- ಟ್ರಯಲ್ ಕೋರ್ಟ್
- ಹೈಕೋರ್ಟ್
- Like this post: 0
ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೂವರು ಆರೋಪಿಗಳಿಗೆ ಜಾಮೀನು; ಹೈಕೋರ್ಟ್ನಲ್ಲಿ ಒಬ್ಬ, ಸೆಷನ್ಸ್ ಕೋರ್ಟ್ನಲ್ಲಿ ಇಬ್ಬರಿಗೆ ಬೇಲ್
- by Jagan Ramesh
- September 23, 2024
- 120 Views
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮೂವರು ಆರೋಪಿಗಳಿಗೆ ಸೋಮವಾರ ಜಾಮೀನು ದೊರೆತಿದೆ. ಪ್ರಕರಣದ 16ನೇ ಆರೋಪಿ ಕೇಶವಮೂರ್ತಿಗೆ ಹೈಕೋರ್ಟ್ ಜಾಮೀನು ನೀಡಿದ್ದರೆ, 15ನೇ ಆರೋಪಿ ಕಾರ್ತಿಕ್ ಹಾಗೂ 17ನೇ ಆರೋಪಿ ನಿಖಿಲ್ ನಾಯಕ್ಗೆ ಬೆಂಗಳೂರಿನ ಸೆಷನ್ಸ್ ನ್ಯಾಯಾಲಯದಿಂದ ಜಾಮೀನು ದೊರೆತಿದೆ.
ಜಾಮೀನು ಕೋರಿ ಬೆಂಗಳೂರಿನ ಕೇಶವಮೂರ್ತಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ಸೋಮವಾರ ಮಾನ್ಯ ಮಾಡಿದೆ. ಮತ್ತೊಂದೆಡೆ, ಆರೋಪಿಗಳಾದ ಕಾರ್ತಿಕ್ ಹಾಗೂ ನಿಖಿಲ್ ನಾಯಕ್ಗೆ 57ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಜೈಶಂಕರ್ ಅವರು ಜಾಮೀನು ಮಂಜೂರು ಮಾಡಿದ್ದಾರೆ.
ಇದರೊಂದಿಗೆ, ಪ್ರಕರಣದ 17 ಆರೋಪಿಗಳಲ್ಲಿ ಕೊನೆಯ ಮೂವರಿಗೆ ಒಂದೇ ದಿನ ಜಾಮೀನು ದೊರೆತಂತಾಗಿದ್ದು, ಮೂವರೂ ಆರೋಪಿಗಳ ಜಾಮೀನಿಗೆ ಸಂಬಂಧಿಸಿದ ವಿಸ್ತೃತ ಆದೇಶ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ದರ್ಶನ್, ಪವಿತ್ರಾ ಗೌಡ ಅರ್ಜಿ ಮುಂದೂಡಿಕೆ:
ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿರುವ ಪವಿತ್ರಾ ಗೌಡ ಮತ್ತು ಎರಡನೇ ಆರೋಪಿಯಾಗಿರುವ ನಟ ದರ್ಶನ್ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಸೆಷನ್ಸ್ ಕೋರ್ಟ್ ಕ್ರಮವಾಗಿ ಸೆಪ್ಟೆಂಬರ್ 25 ಮತ್ತು 27ಕ್ಕೆ ಮುಂದೂಡಿದೆ. ಎರಡೂ ಅರ್ಜಿಗಳಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಪ್ರಾಸಿಕ್ಯೂಷನ್ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಅರ್ಜಿ ವಿಚಾರಣೆ ಮುಂದೂಡಿಕೆಯಾಗಿದೆ.
ಜಾಮೀನು ಕೋರಿ ಮತ್ತೆ ಐವರಿಂದ ಅರ್ಜಿ:
ಪ್ರಕರಣದ 3ನೇ ಆರೋಪಿ ಪುಟ್ಟಸ್ವಾಮಿ ಅಲಿಯಾಸ್ ಪವನ್, 4ನೇ ಆರೋಪಿ ಎನ್. ರಾಘವೇಂದ್ರ, 7ನೇ ಆರೋಪಿ ಅನುಕುಮಾರ್ ಅಲಿಯಾಸ್ ಅನು, 11ನೇ ಆರೋಪಿ ಆರ್. ನಾಗರಾಜು ಮತ್ತು 12ನೇ ಆರೋಪಿ ಎಂ. ಲಕ್ಷ್ಮಣ್ ಸಹ ಜಾಮೀನು ಕೋರಿ ಸೆಷನ್ಸ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗಳ ಸಂಬಂಧ ಪ್ರಾಸಿಕ್ಯೂಷನ್ಗೆ ನೋಟಿಸ್ ಜಾರಿಗೊಳಿಸಿರುವ ನ್ಯಾಯಾಲು, ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿದೆ. ಅರ್ಜಿದಾರರ ಪರವಾಗಿ ವಕೀಲರಾದ ಕೆ. ರಾಮ್ ಸಿಂಗ್, ಸೂರ್ಯ ಮುಕುಂದರಾಜ್ ಮತ್ತು ಜಿ. ಲಕ್ಷ್ಮೀಕಾಂತ್ ವಕಾಲತ್ತು ವಹಿಸಿದ್ದಾರೆ.
Related Articles
Thank you for your comment. It is awaiting moderation.
Comments (0)