ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಸುರಕ್ಷತೆಗೆ ಅಪಾಯ; ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ

ಬೆಂಗಳೂರು: ಜಗತ್ತಿನ ಅನೇಕ ದೇಶಗಳು ಈಗಾಗಲೇ ಅಧಿಕಾರಿಗಳು ಅಥವಾ ಸಿಬ್ಬಂದಿಗೆ ವೇತನ ನೀಡಲಾಗದ ಸ್ಥಿತಿಗೆ ತಲುಪಿವೆ. ಕಾಂಗ್ರೆಸ್‌ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳನ್ನು ಕೊನೆಗೊಳಿಸದಿದ್ದರೆ ನಮ್ಮ ರಾಜ್ಯದ ಜನರೂ ಸುರಕ್ಷಿತವಾಗಿರುವುದಿಲ್ಲ ಎಂದು ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ ಹೈಕೋರ್ಟ್‌ನಲ್ಲಿ ವಾದ ಮಂಡನೆ ವೇಳೆ ಕಳವಳ ವ್ಯಕ್ತಪಡಿಸಿದರು.

ಮೈಸೂರಿನ ವರುಣಾ ವಿಧಾನಸಭಾ ಕ್ಷೇತ್ರದಿಂದ ಸಿದ್ದರಾಮಯ್ಯ ಅವರ ಆಯ್ಕೆ ಅಸಿಂಧುಗೊಳಿಸಲು ಕೋರಿ ವರುಣಾ ಹೋಬಳಿಯ ಕೂಡನಹಳ್ಳಿ ನಿವಾಸಿ ಕೆ.ಎಂ. ಶಂಕರ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಸ್. ಸುನೀಲ್‌ ದತ್‌ ಯಾದವ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಶನಿವಾರ ನಡೆಸಿತು.

ಅರ್ಜಿದಾರರ ಪರ ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ ವಾದ ಮಂಡಿಸಿ, ಗ್ಯಾರಂಟಿ ಯೋಜನೆಗಳು ಮೂಲಭೂತ ಹಕ್ಕುಗಳು ಮತ್ತು ಸಂವಿಧಾನದ ತತ್ವಗಳಿಗೆ ವಿರುದ್ಧವಾಗಿವೆ. ಆ ಯೋಜನೆಗಳನ್ನು ಒಳಗೊಂಡ ಪ್ರಣಾಳಿಕೆಯು ನೋಂದಾಯಿತ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ (ಐಎನ್‌ಸಿ) ಪ್ರಣಾಳಿಕೆ ಅಲ್ಲ. ಅದು ಕೆಪಿಸಿಸಿಯ ಪ್ರಣಾಳಿಕೆಯಾಗಿದೆ. ಕೆಪಿಸಿಸಿಯು ನೋಂದಾಯಿತ ಪಕ್ಷವಲ್ಲ. ಆದ್ದರಿಂದ, ಅದರ ಹೆಸರಿನಲ್ಲಿ ರೂಪಿಸಿರುವ ಪ್ರಣಾಳಿಕೆ ಭ್ರಷ್ಟಾಚಾರಕ್ಕೆ ಸಮ ಎಂದರು.

ಸಿದ್ದರಾಮಯ್ಯನವರೇ ಪ್ರಣಾಳಿಕೆ ರೂಪಿಸಿ, ಪ್ರಚಾರ ಮಾಡಿದ್ದಾರೆ. ಈ ಮೂಲಕ ಭ್ರಷ್ಟಾಚಾರ ಎಸಗಿದ್ದಾರೆ. ಆದ್ದರಿಂದ, ಅವರ ಆಯ್ಕೆ ಅನೂರ್ಜಿತಗೊಳಿಸಬೇಕು. ಕ್ರೋಢೀಕೃತ ನಿಧಿಯನ್ನು ಉಚಿತ ಯೋಜನೆಗೆ ಬಳಸಲಾಗದು. ಸರ್ಕಾರಕ್ಕೆ ಅಧಿಕಾರವಿಲ್ಲ ಎಂದು ನಾನು ಹೇಳುವುದಿಲ್ಲ. ಆದರೆ, ವಿಶೇಷ ಮಸೂದೆಯನ್ನು ಹಣಕಾಸು ಮಸೂದೆಯ ಪ್ರಕಾರ ಅಂಗೀಕರಿಸಬೇಕು. ಹಾಲಿ ಪ್ರಕರಣದಲ್ಲಿ ಯಾವುದೇ ಹಣಕಾಸು ಮಸೂದೆಯನ್ನು ಅಂಗೀಕರಿಸಲಾಗುವುದಿಲ್ಲ. ಇದು ತೆರಿಗೆದಾರರ ಹಣದ ದುರ್ಬಳಕೆಯಾಗಲಿದೆ ಎಂದು ಆಕ್ಷೇಪಿಸಿದರು.

ಉಚಿತ ಯೋಜನೆಗಳು ಸಂವಿಧಾನಕ್ಕೆ ವಿರುದ್ಧವಾಗಿವೆಯೇ ಎಂಬುದನ್ನು ನ್ಯಾಯಾಲಯ ಪರಿಶೀಲಿಸಬೇಕು. ಪ್ರಣಾಳಿಕೆ ಮತ್ತು ಅದರಲ್ಲಿನ ಅಂಶಗಳನ್ನು ಒಪ್ಪಿದರೆ ಅದನ್ನು ಕೆಪಿಸಿಸಿ ಮಾಡಬಹುದೇ? ಅದು ಭ್ರಷ್ಟಾಚಾರವಾಗುತ್ತದೆಯೇ ಎಂಬುದನ್ನು ನ್ಯಾಯಾಲಯ ನಿರ್ಧರಿಸಬೇಕು ಎಂದು ಪ್ರಮೀಳಾ ನೇಸರ್ಗಿ ಮನವಿ ಮಾಡಿದರು.

ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ನೀಡಿರುವ ಸೇವೆಯನ್ನು ಪುರುಷರಿಗೆ ವಿಸ್ತರಿಸದಿರುವುದು ಸಂವಿಧಾನದ 14ನೇ ಪರಿಚ್ಛೇದದ ಉಲ್ಲಂಘನೆಯಾಗಿದೆ. ಗ್ಯಾರಂಟಿ ಯೋಜನೆಗಳನ್ನು ಅಗತ್ಯವಿರುವವರೆಗೆ ನೀಡಬಹುದಿತ್ತು. ಅದನ್ನು ಎಲ್ಲರಿಗೂ ವಿಸ್ತರಿಸಲಾಗದು. ಇಲ್ಲಿ ಕರ್ನಾಟಕದ ಮತದಾರರನ್ನು ಲಘುವಾಗಿ ಪರಿಗಣಿಸಲಾಗಿದೆ ಎಂದು ಆಕ್ಷೇಪಿಸಿದರು.

ಇಡೀ ದಿನ ವಾದ ಆಲಿಸಿದ ನ್ಯಾಯಪೀಠ ನೇಸರ್ಗಿ ಅವರನ್ನು ಕುರಿತು, ನಿಮ್ಮ ವಾದ ಆಸಕ್ತಿಕರವಾಗಿತ್ತು. ನ್ಯಾಯಾಲಯವು ಮುಕ್ತ ಮನಸ್ಸಿನಿಂದ ಎಲ್ಲ ವಿಚಾರಗಳನ್ನು ಪರಿಶೀಲಿಸಲಿದೆ. ದಸರಾ ರಜೆಯ ಬಳಿಕ ವಿಚಾರಣೆ ನಡೆಸಲಾವುದು ಎಂದು ತಿಳಿಸಿ ಅರ್ಜಿ ವಿಚಾರಣೆ ಮುಂದೂಡಿತು.

Related Articles

Comments (0)

Leave a Comment