ಕೆಲಸದ ಮಹಿಳೆ ಮೇಲೆ ಅತ್ಯಾಚಾರವೆಸಗಿದ ಆರೋಪ; ಪ್ರಜ್ವಲ್ ಜಾಮೀನು ಅರ್ಜಿ ತೀರ್ಪು ಕಾಯ್ದಿರಿಸಿದ ಹೈಕೋರ್ಟ್
- by Jagan Ramesh
- September 26, 2024
- 47 Views
ಬೆಂಗಳೂರು: ತೋಟದ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಆರೋಪ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.
ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ಪ್ರಜ್ವಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ಪ್ರಭುಲಿಂಗ ಕೆ. ನಾವದಗಿ, ಅರ್ಜಿದಾರರ ಮಾಜಿ ಕಾರು ಚಾಲಕ ಕಾರ್ತಿಕ್ ಎಂಬಾತನ ಪಿತೂರಿಯಿಂದ ಇದೆಲ್ಲವೂ ನಡೆದಿದೆ. ವಾಸ್ತವಿಕ ನೆಲೆಗಟ್ಟಿನಲ್ಲಿ ವಿಚಾರಣಾ ನ್ಯಾಯಾಲಯ ಎಲ್ಲವನ್ನೂ ಪರಿಶೀಲಿಸಬೇಕು. ಮಸಾಲೆರಹಿತವಾಗಿ ಪ್ರಕರಣವನ್ನು ನೋಡಬೇಕಿದೆ. ಸಂತ್ರಸ್ತೆ ಎನ್ನಲಾದ ಮಹಿಳೆಯು ಅತ್ಯಾಚಾರ ನಡೆದ ಐದು ವರ್ಷಗಳ ಬಳಿಕ ದೂರು ನೀಡಿದ್ದಾಳೆ ಎಂದರು.
ಅದಕ್ಕೆ ನ್ಯಾಯಪೀಠ, ಆಕೆಗೆ ಆ ಸಂದರ್ಭದಲ್ಲಿ ಬೇರೆ ಆಯ್ಕೆ ಏನಿತ್ತು ಎಂದು ಪ್ರಶ್ನಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ನಾವದಗಿ, ವಿಚಾರಣೆಗೆ (ಟ್ರಯಲ್) ಸಾಕಷ್ಟು ಪ್ರಶ್ನೆಗಳಿರಲಿವೆ. ಅತ್ಯಾಚಾರ ನಡೆದಿದೆಯೇ ಇಲ್ಲವೇ ಎಂಬ ವಿಚಾರದಲ್ಲಿ ಮುಂದುವರಿದು ವಾದಿಸಲು ನಾನು ಬಯಸುವುದಿಲ್ಲ. ಅತ್ಯಂತ ಜವಾಬ್ದಾರಿಯುತವಾಗಿ ವಾದ ಮಂಡಿಸಿದ್ದು, ಆ ಹಂತದಲ್ಲಿ ದೂರಿನಲ್ಲಿ ಆ ಹೇಳಿಕೆಗಳನ್ನು ನೀಡಿರುವುದನ್ನು ನೋಡಿದರೆ ಇದು ಅತ್ಯಾಚಾರವಾಗದು ಎಂದರು.
ಎಸ್ಪಿಪಿ ಆಕ್ಷೇಪ:
ಇದಕ್ಕೆ ಆಕ್ಷೇಪಿಸಿದ ವಿಶೇಷ ಸರ್ಕಾರಿ ಅಭಿಯೋಜಕ (ಎಸ್ಪಿಪಿ) ಪ್ರೊ.ರವಿವರ್ಮ ಕುಮಾರ್, ಕಾಮೋನ್ಮತ್ತೆ (nymphomaniac) ಎಂಬುದಕ್ಕೆ ವ್ಯಾಖ್ಯಾನ ಏನಾದರೂ ಇದ್ದರೆ ಅದನ್ನೂ ಇದು (ಈ ಪ್ರಕರಣ) ಮೀರಿಸುತ್ತದೆ. ಪ್ರಕರಣದ ದೂರುದಾರೆಯು ಪ್ರಜ್ವಲ್ ನಿಯಂತ್ರಣದಲ್ಲಿದ್ದಿದ್ದು ಅಲ್ಲದೇ ಆಕೆ ಪ್ರಜ್ವಲ್ಗಿಂತ ಎರಡು ಪಟ್ಟು ವಯಸ್ಸಿನಲ್ಲಿ ಹಿರಿಯರಾಗಿದ್ದಾರೆ. ಇಂಥ ಮಹಿಳೆ ಪ್ರಜ್ವಲ್ನ ಕಾಲು ಹಿಡಿಯುತ್ತಾಳೆ. ಮುಂದಿನ ವಿಚಾರಗಳನ್ನು ನನಗೆ ವಿವರಿಸಲಾಗುತ್ತಿಲ್ಲ ಎಂದು ಹೇಳಿದರು.
ವಿಧಿವಿಜ್ಞಾನ ಪ್ರಯೋಗಾಲಯದ (ಎಫ್ಎಸ್ಎಲ್) ವರದಿಯಲ್ಲಿ ಪ್ರಜ್ವಲ್ ಚಿತ್ರ, ಧ್ವನಿ, ಮಾತುಗಳು ಹೊಂದಾಣಿಕೆಯಾಗಿವೆ. ವಿಡಿಯೊದಲ್ಲಿ ಸಂತ್ರಸ್ತೆ ಪರಿಪರಿಯಾಗಿ ಪ್ರಜ್ವಲ್ ಅವರನ್ನು ಬೇಡಿಕೊಂಡಿದ್ದಾರೆ. ಇದರ ಅರ್ಥ ಸಂತ್ರಸ್ತೆಯದ್ದು ಸಮ್ಮತಿ ಎಂತಲೇ? ಪ್ರಜ್ವಲ್ ಅವರದ್ದು ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕವಾಗಿ ಬಲಾಢ್ಯವಾದ ಕುಟುಂಬವಾಗಿದೆ. ದೂರು ನೀಡದಂತೆ ಆಕೆಗೆ ಅಕ್ಷರಶಃ ಬೆದರಿಕೆಯೊಡ್ಡಲಾಗಿದೆ. ಅಪಹರಣ ಪ್ರಕರಣದಲ್ಲಿ ಸಂತ್ರಸ್ತೆಯಾಗಿರುವುದು ಇದೇ ಮಹಿಳೆ. ಆಕೆಯನ್ನು ಎರಡು ಬಾರಿ ಅಪಹರಿಸಲಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಸಂತ್ರಸ್ತೆ ತನಗೆ ಇಬ್ಬರು ಪುತ್ರಿಯರಿದ್ದಾರೆ. ಮೊದಲ ಮಗಳಿಗೆ ಮದುವೆಯಾಗಿದ್ದು, ಎರಡನೇ ಮಗಳಿಗಿನ್ನೂ ಮದುವೆಯಾಗಬೇಕಿದ್ದ ಕಾರಣ ದೂರು ನೀಡಿಲ್ಲ ಎಂದು ಹೇಳಿದ್ದಾಳೆ. ಆನಂತರ ಇಡೀ ಕುಟುಂಬ ಬೆಂಬಲ ನೀಡಿರುವುದರಿಂದ ಆಕೆ ದೂರು ನೀಡಿದ್ದಾಳೆ. ಆರೋಪ ಪಟ್ಟಿಯಲ್ಲಿನ ಸಾಕಷ್ಟು ವಿಚಾರಗಳನ್ನು ಓದಲು ನನಗೆ ಕಷ್ಟವಾಗುತ್ತದೆ. ಇದಕ್ಕಾಗಿಯೇ ಸರ್ಕಾರಕ್ಕೆ ನನಗೆ ಬಿಡುಗಡೆ ಮಾಡುವಂತೆಯೂ ಕೋರಿದ್ದೇನೆ ಎಂದು ಪ್ರೊ. ರವಿವರ್ಮ ಕುಮಾರ್ ಬೇಸರದಿಂದ ನುಡಿದರು.
ವಾದ ಆಲಿಸಿದ ನ್ಯಾಯಪೀಠ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿತು. ಇದರೊಂದಿಗೆ ಪ್ರಜ್ವಲ್ ವಿರುದ್ಧ ಎಸ್ಐಟಿ ವ್ಯಾಪ್ತಿಯಲ್ಲಿರುವ ಎಲ್ಲ ನಾಲ್ಕೂ ಪ್ರಕರಣಗಳ ಜಾಮೀನು ಆದೇಶ ಕಾಯ್ದಿರಿಸಿದಂತಾಗಿದ್ದು, ಒಟ್ಟಾಗಿ ತೀರ್ಪು ಪ್ರಕಟಿಸುವುದಾಗಿ ನ್ಯಾಯಾಲಯ ಹೇಳಿದೆ.
Related Articles
Thank you for your comment. It is awaiting moderation.
Comments (0)