ಎಸ್ಸಿ-ಎಸ್ಟಿ ಹಾಸ್ಟೆಲ್‌ಗಳ ವಾರ್ಡನ್ ಹುದ್ದೆ ಭರ್ತಿ; ಹಣಕಾಸು ಇಲಾಖೆ ಕಾರ್ಯದರ್ಶಿಗೆ ಹೈಕೋರ್ಟ್ ನೋಟಿಸ್

ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆ ಅಧೀನದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ಎಸ್ಸಿ-ಎಸ್ಟಿ) ವಿದ್ಯಾರ್ಥಿಗಳ ಹಾಸ್ಟೆಲ್‌ನಲ್ಲಿ ಹಿರಿಯ ಮತ್ತು ಕಿರಿಯ ವಾರ್ಡನ್‌ ಹುದ್ದೆಗಳನ್ನು ಭರ್ತಿ ಮಾಡುವ ವಿಚಾರ ಸಂಬಂಧ ರಾಜ್ಯ ಹಣಕಾಸು ಇಲಾಖೆ ಕಾರ್ಯದರ್ಶಿಗೆ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ.

ರಾಜ್ಯದ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳ ಹಾಸ್ಟೆಲ್‌ಗಳಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಕಲ್ಪಿಸಿರುವ ಮತ್ತು ಈ ಹಾಸ್ಟೆಲ್‌ಗಳಲ್ಲಿ ವಾರ್ಡನ್‌ ಹುದ್ದೆಗಳು ಖಾಲಿಯಿರುವ ಕುರಿತು ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಸರ್ಕಾರದ ಪರ ವಕೀಲರು ಹಾಜರಾಗಿ, ರಾಜ್ಯದ ಎಸ್ಸಿ-ಎಸ್ಟಿ ಹಾಸ್ಟೆಲ್‌ಗಳಲ್ಲಿ ವಾರ್ಡನ್‌ ಹುದ್ದೆಗಳ ಕೊರತೆ ಸಂಬಂಧ ವರದಿ ಸಲ್ಲಿಸುವಂತೆ ಈ ಹಿಂದಿನ ವಿಚಾರಣೆಯಲ್ಲಿ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿತ್ತು. ಸದ್ಯ ವರದಿ ಸಿದ್ಧವಾಗಿದ್ದು, ಅದನ್ನು ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಕೋರಿದರು.

ಅರ್ಜಿ ವಿಚಾರಣೆಯಲ್ಲಿ ನ್ಯಾಯಾಲಯಕ್ಕೆ ಸೂಕ್ತ ನೆರವು ಒದಗಿಸಲು ಅಮೈಕಸ್‌ ಕ್ಯೂರಿ ಆಗಿ ನಿಯೋಜನೆಗೊಂಡಿರುವ ವಕೀಲ ನಿತಿನ್‌ ರಮೇಶ್‌, ಪ್ರಕರಣದಲ್ಲಿ ಮೊದಲಿಗೆ ಹಾಸ್ಟೆಲ್‌ಗಳಲ್ಲಿ ಖಾಲಿಯಿರುವ ಹಿರಿಯ ಹಾಗೂ ಕಿರಿಯ ವಾರ್ಡನ್‌ ಹುದ್ದೆಗಳು ಭರ್ತಿಯಾಗಬೇಕಿದೆ. ಇಲ್ಲವಾದರೆ ಹಾಸ್ಟೆಲ್‌ಗಳಿಗೆ ಮೇಲ್ವಿಚಾರಕರೇ ಇಲ್ಲದಂತಾಗುತ್ತದೆ. ವಾರ್ಡನ್‌ಗಳ ಭರ್ತಿ ಪ್ರಸ್ತಾವನೆ ರಾಜ್ಯ ಹಣಕಾಸು ಇಲಾಖೆ ಮುಂದೆ ಬಾಕಿಯಿದೆ. ರಾಜ್ಯದ ಹಲವು ನೀತಿ ಪ್ರಸ್ತಾವನೆಗಳು ಹಣಕಾಸು ಇಲಾಖೆ ಮುಂದೆ ನೆನಗುದಿಗೆ ಬಿದ್ದಿರುತ್ತವೆ. ಎಲ್ಲ ಹುದ್ದೆಗಳ ಭರ್ತಿಗೆ ಹಣಕಾಸು ಮಂಜೂರಾತಿ ಕುರಿತ ಆಕ್ಷೇಪಣೆಗಳು ಹಣಕಾಸು ಇಲಾಖೆ ಹಂತದಲ್ಲಿ ಎದುರಾಗುತ್ತವೆ ಎಂದು ವಿವರಿಸಿದರು.

ಹಣಕಾಸು ಇಲಾಖೆ ಕಾರ್ಯದರ್ಶಿ ಪ್ರತಿವಾದಿ:
ಪ್ರಕರಣದಲ್ಲಿ ನೀತಿ ನಿರ್ಣಯದ ಜತೆಗೆ ಹಣಕಾಸು ನಿರ್ಣಯವೂ ಬಹಳ ಮುಖ್ಯವಾಗುತ್ತದೆ. ವಾರ್ಡನ್‌ ಹುದ್ದೆಗಳ ನೇಮಕಾತಿಯಲ್ಲಿ ಸರ್ಕಾರದ ವಿವಿಧ ಇಲಾಖೆಗಳೊಂದಿಗೆ ಸಹಕಾರ ಹಾಗೂ ಸಮನ್ವಯ ಸಾಧಿಸಲು ಅರ್ಜಿಯಲ್ಲಿ ಹಣಕಾಸು ಇಲಾಖೆಯ ಕಾರ್ಯದರ್ಶಿಯನ್ನು ಹೆಚ್ಚುವರಿ ಪ್ರತಿವಾದಿಯಾಗಿ ಸೇರ್ಪಡೆ ಮಾಡುವುದು ಸೂಕ್ತ ಎಂದು ವಕೀಲ ನಿತಿನ್ ರಮೇಶ್ ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಟ್ಟರು.

ಈ ಸಲಹೆಗೆ ಒಪ್ಪಿದ ನ್ಯಾಯಪೀಠ, ರಾಜ್ಯ ಹಣಕಾಸು ಇಲಾಖೆ ಕಾರ್ಯದರ್ಶಿಯನ್ನು ಅರದಜಿಯಲ್ಲಿ ಪ್ರತಿವಾದಿಯಾಗಿ ಸೇರ್ಪಡೆಗೊಳಿಸಲು ನಿರ್ದೇಶಿಸಿತು. ಬಳಿಕ, ಅವರಿಗೆ ನೋಟಿಸ್‌ ಜಾರಿಗೊಳಿಸಿದ ನ್ಯಾಯಪೀಠ, ಹಿರಿಯ ಹಾಗೂ ಕಿರಿಯ ವಾರ್ಡನ್‌‌ಗಳ ಕೊರತೆ ಬಗ್ಗೆ ಸರ್ಕಾರಿ ವಕೀಲರು ವರದಿ ಸಲ್ಲಿಸಬೇಕು ಎಂದು ಸೂಚಿಸಿ ವಿಚಾರಣೆಯನ್ನು ನವೆಂಬರ್ 14ಕ್ಕೆ ಮುಂದೂಡಿತು.

Related Articles

Comments (0)

Leave a Comment