ಕೊಕೇನ್ ಸಾಗಣೆ ವೇಳೆ ಸಿಕ್ಕಿಬಿದ್ದಿದ್ದ ಕೀನ್ಯಾ ಮಹಿಳೆಗೆ ಜಾಮೀನು ನೀಡಿದ ಹೈಕೋರ್ಟ್

ಬೆಂಗಳೂರು: ಅಕ್ರಮವಾಗಿ 1.2 ಕೆಜಿ ಕೊಕೇನ್‌ ಕೊಂಡೊಯ್ಯುತ್ತಿದ್ದ ಸಂದರ್ಭದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದ ಕೀನ್ಯಾದ ಮಹಿಳೆಗೆ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದೆ.

ಜಾಮೀನು ಕೋರಿ ಕರೋಲಿನ್‌ ಅಗೋಲಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ವಿಶ್ವಜಿತ್‌ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ. ಜತೆಗೆ, ಅರ್ಜಿದಾರ ಮಹಿಳೆಯನ್ನು ಕಾರಾಗೃಹದಿಂದ ಡಿಟೆನ್ಷನ್‌ ಕೇಂದ್ರಕ್ಕೆ (ಅಕ್ರಮ ವಲಸಿಗರನ್ನು ಇರಿಸುವ ಸ್ಥಳ) ಕಳುಹಿಸುವಂತೆ ನ್ಯಾಯಾಲಯ ನಿರ್ದೇಶಿಸಿದೆ.

ಅರ್ಜಿದಾರ ವಿದೇಶಿ ಮಹಿಳೆ 2023ರ ಸೆಪ್ಟೆಂಬರ್ 14ರಿಂದ ಬಂಧನದಲ್ಲಿದ್ದಾರೆ. ವಿಚಾರಣಾ ನ್ಯಾಯಾಲಯದಲ್ಲಿ ವಿಚಾರಣೆ ಇನ್ನೂ ಆರಂಭವಾಗಿಲ್ಲ. ಪ್ರಕರಣದಲ್ಲಿ ಮಾದಕ ದ್ರವ್ಯ ಮತ್ತು ಉದ್ದೀಪನ ಪದಾರ್ಥಗಳು (ಎನ್‌ಡಿಪಿಎಸ್‌) ಕಾಯ್ದೆಯ ಸೆಕ್ಷನ್‌ 50ರ ನಿಯಮ ಪಾಲನೆಯಾಗಿಲ್ಲ. ಆದ್ದರಿಂದ, ಜಾಮೀನು ಮಂಜೂರು ಮಾಡಲಾಗುತ್ತಿದೆ ಎಂದು ನ್ಯಾಯಾಲಯ ಹೇಳಿದೆ.

ಆರೋಪಿ ಮಹಿಳೆಗೆ ಯಾವುದೇ ಕ್ರಿಮಿನಲ್‌ ಹಿನ್ನೆಲೆ ಇಲ್ಲ. ಆಕೆ ವಿದೇಶಿ ಪ್ರಜೆಯಾಗಿರುವುದರಿಂದ ಹಾಗೂ ಎನ್‌ಡಿಪಿಎಸ್‌ ಕಾಯ್ದೆಯಡಿ ಕ್ರಿಮಿನಲ್‌ ಪ್ರಕರಣ ಎದುರಿಸುತ್ತಿರುವುದರಿಂದ ಬಾಬುಲಾಲ್‌ ಖಾನ್‌ ಪ್ರಕರಣದಲ್ಲಿ ಹೈಕೋರ್ಟ್‌ನ ಸಹವರ್ತಿ ಪೀಠ ನೀಡಿರುವ ಆದೇಶದಂತೆ ಆಕೆಯ ಅರ್ಜಿಯನ್ನು ವಿಲೇವಾರಿ ಮಾಡಲಾಗುವುದು ಮತ್ತು ವಿಚಾರಣಾ ನ್ಯಾಯಾಲಯದಲ್ಲಿ ವಿಚಾರಣೆ ಮುಕ್ತಾಯವಾಗಿ ತೀರ್ಪು ಹೊರಬರುವವರೆಗೆ ಆಕೆಯನ್ನು ಡಿಟೆನ್ಷನ್‌ ಕೇಂದ್ರದಲ್ಲಿ ಇಡಬೇಕು ಎಂದು ಆದೇಶಿಸಿರುವ ನ್ಯಾಯಪೀಠ, ಪಾಸ್‌ಪೋರ್ಟ್‌ ಅನ್ನು ವಿಚಾರಣಾ ನ್ಯಾಯಾಲಯಕ್ಕೆ ಒಪ್ಪಿಸುವಂತೆ ಆರೋಪಿತೆಗೆ ನಿರ್ದೇಶಿಸಿದೆ.

ಪ್ರಕರಣವೇನು?
ಕೀನ್ಯಾದ ಮಹಿಳೆ ಕರೋಲಿನ್‌ ಅಗೋಲಾ 2023ರಲ್ಲಿ ಅಕ್ರಮವಾಗಿ 1.2 ಕೆಜಿ ಕೊಕೇನ್‌ ಕೊಂಡೊಯ್ಯುತ್ತಿದ್ದಾಗ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾದಕ ವಸ್ತುಗಳ ಕಳ್ಳ ಸಾಗಣೆ ತಡೆ ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗಿದ್ದರು. ಆಕೆಯ ಜಾಮೀನು ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿತ್ತು. ಇದರಿಂದ, ಹೈಕೋರ್ಟ್‌ ಮೆಟ್ಟಿಲೇರಿದ್ದ ಮಹಿಳೆ ಎನ್‌ಡಿಪಿಎಸ್‌ ಕಾಯ್ದೆಯ ಸೆಕ್ಷನ್‌ 50ರ ಪ್ರಕಾರ ಗೆಜೆಟೆಡ್‌ ಅಧಿಕಾರಿ ಸಮಕ್ಷಮದಲ್ಲಿಯೇ ಮಾದಕ ವಸ್ತುಗಳ ಶೋಧಕಾರ್ಯ ನಡೆಸಿ ವರದಿ ಸಿದ್ಧಪಡಿಸಬೇಕು. ಆದರೆ, ಪ್ರಕರಣದಲ್ಲಿ ಅಧಿಕಾರಿಗಳು ಈ ನಿಯಮ ಪಾಲನೆ ಮಾಡಿಲ್ಲ. ಆದ್ದರಿಂದ, ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದ್ದರು.

Related Articles

Comments (0)

Leave a Comment