ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣಾ ಪ್ರಕ್ರಿಯೆಗೆ ಸಿವಿಲ್ ಕೋರ್ಟ್ ನೀಡಿದ್ದ ತಡೆ ತೆರವುಗೊಳಿಸಿದ ಹೈಕೋರ್ಟ್
- by Jagan Ramesh
- October 4, 2024
- 39 Views
ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024-29ರ ಅವಧಿಯ ಚುನಾವಣಾ ಪ್ರಕ್ರಿಯೆ ಹಾಗೂ ಚುನಾವಣಾಧಿಕಾರಿಗಳ ನೇಮಕಕ್ಕೆ ತಡೆ ವಿಧಿಸಿದ್ದ ಬೆಂಗಳೂರು ನಗರ ಸಿಟಿ ಸಿವಿಲ್ ನ್ಯಾಯಾಲಯದ ಆದೇಶಕ್ಕೆ ಹೈಕೋರ್ಟ್ ಶುಕ್ರವಾರ ತಡೆ ನೀಡಿದೆ.
ಸಿಟಿ ಸಿವಿಲ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ರಜಾಕಾಲದ ಏಕಸದಸ್ಯ ನ್ಯಾಯಪೀಠ, ಚುನಾವಣಾ ಪ್ರಕ್ರಿಯೆ ಹಾಗೂ ಚುನಾವಣಾಧಿಕಾರಿ ನೇಮಕಕ್ಕೆ ತಡೆ ವಿಧಿಸಿ ಸೆಪ್ಟೆಂಬರ್ 30ರಂದು ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯ ಹೊರಡಿಸಿದ್ದ ಆದೇಶಕ್ಕೆ ತಡೆ ನೀಡಿ ಮಧ್ಯಂತರ ಆದೇಶ ಹೊರಡಿಸಿತು.
ಇದೇ ವೇಳೆ, ಈ ಆದೇಶಕ್ಕೆ ಬದಲಾವಣೆ ಅಥವಾ ಮಾರ್ಪಾಡು ಮಾಡುವಂತೆ ಕೋರುವ ಹಕ್ಕನ್ನು ಪ್ರತಿವಾದಿಗಳು ಹೊಂದಿರುತ್ತಾರೆ ಎಂದು ಆದೇಶದಲ್ಲಿ ಹೇಳಿರುವ ನ್ಯಾಯಪೀಠ, ವಿಚಾರಣೆಯನ್ನು ಅಕ್ಟೋಬರ್ 21ಕ್ಕೆ ಮುಂದೂಡಿತು.
ಇದಕ್ಕೂ ಮುನ್ನ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಮಧುಸೂಧನ್ ಆರ್. ನಾಯಕ್, ಚುನಾವಣಾಧಿಕಾರಿಗಳಾಗಿ ನೇಮಕ ಆದವರು ನಿವೃತ್ತ ಉಪ ಕಾರ್ಯದರ್ಶಿ. ಇದು ಸಂಘದ ಬೈಲಾದ ನಿಯಮ 48ಎ ಗೆ ವಿರುದ್ಧವಾಗಿದೆ ಎಂಬ ಏಕೈಕ ಆಧಾರದಲ್ಲಿ ಸಿಟಿ ಸಿವಿಲ್ ನ್ಯಾಯಾಲಯ ಚುನಾವಣಾ ಪ್ರಕ್ರಿಯೆ ಮತ್ತು ಚುನಾವಣಾಧಿಕಾರಿಗಳ ನೇಮಕಕ್ಕೆ ತಡೆ ನೀಡಿದೆ. ಆದರೆ, ಬೈಲಾದ ನಿಯಮ 48ಎ ಗೆ ತಿದ್ದುಪಡಿ ತರಲಾಗಿದೆ. ಹಳೆಯ ನಿಯಮಗಳನ್ನು ತೋರಿಸಿ ಸಿಟಿ ಸಿವಿಲ್ ಕೋರ್ಟ್ಗೆ ಹಾದಿ ತಪ್ಪಿಸಲಾಗಿದೆ. ಅಲ್ಲದೇ ಸಂಘದ ವಾದ ಆಲಿಸದೆ ಸಿಟಿ ಸಿವಿಲ್ ಕೋರ್ಟ್ ಆದೇಶ ಮಾಡಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಪ್ರತಿವಾದಿ ಕೃಷ್ಣಯ್ಯ ಪರ ವಕೀಲರು ವಾದ ಮಂಡಿಸಿ, ಸರ್ಕಾರಿ ನೌಕರರ ಸಂಘಕ್ಕೆ ಈಗಾಗಲೇ ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ. ಆದ್ದರಿಂದ, ಚುನಾವಣಾಧಿಕಾರಿಯಾಗಿ ನೇಮಕವಾಗಿರುವ ಹನುಮನರಸಯ್ಯ ಹಾಗೂ ಹಾಲಿ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಸರ್ಕಾರಿ ನೌಕರರ ಸಂಘವನ್ನು ಪ್ರತಿನಿಧಿಸುವ ಹಕ್ಕು ಹೊಂದಿಲ್ಲ ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆ ಹಾಗೂ ಚುನಾವಣಾಧಿಕಾರಿ ನೇಮಕ ಪ್ರಶ್ನಿಸಿ ಲೋಕೋಪಯೋಗಿ ಇಲಾಖೆಯಲ್ಲಿ ಎಸ್ಡಿಎ ಆಗಿರುವ ಕೃಷ್ಣಯ್ಯ ಸಿಟಿ ಸಿವಿಲ್ ಕೋರ್ಟ್ನಲ್ಲಿ ದಾವೆ ಹೂಡಿದ್ದಾರೆ.
Related Articles
Thank you for your comment. It is awaiting moderation.
Comments (0)