ಅತ್ಯಾಚಾರ ಆರೋಪ; ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ವಜಾ
- by Jagan Ramesh
- October 21, 2024
- 261 Views
ಬೆಂಗಳೂರು: ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಒಂದು ಜಾಮೀನು ಹಾಗೂ ಎರಡು ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿದೆ.
ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಮಹಿಳೆಯ ಘನತೆಗೆ ಧಕ್ಕೆ ತಂದ ಹಾಗೂ ಜೀವ ಬೆದರಿಕೆ ಒಡ್ಡಿದ ಆರೋಪ ಸಂಬಂಧ ನಾಲ್ಕು ಪ್ರತ್ಯೇಕ ಎಫ್ಐಆರ್ಗಳು ದಾಖಲಾಗಿದ್ದು, ಈ ಎಲ್ಲ ಪ್ರಕರಣಗಳಲ್ಲಿ ಜಾಮೀನು ಹಾಗೂ ನಿರೀಕ್ಷಣಾ ಜಾಮೀನು ಕೋರಿ ಪ್ರಜ್ವಲ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಗಳ ಕುರಿತು ಸುದೀರ್ಘ ವಾದ-ಪ್ರತಿವಾದ ಆಲಿಸಿ, ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ಪ್ರಕಟಿಸಿದ್ದು, ಪ್ರಜ್ವಲ್ ಅವರ ಒಂದು ಜಾಮೀನು ಹಾಗೂ ಎರಡು ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ವಜಾಗೊಳಿಸಿ ಆದೇಶಿಸಿದೆ. ಮತ್ತೊಂದು ನಿರೀಕ್ಷಣಾ ಜಾಮೀನು ಅರ್ಜಿಗೆ ಸಂಬಂಧಿಸಿದ ಆದೇಶ ಪ್ರಕಟ ಬಾಕಿ ಉಳಿದಿದೆ.
ಮೇಲ್ನೋಟಕ್ಕೆ ಅರ್ಜಿದಾರರು ಎಸಗಿದ್ದಾರೆನ್ನಲಾದ ಕೃತ್ಯಗಳು ಲಂಪಟ, ಇಂದ್ರಿಯಗಳ ಮೇಲೆ ನಿಯಂತ್ರಣ ಕಳೆದುಕೊಂಡಿರುವುದು ಮತ್ತು ಸ್ವಾಸ್ಥ್ಯ ಸಮಾಜದ ಬೆನ್ನುಹುರಿಗೆ ಚಳಿ ಹುಟ್ಟಿಸುವುದನ್ನು ಚಿತ್ರಿಸುತ್ತಿದೆ. ಆದ್ದರಿಂದ, ಅರ್ಜಿದಾರರು ಜಾಮೀನು ಪಡೆಯಲು ಅರ್ಹರಾಗಿಲ್ಲ ಎಂದು ಆದೇಶದಲ್ಲಿ ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಮೂರು ಪ್ರತ್ಯೇಕ ಅರ್ಜಿಗಳ ಸಂಬಂಧ ದೂರುದಾರರು ದಾಖಲಿಸಿರುವ ಎಫ್ಐಆರ್ನ ಪ್ರತಿ, ಅದರಲ್ಲಿ ದೂರುದಾರೆ/ಸಂತ್ರಸ್ತೆಯರು ನೀಡಿರುವ ಹೇಳಿಕೆಗಳು ಮತ್ತು ಲೈಂಗಿಕ ದೌರ್ಜನ್ಯದ ವಿಡಿಯೊಗಳಲ್ಲಿ ಪ್ರಜ್ವಲ್ ರೇವಣ್ಣ ನಡೆಸಿರುವ ಸಂಭಾಷಣೆ ಕುರಿತ ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್ಎಸ್ಎಲ್) ವರದಿಯಲ್ಲಿ ತಿಳಿಸಿರುವ ಅಂಶಗಳನ್ನು ಆದೇಶದಲ್ಲಿ ಉಲ್ಲೇಖಿಸಿದೆ.
ಈ ಆದೇಶದಲ್ಲಿ ನ್ಯಾಯಾಲಯ ವ್ಯಕ್ತಪಡಿಸಿರುವ ಅಭಿಪ್ರಾಯಗಳು ಕೇವಲ ಜಾಮೀನು ಅರ್ಜಿಗಳ ಪರಿಗಣಿಸಲು ಮಾತ್ರ ಸೀಮಿತವಾಗಿದೆಯೇ ಹೊರತು ಅರ್ಜಿದಾರರ ವಿರುದ್ಧ ಬಾಕಿಯಿರುವ ಯಾವುದೇ ಪ್ರಕ್ರಿಯೆಗೆ ಅನ್ವಯಿಸುವುದಿಲ್ಲ ಎಂದು ನ್ಯಾಯಪೀಠ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ತೀರ್ಪಿನಲ್ಲೇನಿದೆ?
ಪ್ರಕರಣ ಸಂಬಂಧ ಪ್ರಸರಣ/ಹಂಚಿಕೆಯಾಗಿರುವ ವಿಡಿಯೊಗಳನ್ನು ಎಫ್ಎಸ್ಐಲ್ಗೆ ಕಳುಹಿಸಲಾಗಿತ್ತು. ಎಫ್ಎಸ್ಎಲ್ ವರದಿ ಗಮನಿಸಿ, ಅರ್ಜಿದಾರರು ಜಾಮೀನಿಗೆ ಅರ್ಹರೇ ಎಂಬ ಪ್ರಶ್ನೆಯನ್ನು ಪರಿಶೀಲಿಸಿದಾಗ ಖಂಡಿತವಾಗಿಯೂ ಇಲ್ಲ ಎಂಬ ಉತ್ತರ ಮೂಡುತ್ತದೆ. ಅರ್ಜಿದಾರರು ಎಸಗಿದ್ದಾರೆ ಎನ್ನಲಾದ ಕೃತ್ಯವೂ ಹೀನಾಯವಾಗಿದೆ. ಅವರ ಮೇಲಿರುವ ಆರೋಪಗಳು ಗಂಭೀರ ಸ್ವರೂಪದಿಂದ ಕೂಡಿವೆ. ಸಮಾಜದಲ್ಲಿ ಉನ್ನತ ಸ್ಥಾನ ಹೊಂದಿರುವ ಕಾರಣದಿಂದ ಅರ್ಜಿದಾರರಿಗೆ ಈ ಅಪರಾಧಗಳನ್ನು ಮಾಡುವ ಮತ್ತು ಸಾಕ್ಷಿಗಳಿಗೆ ಬೆದರಿಕೆ ಒಡ್ಡುವ ಪ್ರವೃತ್ತಿಯು ದೊಡ್ಡದಾಗಿದೆ. ಮೇಲ್ನೋಟಕ್ಕೆ ಅರ್ಜಿದಾರರು ಕೃತ್ಯ ಎಸಗಿರುವುದು ಕಂಡುಬರುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಪ್ರಕರಣ ದಾಖಲಾಗದ ನಂತರವೂ ಅರ್ಜಿದಾರರು ತನಿಖೆಗೆ ಸಹಕರಿಸಿಲ್ಲ. 32 ದಿನಗಳಿಗೂ ಅಧಿಕ ಕಾಲ ಜರ್ಮನಿಯಲ್ಲಿದ್ದರು. ಇದರಿಂದ, ಜಾಮೀನು ನೀಡಿದರೆ ಅರ್ಜಿದಾರ ತಲೆಮರೆಸಿಕೊಳ್ಳುವ ಅಥವಾ ಪಲಾಯನ ಮಾಡುವ ಸಾಧ್ಯತೆ ಹೆಚ್ಚಿದೆ. ಇಡೀ ಪ್ರಕರಣ ಗಮನಿಸಿದರೆ ಅರ್ಜಿದಾರರು ಸಾಕ್ಷಿಗಳಿಗೆ ಬೆದರಿಕೆಯೊಡ್ಡುವಲ್ಲಿ ಭಾಗಿಯಾಗಿರುವ ಆರೋಪ ದಟ್ಟವಾಗಿದೆ. ಅರ್ಜಿದಾರರು ಎಸಗಿದ್ದಾರೆನ್ನಲಾದ ಕೃತ್ಯ ಒಂದೆರಡು ಬಾರಿಯಲ್ಲ. ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಸಾಕ್ಷಿಗಳ ಬೆದರಿಕೆ ಕೃತ್ಯದಲ್ಲಿ ಪದೇಪದೆ ಭಾಗಿಯಾಗಿದ್ದಾರೆ ಎಂಬ ಆರೋಪ ಅವರ ಮೇಲಿದೆ. ಆದ್ದರಿಂದ, ಅವರಿಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
Related Articles
Thank you for your comment. It is awaiting moderation.
Comments (0)