ಕಲಾಪದ ವಿಡಿಯೊ ದುರ್ಬಳಕೆ ತಡೆಗೆ ಕ್ರಮ ಕೈಗೊಳ್ಳಲು ಮನವಿ; ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ ಎಎಬಿ

ಬೆಂಗಳೂರು: ಹೈಕೋರ್ಟ್ ಕಲಾಪದ ನೇರಪ್ರಸಾರದ (ಲೈವ್ ಸ್ಟ್ರೀಮಿಂಗ್) ವಿಡಿಯೊಗಳೂ ಸೇರಿ ಕೋರ್ಟ್ ಪ್ರಕ್ರಿಯೆಗೆ ಸಂಬಂಧಿಸಿದ ದೃಶ್ಯಗಳ ಸಂಕಲನ ಅಥವಾ ಅಕ್ರಮ ಬಳಕೆ ಮಾಡದಂತೆ ಸಾಮಾಜಿಕ ಜಾಲತಾಣ, ಮಾಧ್ಯಮ ಸಂಸ್ಥೆಗಳು ಹಾಗೂ ಸಾರ್ವಜನಿಕರನ್ನು ನಿರ್ಬಂಧಿಸಿ ಸೂಕ್ತ ಆದೇಶ ಹೊರಡಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಬೆಂಗಳೂರು ವಕೀಲರ ಸಂಘ (ಎಎಬಿ) ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಸಂಘದ ಅಧ್ಯಕ್ಷರೂ ಆದ ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ ಹಾಗೂ ಪ್ರಧಾನ ಕಾರ್ಯದರ್ಶಿ ಟಿ.ಜಿ. ರವಿ ರಿಟ್‌ ಅರ್ಜಿ ಸಲ್ಲಿಸಿದ್ದು, ಅರ್ಜಿಯನ್ನು ಮಂಗಳವಾರ (ಸೆಪ್ಟೆಂಬರ್ 24) ವಿಚಾರಣೆ ನಡೆಸುವುದಾಗಿ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರ ಏಕಸದಸ್ಯ ನ್ಯಾಯಪೀಠ ತಿಳಿಸಿದೆ.

ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿಗಳು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕರ್ನಾಟಕ ಹೈಕೋರ್ಟ್‌ ರಿಜಿಸ್ಟ್ರಾರ್ ಜನರಲ್‌, ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಯೂಟ್ಯೂಬ್‌, ಮೆಟಾ (ಫೇಸ್‌ಬುಕ್‌), ಟ್ವಿಟರ್‌ ಕಮ್ಯುನಿಕೇಶನ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಕಂಪನಿ, ಕಹಳೆ ನ್ಯೂಸ್‌, ಫ್ಯಾನ್ಸ್‌ ಟ್ರೋಲ್‌, ಅವನಿಯಾನ ಹಾಗೂ ರವೀಂದ್ರ ಜೋಶಿ ಕ್ರಿಯೇಶನ್ಸ್‌‌ನ ಅಧಿಕೃತ ಪ್ರತಿನಿಧಿಗಳನ್ನು ಅರ್ಜಿಯಲ್ಲಿ ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

ಅರ್ಜಿಯಲ್ಲೇನಿದೆ?
ಇತ್ತೀಚಿನ ದಿನಗಳಲ್ಲಿ ಹೈಕೋರ್ಟ್‌ ಕಲಾಪಗಳ ನೇರ ಪ್ರಸಾರವನ್ನು ದುರುಪಯೋಗ ಮಾಡಿಕೊಳ್ಳುತ್ತಿರುವ ಪ್ರಕರಣ ಹೆಚ್ಚುತ್ತಿವೆ. ಕಲಾಪಗಳ ಆಯ್ದ ತುಣುಕಗಳನ್ನು ಸಾಮಾಜಿಕ ಜಾಲತಾಣದ ಮಾಧ್ಯಮಗಳು ತಮ್ಮ ಮನಸಿಗೆ ಬಂದಂತೆ ಸಂಕಲನಗೊಳಿಸಿ ಪ್ರಸಾರ ಮಾಡುತ್ತಿವೆ. ಇದರಿಂದ, ಇವುಗಳನ್ನು ವೀಕ್ಷಿಸುವ ಸಾರ್ವಜನಿಕರಲ್ಲಿ ನ್ಯಾಯಾಂಗದ ಬಗ್ಗೆ ತಪ್ಪು ಕಲ್ಪನೆ ಮೂಡಲು ಅವಕಾಶ ಕಲ್ಪಿಸಿದಂತಾಗಿದೆ. ಈ ಪ್ರವೃತ್ತಿಯು ಕಲಾಪದ ತುಣುಕಗಳನ್ನು ವಿಕ್ಷಿಪ್ತಗೊಳಿಸಿ ಯೂಟ್ಯೂಬ್, ಫೇಸ್‌‌ಬುಕ್, ಎಕ್ಸ್ ಕಾರ್ಪ್ (ಟ್ವಿಟರ್‌), ಇನ್ಸ್ಟಾಗ್ರಾಂ ಮತ್ತು ಇತರ ಸಾಮಾಜಿಕ ತಾಣಗಳ ಪ್ರತಿನಿಧಿಗಳು ಹಣ ಮಾಡಿಕೊಳ್ಳುವ ಮತ್ತು ಮನರಂಜನಾ ಸಾಧನದ ವಾಣಿಜ್ಯ ಚಟುವಟಿಕೆಗೆ ದಾರಿ ಮಾಡಿಕೊಟ್ಟಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಕಲಾಪದ ತುಣುಕುಗಳನ್ನು ಭಾಗಶಃ ಸಂಕಲನ ಮಾಡಿ ಬಿತ್ತಿರಿಸುವ ಕಾರಣ ಕಾಮೆಂಟ್‌ ಬಾಕ್ಸ್‌ಗಳಲ್ಲಿ, ನ್ಯಾಯಮೂರ್ತಿಗಳು ಮತ್ತು ವಕೀಲರ ಬಗ್ಗೆ ಅವಹೇಳನಕಾರಿ, ಮಾನಹಾನಿಕರ ಮತ್ತು ನ್ಯಾಯಾಂಗದ ಘನತೆಗೆ ಧಕ್ಕೆ ಉಂಟಾಗುವಂತಹ ಟೀಕೆ-ಟಿಪ್ಪಣಿ ಮಾಡಲಾಗುತ್ತಿದೆ. ಇದರಿಂದ, ವಕೀಲ ವೃಂದದ ವೃತ್ತಿಗೆ ತೊಂದರೆ ಉಂಟು ಮಾಡುತ್ತಿದ್ದರೆ, ಕಕ್ಷಿದಾರರಿಗೆ ನ್ಯಾಯಾಂಗ ಅಧಿಕಾರಿಗಳು ಮತ್ತು ವಕೀಲರ ಬಗ್ಗೆ ತಪ್ಪು ಕಲ್ಪನೆಗೆ ಎಡೆ ಮಾಡಿಕೊಡುತ್ತಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

ಮಹಿಳೆಯರು-ಮಕ್ಕಳ ಹಕ್ಕುಗಳ ಉಲ್ಲಂಘನೆ:
ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ–2012 ಮತ್ತು ವೈವಾಹಿಕ ಕಲಹಗಳು, ದಾಂಪತ್ಯ ವಿಚ್ಛೇದನಕ್ಕೆ ಸಂಬಂಧಿಸಿದ ಪ್ರಕರಣಗಳು ಅತ್ಯಂತ ಸೂಕ್ಷ್ಮ ಮತ್ತು ಸಂವೇದನಾಶೀಲ ವಿಷಯಗಳಾಗಿದ್ದು, ಮಹಿಳೆಯರು ಮತ್ತು ಮಕ್ಕಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಮಾಧ್ಯಮಗಳ ಮುಖಾಂತರ ಬಿತ್ತರಗೊಳಿಸುವುದು ಕಕ್ಷಿದಾರರ ವೈಯಕ್ತಿಕ ಹಕ್ಕುಗಳ ಉಲ್ಲಂಘನೆ ಎಂಬುದನ್ನು ಸುಪ್ರೀಂಕೋರ್ಟ್‌ ಅನೇಕ ಬಾರಿ ಹೇಳಿದೆ. ಆದ್ದರಿಂದ, ನೇರ ಪ್ರಸಾರದ ದೃಶ್ಯಗಳ ದುರುಪಯೋಗ ಮಾಡಿಕೊಳ್ಳುತ್ತಿರುವುದನ್ನು ಕಾನೂನು ಬಾಹಿರ ಕೃತ್ಯ ಎಂದು ಪರಿಗಣಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಮನವಿ ಏನು?
• ಕೋರ್ಟ್ ಕಲಾಪದ ದೃಶ್ಯಗಳನ್ನು ಅಕ್ರಮವಾಗಿ ಬಳಸದಂತೆ ಸಾಮಾಜಿಕ ಜಾಲತಾಣ, ಮಾಧ್ಯಮ ಸಂಸ್ಥೆಗಳು ಹಾಗೂ ಸಾರ್ವಜನಿಕರನ್ನು ನಿರ್ಬಂಧಿಸಿ ಸೂಕ್ತ ಆದೇಶ ಹೊರಡಿಸಲು ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ನಿರ್ದೇಶಿಸಬೇಕು.

• ಕೋರ್ಟ್ ಪ್ರಕ್ರಿಯೆಯ ದೃಶ್ಯಾವಳಿ ಬಳಸಿಕೊಂಡು ಪ್ರತಿವಾದಿ ಪಟ್ಟಿಯಲ್ಲಿರುವ ಯೂಟ್ಯೂಬ್ ಚಾನಲ್‌ಗಳೂ ಸೇರಿ ಇತರ ಯಾವುದೇ ವ್ಯಕ್ತಿಗಳು ಸೃಷ್ಟಿಸಿರುವ ವಿಡಿಯೊಗಳನ್ನು ಅಳಿಸಿಹಾಕಲು ಸಾಮಾಜಿಕ ಜಾಲತಾಣಗಳಾದ ಯೂಟ್ಯೂಬ್, ಫೇಸ್‌ಬುಕ್ ಹಾಗೂ ಟ್ವಿಟರ್‌ ಸಂಸ್ಥೆಗಳಿಗೆ ನಿರ್ದೇಶಿಸಬೇಕು.

• ಕೋರ್ಟ್ ಕಲಾಪಗಳು / ನೇರ ಪ್ರಸಾರಗೊಂಡ ದೃಶ್ಯಾವಳಿಗಳನ್ನು ದುರ್ಬಳಕೆ ಮಾಡಿಕೊಳ್ಳುವವರ ವಿರುದ್ಧ ಕ್ರಿಮಿನಲ್ ಕ್ರಮ ಜರುಗಿಸಲು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಹಾಗೂ ಡಿಜಿ-ಐಜಿಪಿಗೆ ನಿರ್ದೇಶಿಸಬೇಕು.

• ಕೋರ್ಟ್ ಕಲಾಪಗಳ ನೇರಪ್ರಸಾರ ಸ್ಥಗಿತಗೊಳಿಸುವ ಹಾಗೂ ಈಗಾಗಲೇ ಸಂಗ್ರಹಿಸಿರುವ ವಿಡಿಯೊಗಳನ್ನು ಅಳಿಸಿಹಾಕುವ ಕುರಿತು ನಿರ್ಧರಿಸಲು ವಿಚಾರವನ್ನು ಮುಖ್ಯ ನ್ಯಾಯಮೂರ್ತಿಗಳು ಅಥವಾ ಪೂರ್ಣಪೀಠದ ಮುಂದೆ ಮಂಡಿಸಲು ರಿಜಿಸ್ಟ್ರಾರ್ ಜನರಲ್‌ಗೆ ನಿರ್ದೇಶಿಸಬೇಕು.

Related Articles

Comments (0)

Leave a Comment