ಹೃದ್ರೋಗ ಸಂಸ್ಥೆಯ ಹೃದಯವೇ ಸರಿಯಾದ ಸ್ಥಳದಲ್ಲಿಲ್ಲ; ಜಯದೇವ ಸ್ಟಾಫ್ ನರ್ಸ್ ಸೇವೆ ಕಾಯಮಾತಿಗೆ ಹೈಕೋರ್ಟ್ ಆದೇಶ

ಬೆಂಗಳೂರು: ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಅಂದಾಜು 20 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸಿದ್ದ ನರ್ಸ್‌ಗಳ ಸೇವೆ ಕಾಯಂಗೊಳಿಸುವಂತೆ ಆದೇಶಿಸಿರುವ ಹೈಕೋರ್ಟ್, ‘ಹೃದ್ರೋಗ ಸಂಸ್ಥೆಯ ಹೃದಯವೇ ಸರಿಯಾದ ಸ್ಥಳದಲ್ಲಿಲ್ಲ’ ಎಂದು ಮಾರ್ಮಿಕವಾಗಿ ನುಡಿದಿದೆ.

ಬಿ.ಜೆ.ರಾಣಿ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್‌.ಎಸ್‌. ಸಂಜಯಗೌಡ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದ್ದು, ನರ್ಸ್‌ಗಳ ಸೇವೆಯನ್ನು ಕಾಯಂಗೊಳಿಸಲಾಗದು ಎಂದು ಜಯದೇವ ಹೃದ್ರೋಗ ಸಂಸ್ಥೆ ನೀಡಿದ್ದ ಹಿಂಬರಹವನ್ನು ರದ್ದುಗೊಳಿಸಿದೆ.

ಅರ್ಜಿದಾರರು 20 ವರ್ಷಕ್ಕೂ ಅಧಿಕ ಸಮಯದಿಂದ ಗುತ್ತಿಗೆ ಆಧಾರದಲ್ಲಿ ಸ್ಟಾರ್ಫ್‌ ನರ್ಸ್‌ (ಸ್ಟೈಫಂಡ್ರಿ) ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದ್ದರಿಂದ, 10 ವರ್ಷ ಸೇವೆ ಪೂರೈಸಿದ ದಿನದಿಂದ ಅನ್ವಯವಾಗುವಂತೆ ಅವರ ಸೇವೆಯನ್ನು ಕಾಯಂಗೊಳಿಸಬೇಕು. ಹತ್ತು ವರ್ಷಗಳ ಸೇವೆ ಪರಿಗಣಿಸುವಾಗ ಮಧ್ಯದಲ್ಲಿ ಒಂದೆರಡು ದಿನ ಬ್ರೇಕ್‌ ಅವಧಿಯನ್ನು ಪರಿಗಣಿಸಬಾರದು ಎಂದು ಜಯದೇವ ಸಂಸ್ಥೆಗೆ ನ್ಯಾಯಾಲಯ ನಿರ್ದೇಶಿಸಿದೆ.

ಸಂಸ್ಥೆಯ ಹೃದಯವೇ ಸೂಕ್ತ ಜಾಗದಲ್ಲಿಲ್ಲ:
ಹೃದಯ ಸಂಬಂಧಿ ಕಾಯಿಲೆಗಳ ಚಿಕಿತ್ಸೆಗಾಗಿ ಇಂತಹ ಪ್ರತಿಷ್ಠಿತ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ನರ್ಸ್‌ಗಳು ಹೃದ್ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ, ಜಯದೇವ ಸಂಸ್ಥೆ ಅನಾರೋಗ್ಯಕರ ರೀತಿಯಲ್ಲಿ ನಡೆದುಕೊಳ್ಳುವ ಮೂಲಕ, ಅದರ ಹೃದಯ ತನ್ನ ಸಿಬ್ಬಂದಿಯ ಕಾಯಿಲೆಗಳನ್ನು ಗುಣಪಡಿಸುವ ಸೂಕ್ತ ಜಾಗದಲ್ಲಿ ಇಲ್ಲ ಎಂಬುದನ್ನು ಸೂಚಿಸುತ್ತಿದೆ ಎಂದು ನುಡಿಯುವ ಮೂಲಕ ಜಯದೇವ ಸಂಸ್ಥೆಯ ಕಾರ್ಯವೈಖರಿಯನ್ನು ಹೈಕೋರ್ಟ್ ಟೀಕಿಸಿದೆ.

ರಾಜ್ಯದ ಅತ್ಯುತ್ತಮ ಸಂಸ್ಥೆಗಳಲ್ಲಿ ಒಂದೆನಿಸಿರುವ ಜಯದೇವ ಸಂಸ್ಥೆ ರಾಜ್ಯಕ್ಕೇ ಮಾದರಿಯಾಗಬೇಕು. ಮುಖ್ಯಮಂತ್ರಿ ಅಧ್ಯಕ್ಷರಾಗಿರುವ ಮತ್ತು ಆರೋಗ್ಯ ಸಚಿವರು ಸಹ ಅಧ್ಯಕ್ಷರಾಗಿರುವ ಆಡಳಿತ ಮಂಡಳಿಯನ್ನು ಹೊಂದಿರುವ ಸಂಸ್ಥೆ ತನ್ನ ನರ್ಸ್‌ಗಳ ವಿಚಾರದಲ್ಲಿ ನ್ಯಾಯಯುತವಾಗಿ ನಡೆದುಕೊಳ್ಳದೆ ಅವರಿಗೆ ಕಿರುಕುಳ ನೀಡುತ್ತಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಸಾಂವಿಧಾನಿಕ ನಿಯಮ ಉಲ್ಲಂಘನೆ:
ಅರ್ಜಿದಾರರನ್ನು ಮೊದಲಿಗೆ 2004ರಲ್ಲಿ ಸ್ಟಾರ್ಫ್‌ ನರ್ಸ್‌ (ಸ್ಟೈಫಂಡ್ರಿ) ಹುದ್ದೆಗಳಿಗೆ ನೇಮಕ ಮಾಡಲಾಗಿತ್ತು. ಕಳೆದೆರಡು ದಶಕಗಳಿಂದ ಅವರು ನಿರಂತರವಾಗಿ ಸಾಮಾನ್ಯ ಸ್ಟಾಫ್‌ ನರ್ಸ್‌ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಅವರಿಗೆ ಕಡಿಮೆ ವೇತನ ನೀಡಿ, ಸೌಲಭ್ಯಗಳನ್ನೂ ಕಲ್ಪಿಸದೆ, ‘ಸಮಾನ ವೇತನಕ್ಕೆ ಸಮಾನ ಕೆಲಸ’ ಎಂಬ ಸಾಂವಿಧಾನಿಕ ನಿಯಮವನ್ನು ಉಲ್ಲಂಘನೆ ಮಾಡಲಾಗುತ್ತಿದೆ ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ.

ಕರ್ನಾಟಕ ಸೊಸೈಟಿ ನೋಂದಣಿ ಕಾಯ್ದೆ – 1960ರ ಅನ್ವಯ ನೋಂದಣಿಯಾಗಿರುವ ಜಯದೇವ ಸಂಸ್ಥೆಯು ಆಡಳಿತ ಮಂಡಳಿ ರೂಪಿಸಿದ ನಿಯಮ ಮತ್ತು ಉಪ ನಿಯಮಗಳ ಅನುಸಾರ ಅಗತ್ಯಕ್ಕೆ ತಕ್ಕಂತೆ ನೇಮಕಾತಿಗಳನ್ನು ಮಾಡಿಕೊಂಡು ಅವರಿಗೆ ವೇತನ ನೀಡುತ್ತದೆ. ಈ ಸಂಸ್ಥೆಯಲ್ಲಿ ಅರ್ಜಿದಾರರು 20 ವರ್ಷಕ್ಕೂ ಅಧಿಕ ಸಮಯದಿಂದ ಸಾಮಾನ್ಯ ಸಿಬ್ಬಂದಿಯಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಹುದ್ದೆಗಳನ್ನು ಕಾಲಕಾಲಕ್ಕೆ ಮುಂದುವರಿಸಲಾಗಿದೆ. ಸಂಸ್ಥೆಗೂ ಅವರ ಸೇವೆ ಅನಿವಾರ್ಯವಾಗಿದೆ. ಅವರ ಅನುಭವವನ್ನು ಪರಿಗಣಿಸಿ ಎಲ್ಲ ರೀತಿಯಲ್ಲೂ ಅವರು ಅರ್ಹರಾಗಿರುವುದರಿಂದ ಅವರ ಸೇವೆ ಕಾಯಮಾತಿ ಬಗ್ಗೆ ಪರಿಶೀಲಿಸಿ, ತೀರ್ಮಾನ ಕೈಗೊಳ್ಳಬೇಕು ಎಂದು ನ್ಯಾಯಾಲಯ ಜಯದೇವ ಸಂಸ್ಥೆಗೆ ಆದೇಶಿಸಿದೆ.

Related Articles

Comments (0)

Leave a Comment