ಟಿಕೆಟ್ ಆಮಿಷವೊಡ್ಡಿ ಹಣ ಸುಲಿಗೆ ಆರೋಪ; ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಹೋದರ ಮತ್ತಿಬ್ಬರ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆ
- by Jagan Ramesh
- October 28, 2024
- 28 Views
ಬೆಂಗಳೂರು: ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಆಮಿಷವೊಡ್ಡಿ 2 ಕೋಟಿ ರೂ. ಸುಲಿಗೆ ಮಾಡಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಗೋಪಾಲ ಜೋಶಿ ಸೇರಿ ಮೂವರ ವಿರುದ್ಧದ ತನಿಖೆಗೆ ಮಧ್ಯಂತರ ತಡೆಯಾಜ್ಞೆ ನೀಡಿರುವ ಹೈಕೋರ್ಟ್, ಪೊಲೀಸ್ ಕಸ್ಟಡಿಯಲ್ಲಿರುವವರನ್ನು ಬಿಡುಗಡೆ ಮಾಡುವಂತೆ ಆದೇಶಿಸಿದೆ.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಸಹೋದರ ಹುಬ್ಬಳ್ಳಿಯ ಗೋಪಾಲ ಜೋಶಿ ಮತ್ತು ಅಜಯ್ ಜೋಶಿ ಹಾಗೂ ಬೆಂಗಳೂರಿನ ವಿಜಯಲಕ್ಷ್ಮೀ ಜೋಶಿ ಎಸ್. ಜಿ. ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಕೊಡಿಸಲು 25 ಲಕ್ಷ ರೂ. ಪಡೆದಿದ್ದಾರೆ ಎನ್ನಲಾಗಿದೆ. ಇದು ಚುನಾವಣೆಗೂ ಮುನ್ನ ನಡೆದಿರುವ ಘಟನೆ. ಟಿಕೆಟ್ ಸಿಗದಿರುವುದು ಗೊತ್ತಾದ ನಂತರವೇ ದೂರುದಾರರಾದ ಸುನೀತಾ ಚವ್ಹಾಣ್ ದೂರು ದಾಖಲಿಸಬಹುದಿತ್ತು. ಆದರೆ, ಆರು ತಿಂಗಳ ಬಳಿಕ ಅಕ್ಟೋಬರ್ 17ರಂದು ದೂರು ದಾಖಲಿಸಲಾಗಿದೆ. ಈ ನಡುವೆ, ಪಡೆದಿರುವ ಹಣವನ್ನು ಹಿಂದಿರುಗಿಸುವುದಾಗಿ ಆರೋಪಿಗಳು ಹೇಳುತ್ತಲೇ ಬಂದಿದ್ದಾರೆ. ಹೀಗಾಗಿ, ಇದು ಹಣದ ವಿವಾದವಾಗಿದೆ. ಇದಕ್ಕೆ ಈಗ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ದೌರ್ಜನ್ಯ ನಿಷೇಧ ಕಾಯ್ದೆ ಬಣ್ಣ ನೀಡಲಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಅರ್ಜಿದಾರರ ಮನೆಯಲ್ಲಿ ಜಾತಿ ನಿಂದನೆಯಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ಅದು ಸಾರ್ವಜನಿಕ ಸ್ಥಳವಲ್ಲ. ನಾಲ್ಕು ಗೋಡೆಗಳ ನಡುವೆ ನಡೆದಿರುವ ಘಟನೆ ಇದಾಗಿದೆ. ಆದ್ದರಿಂದ, ಎಸ್ಸಿ/ಎಸ್ಟಿ ಕಾಯ್ದೆ ಸೆಕ್ಷನ್ 3(1) ಆರ್ ಮತ್ತು ಎಸ್ ಅಡಿ ಅಪರಾಧ ಎನಿಸುವುದಿಲ್ಲ. ಹೀಗಿರುವಾಗ, ಪ್ರಕರಣದ ಮುಂದಿನ ಪ್ರಕ್ರಿಯೆ/ತನಿಖೆಗೆ ಅನುಮತಿಸುವುದು ಲಲಿತ್ ಚತುರ್ವೇದಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೀರ್ಪಿಗೆ ವಿರುದ್ಧವಾಗಲಿದೆ. ಆದ್ದರಿಂದ, ತನಿಖೆ ಹಾಗೂ ದೂರಿಗೆ ಸಂಬಂಧಿಸಿದಂತೆ ಕೈಗೊಂಡಿರುವ ಎಲ್ಲ ಕ್ರಮಗಳಿಗೆ ಮಧ್ಯಂತರ ತಡೆಯಾಜ್ಞೆ ವಿಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಕಸ್ಟಡಿಯಲ್ಲಿರುವ ಅರ್ಜಿದಾರರನ್ನು ಕಾನೂನಿನ ಅನ್ವಯ ಬಿಡುಗಡೆ ಮಾಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ಅರ್ಜಿದಾರರ ವಾದವೇನು?
ಇದಕ್ಕೂ ಮುನ್ನ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಡಿ.ಆರ್.ರವಿಶಂಕರ್, ಈ ಪ್ರಕರಣ ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪಕ್ಕೆ ಸಂಬಂಧಿಸಿದ್ದಾಗಿದೆ. ಕಳೆದ ಮಾರ್ಚ್, ಏಪ್ರಿಲ್, ಮೇ ಹಾಗೂ ಆಗಸ್ಟ್ನಲ್ಲಿ ಘಟನಾವಳಿ ನಡೆದಿದೆ ಎಂದು ಆಪಾದಿಸಲಾಗಿದೆ. 2024ರ ಮಾರ್ಚ್ನಲ್ಲಿ ಲೋಕಸಭಾ ಟಿಕೆಟ್ ಪಡೆಯಲು ಚೆಕ್ ಮೂಲಕ 25 ಲಕ್ಷ ರೂ. ನೀಡಲಾಗಿದೆ. ಆನಂತರ 1.75 ಕೋಟಿ ರೂ. ಕೈ ಸಾಲ ಪಡೆಯಲಾಗಿದೆ. ಇದಕ್ಕೆ ಮೂರನೇ ಆರೋಪಿ ಅಜಯ್ ಜೋಶಿ ಗ್ಯಾರಂಟಿ ನೀಡುವುದಾಗಿ ಹೇಳಿದ್ದಾರೆ. ಅರ್ಜಿದಾರರು ಹಣ ಹಿಂತಿರುಗಿಸಲು ಒಪ್ಪಿದ್ದರೂ ಇದೇ 17ರಂದು ಪ್ರಕರಣ ದಾಖಲಿಸಿದ್ದಾರೆ. ಆ ಸಂಬಂಧ ಗೋಪಾಲ ಜೋಶಿ ಸೇರಿ ನಾಲ್ವರನ್ನು ಬಂಧಿಸಲಾಗಿದ್ದು, ಇಬ್ಬರನ್ನು ಪೊಲೀಸ್ ಕಸ್ಟಡಿಗೆ, ಇನ್ನಿಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹಾಗಾಗಿ, ಪ್ರಕರಣದ ಎಫ್ಐಆರ್ ಮತ್ತು ಮುಂದಿನ ಕ್ರಮಗಳಿಗೆ ತಡೆ ನೀಡಬೇಕು ಮತ್ತು ಅರ್ಜಿದಾರರ ಬಿಡುಗಡೆಗೆ ಆದೇಶ ನೀಡಬೇಕು ಎಂದು ಕೋರಿದರು.
Related Articles
Thank you for your comment. It is awaiting moderation.
Comments (0)