ದರ್ಶನ್‌ಗೆ ದೀಪಾವಳಿ ಉಡುಗೊರೆ; ಚಿಕಿತ್ಸೆಗಾಗಿ 6 ವಾರ ಮಧ್ಯಂತರ ಜಾಮೀನು ನೀಡಿದ ಹೈಕೋರ್ಟ್

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕಳೆದ ನಾಲ್ಕೂವರೆ ತಿಂಗಳಿಂದ ನ್ಯಾಯಾಂಗ ಬಂಧನದಲ್ಲಿದ್ದ ನಟ ದರ್ಶನ್‌‌ಗೆ ದೀಪಾವಳಿ ಉಡುಗೊರೆ ನೀಡಿರುವ ಹೈಕೋರ್ಟ್, ಬೆನ್ನುಹುರಿ ನೋವಿನ ಸಮಸ್ಯೆಗೆ ಚಿಕಿತ್ಸೆ ಪಡೆಯಲು 6 ವಾರಗಳ ಮಧ್ಯಂತರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ವೈದ್ಯಕೀಯ ಕಾರಣಕ್ಕಾಗಿ ಜಾಮೀನು ನೀಡಬೇಕು ಎಂದು ಕೋರಿ ನಟ ದರ್ಶನ್ ಸಲ್ಲಿಸಿದ್ದ ಮಧ್ಯಂತರ ಅರ್ಜಿಗೆ ಸಂಬಂಧಿಸಿದಂತೆ ವಾದ-ಪ್ರತಿವಾದ ಆಲಿಸಿ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ಪ್ರಕಟಿಸಿದ್ದು, ಮಧ್ಯಂತರ ಅರ್ಜಿ ಪುರಸ್ಕರಿಸಿದೆ.

ವೈದ್ಯಕೀಯ ಜಾಮೀನು ಕೋರಿರುವ ನಟ ದರ್ಶನ್‌ ಅವರ ಮಧ್ಯಂತರ ಅರ್ಜಿಯನ್ನು ಆರು ವಾರಗಳಿಗೆ ಸೀಮಿತಗೊಳಿಸಿ ಪುರಸ್ಕರಿಸಲಾಗಿದೆ. ದರ್ಶನ್‌ ತಮ್ಮ ಪಾಸ್‌ಪೋರ್ಟ್‌ ಅನ್ನು ವಿಚಾರಣಾ ನ್ಯಾಯಾಲಯದ ವಶಕ್ಕೆ ಸಲ್ಲಿಸಬೇಕು. ಅರ್ಜಿದಾರರು ತಮ್ಮ ಇಚ್ಛೆಯ ಆಸ್ಪತ್ರೆಯಲ್ಲಿ ತಕ್ಷಣ ಚಿಕಿತ್ಸೆಗೆ ಒಳಗಾಗಬಹುದು. ಆರೋಗ್ಯ ಪರಿಸ್ಥಿತಿ, ಪ್ರಸ್ತಾವಿತ ಚಿಕಿತ್ಸೆ ಮತ್ತು ಎಷ್ಟು ದಿನ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ ಮತ್ತು ಆನಂತರದ ಚಿಕಿತ್ಸೆಗೆ ಸಂಬಂಧಿಸಿದಂತೆ ಒಂದು ವಾರದಲ್ಲಿ ವರದಿ ಸಲ್ಲಿಸಬೇಕು ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ. ಆದೇಶದ ವಿಸ್ತೃತ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ಸದ್ಯ ದರ್ಶನ್ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿದ್ದು, ಜಾಮೀನು ಪ್ರಕ್ರಿಯೆಗಳು ಪೂರ್ಣಗೊಂಡರೆ ಇಂದೇ ಕಾರಾಗೃಹದಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ.

Related Articles

Comments (0)

Leave a Comment