ಕೋರ್ಟ್ ಕಲಾಪದ ವಿಡಿಯೊಗಳನ್ನು ಖಾಸಗಿ ವೇದಿಕೆಗಳು ಬಳಸುವಂತಿಲ್ಲ; ಹೈಕೋರ್ಟ್ ಕಟ್ಟುನಿಟ್ಟಿನ ಆದೇಶ
- by Jagan Ramesh
- September 24, 2024
- 924 Views
ಬೆಂಗಳೂರು: ನ್ಯಾಯಾಲಯದ ಕಲಾಪದ ನೇರಪ್ರಸಾರದ (ಲೈವ್ಸ್ಟ್ರೀಮ್) ದೃಶ್ಯಗಳನ್ನು ಯಾವುದೇ ಖಾಸಗಿ ವೇದಿಕೆಗಳು ಬಳಸಬಾರದು ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿರುವ ಹೈಕೋರ್ಟ್, ಖಾಸಗಿ ಡಿಜಿಟಲ್ ವೇದಿಕೆಗಳಾದ ಕಹಳೆ ನ್ಯೂಸ್, ಫ್ಯಾನ್ಸ್ ಟ್ರೋಲ್, ಪ್ರತಿಧ್ವನಿ, ಅವನಿಯಾನ ಮತ್ತು ರವೀಂದ್ರ ಜೋಶಿ ಕ್ರಿಯೇಷನ್ಸ್ ನಲ್ಲಿ ಬಳಕೆ ಮಾಡಲಾಗಿರುವ ವಿಡಿಯೊಗಳನ್ನು ತಕ್ಷಣ ತೆಗೆದು ಹಾಕುವಂತೆ ಯೂಟ್ಯೂಬ್, ಫೇಸ್ಬುಕ್ ಹಾಗೂ ಎಕ್ಸ್ ಕಾರ್ಪ್ ಸಂಸ್ಥೆಗೆ ಹೈಕೋರ್ಟ್ ನಿರ್ದೇಶಿಸಿದೆ.
ಕೋರ್ಟ್ ಕಲಾಪದ ದೃಶ್ಯಾವಳಿಗಳ ದುರ್ಬಳಕೆ ತಡೆಗೆ ಕ್ರಮ ಜರುಗಿಸಲು ಸಂಬಂಧಪಟ್ಟ ಪ್ರಾಧಿಕಾರಗಳಿಗೆ ನಿರ್ದೇಶಿಸುವಂತೆ ಕೋರಿ ಬೆಂಗಳೂರು ವಕೀಲರ ಸಂಘ (ಎಎಬಿ) ಸಲ್ಲಿಸಿರುವ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನ್ಗೌಡರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿತು.
ಖಾಸಗಿ ವೇದಿಕೆಗಳಿಗೆ ವಿಡಿಯೊ ಬಳಸದಂತೆ ತಾಕೀತು:
ಕಹಳೆ ನ್ಯೂಸ್, ಫ್ಯಾನ್ಸ್ ಟ್ರೋಲ್, ಪ್ರತಿಧ್ವನಿ, ಅವನಿಯಾನ ಮತ್ತು ರವೀಂದ್ರ ಜೋಶಿ ಕ್ರಿಯೇಷನ್ಸ್ ಸೇರಿ ಯಾವುದೇ ಖಾಸಗಿ ವೇದಿಕೆಗಳು ಹೈಕೋರ್ಟ್ನ ಲೈವ್ಸ್ಟ್ರೀಮ್ ವಿಡಿಯೊಗಳನ್ನು ಬಳಸಕೂಡದು. 2022ರ ಜನವರಿ 1ರಂದು ರಾಜ್ಯ ಹೈಕೋರ್ಟ್ ಜಾರಿಗೊಳಿಸಿರುವ ‘ಕರ್ನಾಟಕ ನ್ಯಾಯಾಲಯ ಕಲಾಪಗಳ ನೇರಪ್ರಸಾರ (ಲೈವ್ಸ್ಟ್ರೀಮ್) ಮತ್ತು ರೆಕಾರ್ಡಿಂಗ್ ನಿಯಮಗಳು 2021’ರ ನಿಯಮಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಕಟ್ಟುನಿಟ್ಟಿನ ಆದೇಶ ಮಾಡಿದ ಹೈಕೋರ್ಟ್, ಅರ್ಜಿಯಲ್ಲಿ ಪ್ರತಿವಾದಿಗಳಾಗಿರುವ ಡಿಜಿಟಲ್ ವೇದಿಕೆಗಳಲ್ಲಿ ಬಳಸಲಾಗಿರುವ ಹೈಕೋರ್ಟ್ ಲೈವ್ಸ್ಟ್ರೀಮ್ ವಿಡಿಯೊಗಳನ್ನು ತಕ್ಷಣ ತೆಗೆದು ಹಾಕಬೇಕು. ಈ ವೇದಿಕೆಗಳಲ್ಲಿನ ಕೋರ್ಟ್ ಕಲಾಪದ ವಿಡಿಯೊಗಳನ್ನು ಯೂಟ್ಯೂಬ್, ಫೇಸ್ಬುಕ್, ಎಕ್ಸ್ ಕಾರ್ಪ್ಗಳು ತಕ್ಷಣ ಅಳಿಸಿ ಹಾಕಬೇಕು ಎಂದು ನಿರ್ದೇಶಿಸಿತು.
ಪ್ರತಿವಾದಿಗಳಾದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ಕರ್ನಾಟಕ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್, ರಾಜ್ಯ ಸರ್ಕಾರ, ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಯೂಟ್ಯೂಬ್, ಫೇಸ್ಬುಕ್, ಎಕ್ಸ್ ಕಾರ್ಪ್, ಕಹಳೆ ನ್ಯೂಸ್, ಫ್ಯಾನ್ಸ್ ಟ್ರೋಲ್, ಪ್ರತಿಧ್ವನಿ, ಅವನಿಯಾನ ಮತ್ತು ರವೀಂದ್ರ ಜೋಶಿ ಕ್ರಿಯೇಷನ್ಸ್ಗಳಿಗೆ ನೋಟಿಸ್ ಜಾರಿಗೊಳಿಸಿರುವ ನ್ಯಾಯಾಲಯ, ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಿದೆ.
ಇದಕ್ಕೂ ಮುನ್ನ ಎಎಬಿ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ ಮತ್ತು ಇತರರು, ಕೋರ್ಟ್ ಕಲಾಪದ ಲೈವ್ಸ್ಟ್ರೀಮ್ ವಿಡಿಯೊಗಳನ್ನು ದುರ್ಬಳಕೆ ಮಾಡಿಕೊಂಡು ಹಣ ಸಂಪಾದನೆಗೆ ಇಳಿದಿರುವ ಕೆಲವು ಡಿಜಿಟಲ್ ವೇದಿಕೆಗಳು ಮನಸಿಗೆ ಬಂದಂತೆ ವಿಡಿಯೊಗಳನ್ನು ಸಂಕಲನ ಮಾಡಿ ಪ್ರಸಾರ ಮಾಡುತ್ತಿವೆ. ಅವುಗಳ ವೇದಿಕೆಯಲ್ಲಿ ಪ್ರಸಾರವಾಗಿರುವ ವಿಡಿಯೊಗಳ ಕಾಮೆಂಟ್ ವಿಭಾಗಗಳಲ್ಲಿ ನ್ಯಾಯಮೂರ್ತಿಗಳು, ವಕೀಲರು ಎನ್ನುವುದನ್ನೂ ನೋಡದೆ ಕೆಲ ಜನರು ಅಸಭ್ಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಇದು ನ್ಯಾಯಾಂಗ ನಿಂದನೆಯಾಗಿದೆ. ಆದ್ದರಿಂದ, ಈ ಎಲ್ಲ ವಿಡಿಯೊಗಳನ್ನು ತೆಗೆದು ಹಾಕಲು ನಿರ್ದೇಶಿಸಬೇಕು, ಇಂಥ ವೇದಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಭವಿಷ್ಯದಲ್ಲಿ ವಿಡಿಯೊಗಳನ್ನು ಬಳಸದಂತೆ ನಿರ್ಬಂಧಿಸಬೇಕು ಎಂದು ಮನವಿ ಮಾಡಿದರು.
ಕೇಂದ್ರ ಸರ್ಕಾರದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ. ಅರವಿಂದ್ ಕಾಮತ್, ಲೈವ್ಸ್ಟ್ರೀಮ್ ವಿಡಿಯೊಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಈಗಾಗಲೇ ನಿಯಮಗಳನ್ನು ರೂಪಿಸಿದೆ. ಈ ಸಂಬಂಧ ಹೈಕೋರ್ಟ್ನ ರಿಜಿಸ್ಟ್ರಾರ್ ಜನರಲ್ ಅವರು ಕ್ರಮಕೈಗೊಂಡರೆ ಸಾಕು ಎಂದರು.
Related Articles
Thank you for your comment. It is awaiting moderation.
Comments (0)