ಪತ್ತೆಯಾಗದ ಸಂತ್ರಸ್ತರಿಬ್ಬರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ; ರಾಜ್ಯ ಸರ್ಕಾರದಿಂದ ಹೈಕೋರ್ಟ್‌ಗೆ ಮಾಹಿತಿ

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಸಂಭವಿಸಿದ್ದ ಗುಡ್ಡ ಕುಸಿತ ಪ್ರಕರಣದಲ್ಲಿ 9 ಮಂದಿಯ ಮೃತದೇಹಗಳು ಪತ್ತೆಯಾಗಿದ್ದು, ಮತ್ತಿಬ್ಬರ ಮೃತದೇಹಗಳು ಪತ್ತೆಯಾಗಿಲ್ಲ. ಅವರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಪಾವತಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ಭೂ ಕುಸಿತದಿಂದ ಮಣ್ಣಿನಡಿ ಸಿಲುಕಿರುವವರ ರಕ್ಷಣೆ ಹಾಗೂ ಪತ್ತೆಗೆ ಕ್ರಮ ಜರುಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸುವಂತೆ ಕೋರಿ ಬೆಂಗಳೂರಿನ ವಕೀಲ ಸಿಜಿ ಮಲೈಯಿಲ್ ಹಾಗೂ ದೆಹಲಿಯ ವಕೀಲ ಕೆ.ಆರ್. ಸುಭಾಷ್‌ ಚಂದ್ರನ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್‌.ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ. ಅರವಿಂದ್‌ ಅವರಿದ್ದ ಪೀಠ ಸೋಮವಾರ ವಿಚಾರಣೆ ನಡೆಸಿತು.

ಕೇಂದ್ರ ಸರ್ಕಾರದ ಪರವಾಗಿ ಹಾಜರಾಗಿದ್ದ ಸಹಾಯಕ ಸಾಲಿಸಿಟರ್‌ ಜನರಲ್‌ ಎಚ್‌. ಶಾಂತಿಭೂಷಣ್‌, ಭೂಕುಸಿತದಿಂದಾಗಿ ಕಾಣೆಯಾಗಿದ್ದ ಲಾರಿ ಮತ್ತದರ ಚಾಲಕ ಅರ್ಜುನ್‌ ಮೃತದೇಹ ಪತ್ತೆಯಾಗಿರುವುದರಿಂದ ಅರ್ಜಿಯ ಉದ್ದೇಶ ಈಡೇರಿದಂತಾಗಿದೆ. ಒಟ್ಟು 11 ಮಂದಿಯಲ್ಲಿ 9 ಮಂದಿಯ ಮೃತದೇಹ ಪತ್ತೆಯಾದಂತಾಗಿದೆ. ಈ ಸಂಬಂಧ ಸೂಕ್ತವಾದ ಪ್ರಮಾಣಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದರು.

ರಾಜ್ಯ ಸರ್ಕಾರದ ಪರವಾಗಿ ಹಾಜರಿದ್ದ ವಕೀಲೆ ನಿಲೋಫರ್‌ ಅಕ್ಬರ್‌, ನಾಪತ್ತೆಯಾಗಿದ್ದ 11 ಮಂದಿಯಲ್ಲಿ ಒಟ್ಟು 9 ಜನರ ಮೃತದೇಹ ಪತ್ತೆಯಾಗಿದ್ದು, ಪರಿಹಾರ ಕಾರ್ಯಾಚರಣೆ ನಿಲ್ಲಿಸಲಾಗಿದೆ. ಪತ್ತೆಯಾಗದ ಇನ್ನಿಬ್ಬರ ಕುಟುಂಬದವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಲಾಗಿದ್ದು, ಪರಿಹಾರದ ಹಣ ಬಿಡುಗಡೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಅರ್ಜಿದಾರರ ಪರ ವಕೀಲರು, ಲಾರಿ ಚಾಲಕ ಅರ್ಜುನ್‌ ಮೃತದೇಹ ಪತ್ತೆಯಾಗಿದೆ. ಈ ಸಂಬಂಧ ನ್ಯಾಯಾಲಯ ಸೂಕ್ತ ಆದೇಶ ಮಾಡಬಹುದು ಎಂದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, ಪತ್ತೆಯಾಗದ ಇಬ್ಬರು ಸಂತ್ರಸ್ತರ ಕುಟುಂಬದವರಿಗೆ 2 ತಿಂಗಳ ಒಳಗೆ ತಲಾ ಐದು ಲಕ್ಷ ರೂ. ಪರಿಹಾರವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಬೇಕು ಎಂದು ಆದೇಶಿಸಿ, ಅರ್ಜಿ ಇತ್ಯರ್ಥಪಡಿಸಿತು.

Related Articles

Comments (0)

Leave a Comment