳಿಕೆಗಳನ್ನು ಪ್ರಕಟ ಮಾಡದಂತೆ ಪತ್ರಿಕೆ, ಸುದ್ದಿವಾಹಿನಿಗಳು, ಇನ್ಸ್ಟಾಗ್ರಾಂ, ಎಕ್ಸ್ ಕಾರ್ಪ್ (ಟ್ವಿಟರ್), ಗೂಗಲ್ ಮತ್ತು ಯೂಟ್ಯೂಬ್ ಜಾಲತಾಣಗಳಿಗೆ ನಿರ್ದೇಶಿಸಬೇಕು. ಈಗಾಗಲೇ ಪ್ರಸಾರ ಮಾಡಲಾಗಿರುವ ನಿಶಾ ಹೇಳಿಕೆಯ ವಿಡಿಯೋಗಳನ್ನು ತಡೆಹಿಡಿಯಲು ಆದೇಶಿಸಬೇಕು ಎಂಬ ಮನವಿಯನ್ನು ಪರಿಗಣಿಸಿದ ಹೈಕೋರ್ಟ್, ಈ ಮಧ್ಯಂತರ ಆದೇಶ ಮಾಡಿ ಅರ್ಜಿ ವಿಚಾರಣೆ ಮುಂದೂಡಿದೆ.
ಅರ್ಜಿದಾರರ ಮನವಿ ಏನು?
ಸಿ.ಪಿ.ಯೋಗೇಶ್ವರ್ ಉಪ ಚುನಾವಣೆಗೆ ಸ್ಪರ್ಧಿಸಿರುವ ಬೆನ್ನಲ್ಲೇ ಅವರ ಮೊದಲ ಪತ್ನಿಯ ಮಗಳಾದ ನಿಶಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಕುಟುಂಬದ ವಿರುದ್ಧ ಅವಹೇಳನಕಾರಿ, ಮಾನಹಾನಿಕಾರಕ, ಆಧಾರರಹಿತ ಮತ್ತು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆ ಹೇಳಿಕೆಗಳನ್ನು ಮಾಧ್ಯಮಗಳು ಪ್ರಸಾರ ಮಾಡುತ್ತಿವೆ. ಇದರಿಂದ, ನಮ್ಮ ಕುಟುಂಬದ ಗೌರವಕ್ಕೆ ಧಕ್ಕೆ ಉಂಟಾಗುತ್ತಿದೆ. ಈ ಕುರಿತು ಬೆಂಗಳೂರಿನ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ, ಈ ನಿಟ್ಟಿನಲ್ಲಿ ಸೂಕ್ತ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
Related Articles
Thank you for your comment. It is awaiting moderation.
Comments (0)