ಎಚ್‌.ಡಿ. ರೇವಣ್ಣ ಆಯ್ಕೆ ಅಸಿಂಧು ಕೋರಿದ ಅರ್ಜಿ ವಿಚಾರಣೆ ನ.25ಕ್ಕೆ; ಚುನಾವಣಾ ಅಕ್ರಮವೆಸಗಿದ ಆರೋಪ

ಬೆಂಗಳೂರು: ಹೊಳೆನರಸೀಪುರ ಜೆ‌ಡಿಎಸ್ ಶಾಸಕ ಎಚ್.ಡಿ. ರೇವಣ್ಣ ಅವರ ಆಯ್ಕೆ ಅಸಿಂಧುಗೊಳಿಸಲು ಕೋರಿ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ನವೆಂಬರ್ 25ಕ್ಕೆ ಮುಂದೂಡಿದೆ.

ರೇವಣ್ಣ ಅವರು ವ್ಯಾಪಕ ಚುನಾವಣಾ ಅಕ್ರಮಗಳನ್ನು ಎಸಗಿ ಗೆದ್ದಿದ್ದು, ಅವರ ಆಯ್ಕೆ ಅಸಿಂಧುಗೊಳಿಸುವಂತೆ ಕೋರಿ ಪರಾಜಿತ ಬಿಜೆಪಿ ಅಭ್ಯರ್ಥಿ ಡಿ.ದೇವರಾಜೇಗೌಡ ಸಲ್ಲಿಸಿರುವ ಚುನಾವಣಾ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ ಹಾಜರಾಗಿ, ಪ್ರತಿವಾದಿಗಳ ಪರ ವಕೀಲರು ವಾದ ಮಂಡಿಸಬೇಕಿದೆ. ಅದಾದ ಬಳಿಕ ತಮ್ಮ ವಾದ ಮಂಡನೆ ಇರುತ್ತದೆ. ಅದಕ್ಕಾಗಿ ಸ್ವಲ್ಪ ದೀರ್ಘ ಸಮಯ ಕೊಡಬೇಕು ಎಂದು ಮನವಿ ಮಾಡಿದರು.

ಈ ಮಧ್ಯೆ, ಅರ್ಜಿ ವಾಪಸ್ ಪಡೆಯುವುದಾಗಿ ಹೇಳಿದಿರಂತೆ ಎಂದು ನ್ಯಾಯಪೀಠ ವಕೀಲರನ್ನು ಪ್ರಶ್ನಿಸಿತು. ಅದಕ್ಕೆ ಪ್ರತಿಕ್ರಿಯಿಸಿದ ಪ್ರಮೀಳಾ ನೇಸರ್ಗಿ, ನಾವು ಅರ್ಜಿ ಹಿಂಪಡೆದರೆ ಬೇರೆ ಯಾರಾದರೂ ಅರ್ಜಿದಾರರು ಆಗಬಹುದು ಎಂದು ಕಾಯ್ದೆ ಹೇಳುತ್ತದೆ. ಆದ್ದರಿಂದ, ಅದಕ್ಕೆ ನಾನು ಅವಕಾಶ ನೀಡುವುದಿಲ್ಲ ಎಂದರು.

ಅರ್ಜಿದಾರ ಹಾಗೂ ಪ್ರತಿವಾದಿಗಳ ಪರ ವಕೀಲರಿಬ್ಬರೂ ವಾದ ಮಂಡನೆಗೆ ಸಮಯ ಕೇಳಿದ್ದರಿಂದ ನ್ಯಾಯಪೀಠ ವಿಚಾರಣೆಯನ್ನು ನವೆಂಬರ್ 25ಕ್ಕೆ ಮುಂದೂಡಿತು.

ಚುನಾವಣಾ ಅಕ್ರಮಗಳಿಂದ ಎಚ್.ಡಿ. ರೇವಣ್ಣ ಜಯಗಳಿಸಿದ್ದಾರೆ. 2ನೇ ಸ್ಥಾನದಲ್ಲಿದ್ದ ಶ್ರೇಯಸ್ ಪಟೇಲ್ ಮತದಾರರಿಗೆ ಆಮಿಷ ಒಡ್ಡಿದ್ದಾರೆ. ಆದ್ದರಿಂದ, ಇವರಿಬ್ಬರ ಮತಗಳಿಕೆಯನ್ನು ಅಸಿಂಧುಗೊಳಿಸುವಂತೆ ಬಿಜೆಪಿ ಪರಾಜಿತ ಅಭ್ಯರ್ಥಿ ದೇವರಾಜೇಗೌಡ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

Related Articles

Comments (0)

Leave a Comment