- ಪ್ರಮುಖ ಸಮಾಚಾರಗಳು
- Like this post: 1
ಯುವ ವಕೀಲರು ಜನರ ನೋವಿಗೆ ದನಿಯಾಗಬೇಕು; ಸಿಜೆಐ ಡಿ.ವೈ. ಚಂದ್ರಚೂಡ್ ಕಿವಿಮಾತು
- by Jagan Ramesh
- September 22, 2024
- 48 Views
ಬೆಂಗಳೂರು: ಯುವ ವಕೀಲರು ಜನರ ವೈಯಕ್ತಿಕ ಸ್ವಾತಂತ್ರ್ಯ, ಘನತೆ ಮತ್ತು ಸ್ವಾಯತ್ತತೆ ರಕ್ಷಣೆಗೆ ಸದಾ ಪ್ರಯತ್ನಿಸಬೇಕು. ಜನರ ನೋವಿಗೆ ದನಿಯಾಗಿ ಕಾನೂನು ಹೋರಾಟದ ಮೂಲಕ ನ್ಯಾಯ ಕಲ್ಪಿಸಬೇಕು ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ಹೇಳಿದರು.
ನಗರದ ಸುಮನಹಳ್ಳಿಯ ಡಾ.ಬಾಬು ಜಗಜೀವನ್ ರಾಮ್ ಭವನದಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ 32ನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದ ಬಳಿಕ ಪದವೀಧರರನ್ನು ಉದ್ದೇಶಿಸಿ ಮಾತನಾಡಿದ ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆಗಿರುವ ಸಿಜೆಐ ಚಂದ್ರಚೂಡ್, ಇಂದಿನಿಂದ ವೈವಿಧ್ಯಮಯ ಜನರು ನಿಮ್ಮ ಸಂಪರ್ಕಕ್ಕೆ ಬರಲಿದ್ದಾರೆ. ನಿಮ್ಮ ವೃತ್ತಿ ಜೀವನದ ಆರಂಭದಲ್ಲಿ ಹಲವು ವಿಚಾರ ಅಥವಾ ಪ್ರಶ್ನೆಗಳು ಎದುರಾಗಬಹುದು. ಆಗ ಅಭದ್ರತೆ, ಒಂಟಿತನ, ಅಸಮರ್ಥತೆಯ ಭಾವನೆ ಕಾಡಬಹುದು. ಎಂಥದೇ ಪರಿಸ್ಥಿತಿ ಎದುರಾದರೂ ಸಾವಧಾನದಿಂದಿರಬೇಕು ಎಂದು ಸಲಹೆ ನೀಡಿದರು.
ಜನರೊಂದಿಗೆ ಸಹನೆ, ಸಂಯಮ ಹಾಗೂ ಸಹಾನೂಭೂತಿಯಿಂದ ವರ್ತಿಸಬೇಕು. ಅವರ ನೋವಿಗೆ ಧ್ವನಿಯಾಗಬೇಕು. ಕಾನೂನು ಹೋರಾಟ ನಡೆಸಿ ಅವರಿಗೆ ನ್ಯಾಯ ದೊರಕಿಸಿಕೊಡಲು ಯತ್ನಿಸಬೇಕು. ವಕೀಲಿಕೆ ಆರಂಭಿಸಿದ ನಂತರ ಜನರ ವೈಯಕ್ತಿಕ ಸ್ವಾತಂತ್ರ್ಯ, ಘನತೆ ಮತ್ತು ಸ್ವಾಯತ್ತತೆ ಮುಂತಾದ ಶಾಶ್ವತ ಮೌಲ್ಯಗಳ ರಕ್ಷಣೆಗೆ ಸದಾ ಪ್ರಯತ್ನಿಸಬೇಕು. ಸವಾಲುಗಳು ಎದುರಾದಾಗ ಅಂತಾರಾತ್ಮ ಮತ್ತು ವೈಯುಕ್ತಿಕ ಮೌಲ್ಯಗಳ ಆಧಾರದಲ್ಲಿ ತೀರ್ಮಾನ ಕೈಗೊಳ್ಳಬೇಕು. ಒಳಧ್ವನಿ ಮತ್ತು ದೃಷ್ಟಿಕೋನವನ್ನು ಎಂದಿಗೂ ಕೀಳಾಗಿ ಅಂದಾಜಿಸಬಾರದು ಎಂದು ಕಿವಿಮಾತು ಹೇಳಿದರು.
ಇಂದಿನ ಕಾಲದಲ್ಲಿ ಸಂಕೀರ್ಣ ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಇದು ದೀರ್ಘಾಕಾಲದಲ್ಲಿ ನಮ್ಮ ನೆಮ್ಮದಿಗೆ ಭಂಗ ತರುತ್ತದೆ. ವೃತ್ತಿ ಜೀವನದಲ್ಲಿನ ಸ್ವಂತಿಕೆ ಹಾಗೂ ಮೌಲ್ಯ ಕಾಯ್ದುಕೊಂಡರೆ, ಸುತ್ತಲಿನ ಜನರ ನಿಮ್ಮತ್ತ ಆಕರ್ಷಿತರಾಗುತ್ತಾರೆ. ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯ ಅರಿತುಕೊಂಡು ನಡೆದರೆ ಯಶಸ್ಸು ಕಟ್ಟಿಟ್ಟಬುತ್ತಿ ಎಂದು ಸಿಜೆಐ ಚಂದ್ರಚೂಡ್ ಹೇಳಿದರು.
ಸುಪ್ರೀಂಕೋರ್ಟ್ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಮಾತನಾಡಿ, ಇಂದಿನ ಡಿಜಿಟಲ್ ಯುಗದಲ್ಲಿ ವಕೀಲರು ತಂತ್ರಜ್ಞಾನವನ್ನು ಅಗತ್ಯತೆಗೆ ತಕ್ಕಂತೆ ಬಳಸಿಕೊಳ್ಳಬೇಕು. ಮಾನವೀಯ ಮೌಲ್ಯವನ್ನೂ ಹೊಂದಿರಬೇಕು. ಸಮಾಜದಲ್ಲಿ ಆಗುತ್ತಿರುವ ಆರ್ಥಿಕ ಮತ್ತು ಸಾಮಾಜಿಕ ಸ್ಥಿತ್ಯಂತರದ ನಡುವೆ ವಕೀಲರು ದೂರದೃಷ್ಟಿ ಹೊಂದಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್, ಕಾನೂನು ವಿಶ್ವವಿದ್ಯಾಲಯದ ಕುಲಪತಿ ಸುಧೀರ್ ಕೃಷ್ಣಸ್ವಾಮಿ ಹಾಗೂ ಭಾರತೀಯ ವಕೀಲರ ಪರಿಷತ್ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಮತ್ತಿತರರು ಉಪಸ್ಥಿತರಿದ್ದರು.
1,079 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ:
ಘಟಿಕೋತ್ಸವದಲ್ಲಿ 2 ಪಿಎಚ್.ಡಿ, 52 ಸ್ನಾತಕೋತ್ತರ ಸಾರ್ವಜನಿಕ ನೀತಿ, 90 ಸ್ನಾತಕೋತ್ತರ ಕಾನೂನು, 85 ಕಲಾ ಮತ್ತು ಕಾನೂನು (ಆನರ್ಸ್) ಮತ್ತು 850 ಆನ್ಲೈನ್ ಮತ್ತು ಹೈಬ್ರಿಡ್ ಶಿಕ್ಷಣ ಸೇರಿ ವಿವಿಧ ವಿಷಯಗಳಲ್ಲಿ ಪದವಿ ಪೂರೈಸಿದ ಒಟ್ಟು 1,079 ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ ವಿತರಿಸಲಾಯಿತು.
Related Articles
Thank you for your comment. It is awaiting moderation.
Comments (0)