ಮಾರ್ಟಿನ್ ಚಿತ್ರದ ಪೋಸ್ಟರ್‌ನಲ್ಲಿ ‘ಎ.ಪಿ. ಅರ್ಜುನ್ ಫಿಲ್ಮ್’ ಟ್ಯಾಗ್‌ಲೈನ್ ಬಳಸಲು ನಿರ್ಮಾಪಕರಿಗೆ ಹೈಕೋರ್ಟ್ ನಿರ್ದೇಶನ
- by Jagan Ramesh
- October 4, 2024
- 435 Views
ಬೆಂಗಳೂರು: ನಟ ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಚಲನಚಿತ್ರದ ಪೋಸ್ಟರ್ ಮತ್ತಿತರ ಪ್ರಚಾರ ದಾಖಲೆಗಳಲ್ಲಿ ಎ.ಪಿ. ಅರ್ಜುನ್ ಫಿಲ್ಮ್ ಎಂಬ ಟ್ಯಾಗ್‌ಲೈನ್ ಬಳಕೆ ಮಾಡುವಂತೆ ಹಾಗೂ ಪ್ರಚಾರ ಕಾರ್ಯಕ್ರಮಗಳಲ್ಲಿ ನಿರ್ದೇಶಕರಿ ಎ.ಪೊ. ಅರ್ಜುನ್ ಅವರಿಗೂ ಭಾಗವಹಿಸಲು ಅನುಮತಿಸುವಂತೆ ಚಿತ್ರ ನಿರ್ಮಾಪಕರಿಗೆ ಹೈಕೋರ್ಟ್ ನಿರ್ದೇಶಿಸಿದೆ.
ನಿರ್ದೇಶಕ ಎ.ಪಿ. ಅರ್ಜುನ್ ಸಲ್ಲಿಸಿದ್ದ ವಾಣಿಜ್ಯ ಮೇಲ್ಮನವಿಯನ್ನು ನ್ಯಾಯಮೂರ್ತಿ ಎಸ್.ಆರ್. ಕೃಷ್ಣ ಕುಮಾರ್ ಹಾಗೂ ನ್ಯಾಯಮೂರ್ತಿ ಎಂ.ಜಿ. ಉಮಾ ಅವರಿದ್ದ ರಜಾಕಾಲದ ವಿಭಾಗೀಯ ನ್ಯಾಯಪೀಠ ಶುಕ್ರವಾರ ನಡೆಸಿತು.
ಮೇಲ್ಮನವಿ ಕುರಿತು ಕೆಲ ಕಾಲ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಈಗಾಗಲೇ ಮುದ್ರಿಸಿರುವುದನ್ನು ಹೊರತುಪಡಿಸಿ ಮುಂದೆ ಮುದ್ರಿಸುವ ‘ಮಾರ್ಟಿನ್’ ಚಿತ್ರದ ಪೋಸ್ಟರ್ ಮತ್ತು ಪ್ರಚಾರ ದಾಖಲೆಗಳಲ್ಲಿ ‘ಎ.ಪಿ. ಅರ್ಜುನ್ ಫಿಲ್ಮ್’ ಎಂಬ ಟ್ಯಾಗ್‌ಲೈನ್ ಹಾಕಬೇಕು. ಸಿನಿಮಾದ ಪ್ರಚಾರ ಚಟುವಟಿಕೆಯಲ್ಲಿ ಭಾಗವಹಿಸಲು ನಿರ್ದೇಶಕ ಎ.ಪಿ. ಅರ್ಜುನ್‌ಗೆ ಅವಕಾಶ ಮಾಡಿಕೊಡಬೇಕು. ಪ್ರಚಾರ ಚಟುವಟಿಕೆಯಲ್ಲಿ ಅರ್ಜುನ್ ಅವರು ಚಿತ್ರ ಮತ್ತು ತಂಡದ ವಿರುದ್ಧ ಯಾವುದೇ ಕೆಟ್ಟ ಅಭಿಪ್ರಾಯ ವ್ಯಕ್ತಪಡಿಸಬಾರದು ಎಂದು ಆದೇಶಿಸಿತು.
ಜತೆಗೆ, ಮೇಲ್ಮನವಿಯಲ್ಲಿ ಪ್ರತಿವಾದಿಗಳಾದ ಚಿತ್ರ ನಿರ್ಮಾಣ ಸಂಸ್ಥೆ ವಾಸವಿ ಎಂಟರ್‌ಪ್ರೈಸಸ್, ಅದರ ಪಾಲುದಾರರಾದ ಉದಯ್ ಮತ್ತು ವಾಸವಿ ಮೆಹ್ತಾ ಅವರಿಗೆ ನೋಟಿಸ್ ಜಾರಿ ಮಾಡಿದ ಪೀಠ, ವಿಚಾರಣೆಯನ್ನು ಅಕ್ಟೋಬರ್ 14ಕ್ಕೆ ಮುಂದೂಡಿತು.
ಇದಕ್ಕೂ ಮುನ್ನ ಅರ್ಜುನ್ ಪರ ಹಿರಿಯ ವಕೀಲ ಉದಯ್ ಹೊಳ್ಳ ವಾದ ಮಂಡಿಸಿ, ಚಿತ್ರದ ನಿರ್ದೇಶಕನಾಗಿರುವ ಮೇಲ್ಮನವಿದಾರರನ್ನು ಪ್ರಮೋಷನ್‌ಗೆ ಕರೆಯಬೇಕು. ಒಪ್ಪಂದದ ಪ್ರಕಾರ ಸಿನಿಮಾ ಬಿಡುಗಡೆಗೂ ಮುನ್ನ ಅವರಿಗೆ ವೇತನ ಪಾವತಿಸಬೇಕು. ಜತೆಗೆ, ಪೋಸ್ಟರ್ ಮತ್ತು ಪ್ರಚಾರದ ದಾಖಲೆಗಳಲ್ಲಿ ‘ಎ.ಪಿ ಅರ್ಜುನ್ ಫಿಲ್ಮ್’ ಎಂದು ಬರೆಯಬೇಕು ಎಂದರು.
ಪ್ರತಿವಾದಿಗಳ ಪರ ಹಿರಿಯ ವಕೀಲ ಚೇತನ್ ಜಾಧವ್ ಅವರು, 3,800 ಚಿತ್ರಮಂದಿರಗಳಲ್ಲಿ ಮುಂದಿನ ಶುಕ್ರವಾರ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈ ಹಂತದಲ್ಲಿ ಯಾವುದೇ ಬದಲಾವಣೆ ಮಾಡಲಾಗದು. ಈ ವಿವಾದ ಚಲನಚಿತ್ರ ವಾಣಿಜ್ಯ ಮಂಡಳಿಯ ಮುಂದೆ ಬಂದಿದ್ದು, ಅವರು ನಿರ್ದೇಶನ ನೀಡಿದ್ದಾರೆ. ಅರ್ಜುನ್ ಅದರಂತೆ ನಡೆದುಕೊಂಡಿಲ್ಲ. ಅಕ್ಟೋಬರ್ 1ರಂದು ಸೆನ್ಸಾರ್ ಮಂಡಳಿಯು ಯು/ಎ ಸರ್ಟಿಫಿಕೇಟ್ ನೀಡಿದ್ದು, ಈಗ ಏನೂ ಬದಲಾವಣೆ ಮಾಡಲಾಗದು ಎಂದು ಆಕ್ಷೇಪಿಸಿದರು.
Related Articles
Thank you for your comment. It is awaiting moderation.
Comments (0)