ಹಣ ದುರುಪಯೋಗ ಆರೋಪ; ಕೆಎಸ್‌ಬಿಸಿ ಅಧ್ಯಕ್ಷ, ಉಪಾಧ್ಯಕ್ಷರ ವಿರುದ್ಧದ ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ
- by Jagan Ramesh
- September 27, 2024
- 38 Views
ಬೆಂಗಳೂರು: ಮೈಸೂರಿನಲ್ಲಿ ಕಳೆದ ವರ್ಷ ಆಯೋಜಿಸಲಾಗಿದ್ದ ರಾಜ್ಯ ವಕೀಲರ ಸಮ್ಮೇಳನದ ವೇಳೆ 50 ಲಕ್ಷಕ್ಕೂ ಅಧಿಕ ಮೊತ್ತದ ಹಣ ದುರುಪಯೋಗವಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ (ಕೆಎಸ್‌ಬಿಸಿ) ಅಧ್ಯಕ್ಷ ಎಚ್.ಎಲ್. ವಿಶಾಲ್ ರಘು ಮತ್ತು ಉಪಾಧ್ಯಕ್ಷ ವಿನಯ್ ಮಂಗ್ಳೇಕರ್ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಹಿರಿಯ ವಕೀಲ ಎಸ್. ಬಸವರಾಜ್ ಅವರು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ದೂರು ರದ್ದುಪಡಿಸುವಂತೆ ಕೋರಿ ವಿಶಾಲ್ ರಘು ಮತ್ತು ವಿನಯ್ ಮಂಗಳೇಕರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ನ್ಯಾಯಪೀಠ ಶುಕ್ರವಾರ ಪ್ರಕಟಿಸಿದ್ದು, ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ಅರ್ಜಿಯಲ್ಲಿ ಮೆರಿಟ್ ಇಲ್ಲದ ಕಾರಣ ವಜಾಗೊಳಿಸಲಾಗಿದೆ. ಆದೇಶದಲ್ಲಿನ ಅವಲೋಕನವು ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್ 482ರ ಅಡಿ ಅರ್ಜಿದಾರರ ಪರಿಗಣನೆಯ ಉದ್ದೇಶಕ್ಕಾಗಿ ಮಾತ್ರ. ಇದು ಅರ್ಜಿದಾರರ ವಿರುದ್ಧದ ತನಿಖಾ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರುವುದಿಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ಸ್ಪಷ್ಟಪಡಿಸಿದೆ. ವಿಸ್ತೃತ ತೀರ್ಪಿನ ಪ್ರತಿ ಇನ್ನಷ್ಟೇ ಪ್ರಕಟವಾಗಬೇಕಿದೆ.
ಪ್ರಕರಣವೇನು?
ರಾಜ್ಯ ವಕೀಲರ ಪರಿಷತ್ ವತಿಯಿಂದ ಮೈಸೂರಿನಲ್ಲಿ 2023ರ ಆಗಸ್ಟ್ 12 ಮತ್ತು 13ರಂದು ಎರಡು ದಿನಗಳ ಕಾಲ ರಾಜ್ಯ ವಕೀಲರ ಸಮ್ಮೇಳನ ಆಯೋಜಿಸಲಾಗಿತ್ತು. ಈ ಸಮಯದಲ್ಲಿ ಸಮ್ಮೇಳನದ ಪ್ರತಿನಿಧಿ ವಕೀಲರಿಂದ ತಲಾ 1 ಸಾವಿರ ರೂ. ಗಳಂತೆ ಒಟ್ಟು 1,16,33,000 ರೂ. ಗಳನ್ನು ದೇಣಿಗೆಯಾಗಿ ಸಂಗ್ರಹಿಸಲಾಗಿತ್ತು. ರಾಜ್ಯ ಸರ್ಕಾರ 1.8 ಕೋಟಿ ರೂ. ಅನುದಾನ ನೀಡಿತ್ತು, ರಾಜ್ಯ ವಕೀಲರ ಪರಿಷತ್‌ನಿಂದ 75 ಲಕ್ಷ ರೂ. ಬಿಡುಗಡೆಯಾಗಿತ್ತು. ಒಟ್ಟು ಮೊತ್ತ 3,30,33,000 ರೂ. ಸಂಗ್ರಹವಾಗಿತ್ತು. ಈ ಹಣ ಪರಿಷತ್‌ನ ಬ್ಯಾಂಕ್ ಖಾತೆಗೆ ಜಮೆ ಆಗಿದ್ದು, ಈ ಹಣದ ಬಳಕೆಯಲ್ಲಿ ದುರುಪಯೋಗ ನಡೆದಿದೆ ಎಂದು ಆರೋಪಿಸಿ ಬಸವರಾಜ್ ದೂರು ನೀಡಿದ್ದರು.
ಅಧ್ಯಕ್ಷರು ಮತ್ತು ಇತರರು ಸೇರಿಕೊಂಡು ಪರಿಷತ್‌ನ 50 ಲಕ್ಷ ರೂ. ಮೊತ್ತವನ್ನು ಬ್ಯಾಂಕ್‌ನಿಂದ ನಗದೀಕರಿಸಿಕೊಂಡಿದ್ದಾರೆ. ಸುಳ್ಳು ಲೆಕ್ಕಪತ್ರ ಸೃಷ್ಟಿಸಿ, ವಕೀಲರ ಸಮುದಾಯಕ್ಕೆ ಸೇರಿದ ಕೋಟ್ಯಂತರ ರೂ. ಗಳನ್ನು, ನಕಲಿ ಬಿಲ್ ತಯಾರಿಸಿ ಸ್ವಂತಕ್ಕೆ ಬಳಸಿಕೊಂಡಿದ್ದಾರೆ. ಸರ್ಕಾರಕ್ಕೆ ಸಲ್ಲಿಸಬೇಕಾದ ಜಿಎಸ್‌ಟಿ ಹಣವನ್ನು ಸಲ್ಲಿಸದೇ ಮೋಸ ಮಾಡಿದ್ದು ಪರಿಷತ್‌ನ ಸಮುದಾಯಕ್ಕೆ ನಂಬಿಕೆ ದ್ರೋಹ ಎಸಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ದೂರು ಆಧರಿಸಿ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 420 (ವಂಚನೆ), 406 (ನಂಬಿಕೆ ದ್ರೋಹ), 409 (ಸಾರ್ವಜನಿಕ ಸೇವಕರಿಂದ ನಂಬಿಕೆ ದ್ರೋಹ), 468 (ಫೋರ್ಜರಿ), 471 (ನಕಲಿ ದಾಖಲೆಯನ್ನು ಅಪರಾಧದಲ್ಲಿ ಬಳಸುವುದು), 477–ಎ (ಬ್ಯಾಂಕ್ ಖಾತೆ ದುರುಪಯೋಗ) 34 (ಸಮಾನ ಉದ್ದೇಶ) ಮತ್ತು 120–ಬಿ (ಪಿತೂರಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Related Articles
Thank you for your comment. It is awaiting moderation.
Comments (0)