ಹೈಕೋರ್ಟ್‌ನಲ್ಲಿಂದು ನಿರ್ಧಾರವಾಗಲಿದೆ ಸಿಎಂ ಸಿದ್ದರಾಮಯ್ಯ ಭವಿಷ್ಯ; ಇಲ್ಲಿದೆ ತೀರ್ಪಿನ ನಂತರದ ಲೆಕ್ಕಾಚಾರ
- by Jagan Ramesh
- September 23, 2024
- 84 Views
ಬೆಂಗಳೂರು: ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ನಡೆಸಲು ರಾಜ್ಯಪಾಲರು ನೀಡಿರುವ ಅನುಮತಿಯ ಸಿಂಧುತ್ವದ ಕುರಿತು ಹೈಕೋರ್ಟ್‌ನಿಂದ ಇಂದು ತೀರ್ಪು ಹೊರ ಬೀಳಲಿದೆ. ಮುಖ್ಯಮಂತ್ರಿಗಳ ಅರ್ಜಿಯನ್ನು ಹೈಕೋರ್ಟ್ ಪುರಸ್ಕರಿಸಿದರೆ ಏನಾಗಬಹುದು, ಒಂದೊಮ್ಮೆ ಅರ್ಜಿ ವಜಾಗೊಂಡರೆ ಅವರ ಮುಂದಿರುವ ಆಯ್ಕೆಗಳೇನು ಎಂಬ ಲೆಕ್ಕಚಾರಗಳೂ ಮಹತ್ವ ಪಡೆದುಕೊಂಡಿವೆ.
ಹೈಕೋರ್ಟ್ ತೀರ್ಪಿನಿಂದ ಸಿದ್ದರಾಮಯ್ಯ ಅವರಿಗೆ ಎದುರಾಗಿರುವ ಪ್ರಾಸಿಕ್ಯೂಷನ್ ಭೀತಿ ದೂರವಾಗುವುದೇ ಅಥವಾ ಅವರ ಸಿಎಂ ಕುರ್ಚಿಯೇ ಅಲುಗಾಡಲಿದೆಯೇ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದ್ದು, ಇಡೀ ರಾಜ್ಯದ ಚಿತ್ತ ಇದೀಗ ಹೈಕೋರ್ಟ್‌ನತ್ತ ನೆಟ್ಟಿದೆ.
ತೀರ್ಪಿನ ನಂತರದ ಲೆಕ್ಕಾಚಾರ:
ಮುಖ್ಯಮಂತ್ರಿಗಳ ಅರ್ಜಿಯನ್ನು ಹೈಕೋರ್ಟ್ ಪುರಸ್ಕರಿಸಿದರೆ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ನೀಡಿರುವ ಪೂರ್ವಾನುಮತಿ ರದ್ದಾಗುತ್ತದೆ. ಇದರಿಂದ, ಸಿದ್ದರಾಮಯ್ಯ ನಿರಾಳರಾಗುತ್ತಾರೆ. ಆದರೆ, ಪೂರ್ವಾನುಮತಿ ನೀಡಿರುವ ರಾಜ್ಯಪಾಲರ ಕ್ರಮವನ್ನು ಹೈಕೋರ್ಟ್ ಊರ್ಜಿತಗೊಳಿಸಿ, ಅರ್ಜಿ ತಿರಸ್ಕರಿಸಿದರೆ ಸಿದ್ದರಾಮಯ್ಯ ಅವರಿಗೆ ಮತ್ತೆ ಪ್ರಾಸಿಕ್ಯೂಷನ್ ಭೀತಿ ಕಾಡುವ ಜತೆಗೆ ಸಿಎಂ ಕುರ್ಚಿಗೂ ಸಂಚಕಾರ ಎದುರಾಗುವ ಸಾಧ್ಯತೆ ಇದೆ.
ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ರಿಟ್ ಅರ್ಜಿ ವಜಾಗೊಳಿಸಿದರೆ, ಆ ತೀರ್ಪು ರದ್ದುಕೋರಿ ಸಿದ್ದರಾಮಯ್ಯ ಅವರು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಬಹುದು. ಆಗ, ಮಧ್ಯಂತರ ಮನವಿಯಾಗಿ ರಾಜ್ಯಪಾಲರ ಪೂರ್ವಾನುಮತಿ ಆದೇಶ ಮತ್ತು ಏಕಸದಸ್ಯ ನ್ಯಾಯಪೀಠದ ತೀರ್ಪಿಗೆ ತಡೆ ಕೋರಬಹುದು. ಒಂದೊಮ್ಮೆ ವಿಭಾಗೀಯ ಪೀಠ ಮಧ್ಯಂತರ ತಡೆಯಾಜ್ಞೆ ನೀಡಿದರೆ, ಮೇಲ್ಮನವಿ ಇತ್ಯರ್ಥವಾಗುವವರೆಗೆ ಮತ್ತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರಾಳರಾಗಿರಬಹುದು.
ಸಿದ್ದರಾಮಯ್ಯ ಅವರ ರಿಟ್ ಅರ್ಜಿ ಮಾನ್ಯಗೊಂಡ ಪಕ್ಷದಲ್ಲಿ ಅದನ್ನು ಪ್ರಶ್ನಿಸಿ ರಾಜ್ಯಪಾಲರ ಕಚೇರಿಯೂ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಬಹುದು. ಜತೆಗೆ, ಏಕಸದಸ್ಯ ನ್ಯಾಯಪೀಠದ ತೀರ್ಪಿಗೆ ವಿಭಾಗೀಯ ಪೀಠದಲ್ಲಿ ತಡೆಯಾಜ್ಞೆ ಕೋರುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸದೇ ನೇರವಾಗಿ ಸುಪ್ರೀಂಕೋರ್ಟ್‌ಗೆ ವಿಶೇಷ ಮೇಲ್ಮನವಿ (ಎಸ್‌ಎಲ್‌ಪಿ) ಸಲ್ಲಿಸುವ ಸಾಧ್ಯತೆಯೂ ಇದೆ.
ಈ ಎರಡೂ ಸಾಧ್ಯತೆಗಳನ್ನು ಹೊರತುಪಡಿಸಿ, ಸಿಎಂ ವಿರುದ್ಧದ ಪ್ರಾಸಿಕ್ಯೂಷನ್ ಅನುಮತಿಯನ್ನು ರದ್ದುಪಡಿಸಿ, ಪ್ರಕರಣವನ್ನು ಮತ್ತೆ ರಾಜ್ಯಪಾಲರ ಅಂಗಳಕ್ಕೆ ಮರಳಿಸುವ ಸಾಧ್ಯತೆಯೂ ಇದೆ. ಆಗ ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿರುವ ದೂರುಗಳನ್ನು ಹೊಸದಾಗಿ ಪರಿಗಣಿಸಿ, ಎಲ್ಲ ದಾಖಲೆಗಳನ್ನೂ ಪರಿಶೀಲಿಸಿದ ನಂತರವೇ ಸೂಕ್ತ ಕಾರಣಗಳನ್ನು ನೀಡಿ ತೀರ್ಮಾನ ಕೈಗೊಳ್ಳುವಂತೆ ರಾಜ್ಯಪಾಲರನ್ನು ಹೈಕೋರ್ಟ್ ಕೋರಬಹುದು. ಆಗ ಪ್ರಕರಣ ಮತ್ತೆ ಮೊದಲಿನ ಹಂತಕ್ಕೆ ಬರಲಿದೆ.
Related Articles
Thank you for your comment. It is awaiting moderation.
Comments (0)