ಎನ್‌ಸಿ‌ಆರ್ ಬೆನ್ನಲ್ಲೇ ಎಫ್‌ಐ‌ಆರ್ ದಾಖಲಿಸಿದ್ದೇಕೆ?; ಅಮೃತಹಳ್ಳಿ ಠಾಣಾಧಿಕಾರಿಯಿಂದ ವಿವರಣೆ ಕೇಳಿದ ಹೈಕೋರ್ಟ್

ಬೆಂಗಳೂರು: ಉದ್ಯಮಿ ವಿಜಯ್ ತಾತಾಗೆ ಬೆದರಿಕೆಯೊಡ್ಡಿದ ಆರೋಪಕ್ಕೆ ಸಂಬಂಧಿಸಿದಂತೆ ಮೊದಲು ಎನ್‌ಸಿಆರ್‌ ದಾಖಲಿಸಿ ಹಿಂಬರಹ ನೀಡಿ, ಆನಂತರ ಎಫ್‌ಐಆರ್‌ ದಾಖಲಿಸಿರುವುದು ಏಕೆ ಎಂಬ ಬಗ್ಗೆ ವಿವರಣೆ ನೀಡುವಂತೆ ಬೆಂಗಳೂರಿನ ಅಮೃತಹಳ್ಳಿ ಠಾಣಾಧಿಕಾರಿಗೆ ಹೈಕೋರ್ಟ್ ನಿರ್ದೇಶಿಸಿದೆ.

ಪ್ರಕರಣ ರದ್ದುಕೋರಿ ಜೆಡಿಎಸ್ ಮುಖಂಡ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಎಂ. ರಮೇಶ್ ಗೌಡ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ಹಿರಿಯ ವಕೀಲ ಪ್ರಭುಲಿಂಗ ನಾವದಗಿ, ಪ್ರಕರಣ ಸಂಬಂಧ ಅಕ್ಟೋಬರ್ 3ರಂದು ದೂರು ನೀಡಿದಾಗ ಪೊಲೀಸರು ಎನ್‌ಸಿಆರ್ ದಾಖಲಿಸಿದ್ದರು. ಆದರೆ, ಅದೇ ದಿನ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ ಎಂಬ ಅಂಶವನ್ನು ನ್ಯಾಯಾಲಯದ ಗಮನಕ್ಕೆ ತಂದರು.

ಆಗ ನ್ಯಾಯಪೀಠ, ಒಂದೇ ದೂರಿನ ಮೇಲೆ ಹಿಂಬರಹ ಆನಂತರ ಎಫ್‌ಐಆರ್‌ ದಾಖಲಿಸಿರುವುದು ಹೇಗೆ? ಇಲ್ಲಿ ಯಾವ ರೀತಿಯ ಚಂಚಲತೆ ನಡೆಯುತ್ತಿದೆ? ಇದೇ ಸಮಸ್ಯೆ. ನಾವು ಇಲ್ಲಿ ಮಧ್ಯಪ್ರವೇಶ ಮಾಡಬೇಕೆ ಅಥವಾ ಬೇಡವೇ? ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿತಲ್ಲದೆ, ಈ ಬಗ್ಗೆ ಅಕ್ಟೋಬರ್ 29ರಂದು ವಿವರಣೆ ನೀಡಬೇಕು ಎಂದು ಅಮೃತಹಳ್ಳಿ ಠಾಣಾಧಿಕಾರಿಗೆ ನಿರ್ದೇಶಿಸಿತು.

ಸರ್ಕಾರದ ಪರವಾಗಿ ಹಾಜರಿದ್ದ ಹೆಚ್ಚುವರಿ ಎಸ್‌ಪಿಪಿ ಬಿ.ಎನ್. ಜಗದೀಶ್ ಅವರು, ಅಲ್ಲಿಯವರೆಗೆ ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸುವುದಿಲ್ಲ ಎಂದು ನ್ಯಾಯಪೀಠಕ್ಕೆ ಭರವಸೆ ನೀಡಿದರು. ಅದನ್ನು ದಾಖಲಿಸಿಕೊಂಡ ನ್ಯಾಯಾಲಯ ವಿಚಾರಣೆಯನ್ನು ಅಕ್ಟೋಬರ್ 29ಕ್ಕೆ ಮುಂದೂಡಿತು.

Related Articles

Comments (0)

Leave a Comment