ತೆರಿಗೆ ವಿನಾಯಿತಿ ಸಾಬೀತುಪಡಿಸುವ ಶಾಲೆಗಳ ಮಾನ್ಯತಾ ನವೀಕರಣ ಅರ್ಜಿ ಪರಿಗಣಿಸಿ; ಶಿಕ್ಷಣ ಇಲಾಖೆಗೆ ಹೈಕೋರ್ಟ್ ಮಧ್ಯಂತರ ಆದೇಶ
- by Jagan Ramesh
- November 4, 2024
- 113 Views
ಬೆಂಗಳೂರು: ತೆರಿಗೆ ಪಾವತಿಯಿಂದ ವಿನಾಯಿತಿ ಹೊಂದಿರುವುದನ್ನು ರುಜುವಾತುಪಡಿಸುವ ಶಾಲೆಗಳ ಮಾನ್ಯತಾ ನವೀಕರಣ ಅರ್ಜಿಗಳನ್ನು ಪರಿಗಣಿಸುವಂತೆ ಶಿಕ್ಷಣ ಇಲಾಖೆಗೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.
ಶಾಲೆಗಳ ಮಾನ್ಯತಾ ನವೀಕರಣಕ್ಕೆ ಹಲವು ಷರತ್ತುಗಳನ್ನು ವಿಧಿಸಿ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು 2024ರ ಜುಲೈ 24ರಂದು ಹೊರಡಿಸಿರುವ ಸುತ್ತೋಲೆ ರದ್ದು ಕೋರಿ ‘ಕರ್ನಾಟಕ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘ’ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ಹಿರಿಯ ವಕೀಲ ವಿಕ್ರಂ ಹುಯಿಲಗೋಳ ಅವರ ವಾದ ಆಲಿಸಿದ ನ್ಯಾಯಪೀಠ, ತೆರಿಗೆ ಪಾವತಿಯಿಂದ ತಮಗೆ ವಿನಾಯಿತಿ ಇದೆ ಎಂದು ರುಜುವಾತುಪಡಿಸುವ ಶಾಲೆಗಳ ಮಾನ್ಯತಾ ನವೀಕರಣ ಅರ್ಜಿಗಳನ್ನು ಪರಿಗಣಿಸುವಂತೆ ಶಿಕ್ಷಣ ಇಲಾಖೆಗೆ ಮಧ್ಯಂತರ ಆದೇಶ ಹೊರಡಿಸಿತಲ್ಲದೆ, ಅರ್ಜಿ ಸಂಬಂಧ ಆಕ್ಷೇಪಣೆ ಸಲ್ಲಿಸುವಂತೆ ಪ್ರತಿವಾದಿಗಳಾದ ಶಾಲಾ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಆಯುಕ್ತರಿಗೆ ಸೂಚಿಸಿ ವಿಚಾರಣೆಯನ್ನು ನವೆಂಬರ್ 25ಕ್ಕೆ ಮುಂದೂಡಿತು.
ಅರ್ಜಿದಾರರ ಆಕ್ಷೇಪವೇನು?
ಶಾಲೆಗಳ ಮಾನ್ಯತಾ ನವೀಕರಣಕ್ಕೆ ಆಡಳಿತ ಮಂಡಳಿಗಳು ಪ್ರತಿ ವರ್ಷ ಅರ್ಜಿ ಸಲ್ಲಿಸಬೇಕು ಎನ್ನುವುದೂ ಸೇರಿ ತೆರಿಗೆ ಪಾವತಿ, ನಿವೇಶನ ಪತ್ರ, ಖಾತಾ ಪತ್ರ ಹಾಗೂ ಕಂದಾಯ ರಸೀದಿ ಸಲ್ಲಿಸಬೇಕು ಎಂಬ ಷರತ್ತುಗಳನ್ನು ವಿಧಿಸಿ ‘ಕರ್ನಾಟಕ ಶಿಕ್ಷಣ ಕಾಯ್ದೆ-1983’ರ ಸೆಕ್ಷನ್ 36ರ ಅಡಿ ಮತ್ತು ‘ಕರ್ನಾಟಕ ಶಿಕ್ಷಣ ಸಂಸ್ಥೆಗಳು (ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮಾನ್ಯತೆ) ನಿಯಮಗಳು-1999’ರ ನಿಯಮ 3ರ ಅನ್ವಯ ಶಾಲಾ ಶಿಕ್ಷಣ ಇಲಾಖೆ 2024ರ ಜುಲೈ 24ರಂದು ಸುತ್ತೋಲೆ ಹೊರಡಿಸಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಕರ್ನಾಟಕ ಶಿಕ್ಷಣ ಕಾಯ್ದೆಯ ಸೆಕ್ಷನ್ 36ರ ಪ್ರಕಾರ ಕಾಲ ಕಾಲಕ್ಕೆ ನವೀಕರಣ ಅಗತ್ಯವಿಲ್ಲ. ಅದೇ ರೀತಿ ಶಿಕ್ಷಣ ನಿಯಮಗಳು 1999ರ ಅನುಸಾರ ಮಾನ್ಯತಾ ನವೀಕರಣ ಅವಧಿ 10 ವರ್ಷ ಇದೆ. ಹೀಗಿರುವಾಗ, ಇವರೆಡಕ್ಕೂ ವಿರುದ್ಧವಾಗಿ ಸುತ್ತೋಲೆ ಹೊರಡಿಸಲಾಗಿದೆ. ತೆರಿಗೆ ಪಾವತಿ, ಖಾತಾ ಪತ್ರ, ಕಂದಾಯ ರಸೀದಿ ಇತ್ಯಾದಿ ಭೂ ಕಂದಾಯ ಕಾಯ್ದೆ ವ್ಯಾಪ್ತಿಗೆ ಒಳಪಡುತ್ತವೆ. ಅವುಗಳ ಉಲ್ಲಂಘನೆ ಆದಲ್ಲಿ, ಸಂಬಂಧಪಟ್ಟ ಕಾಯ್ದೆ ಅನ್ವಯ ಸಂಬಧಿಸಿದ ಪ್ರಾಧಿಕಾರಗಳು ಕ್ರಮ ಕೈಗೊಳ್ಳುತ್ತವೆ. ಆ ಷರತ್ತುಗಳನ್ನು ಶಿಕ್ಷಣ ಕಾಯ್ದೆಯಡಿ ವಿಧಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿರುವ ಅರ್ಜಿದಾರರು, ಶಿಕ್ಷಣ ಇಲಾಖೆಯ ಸುತ್ತೋಲೆ ರದ್ದುಪಡಿಸಬೇಕು ಎಂದು ಕೋರಿದ್ದಾರೆ.
Related Articles
Thank you for your comment. It is awaiting moderation.
Comments (0)