- ಪ್ರಮುಖ ಸಮಾಚಾರಗಳು
- ಹೈಕೋರ್ಟ್
- Like this post: 8
ಸಾಮಾಜಿಕ ಮಾಧ್ಯಮಗಳಲ್ಲಿ ಕೋರ್ಟ್ ಕಲಾಪದ ದೃಶ್ಯಗಳ ದುರ್ಬಳಕೆ; ಕ್ರಮ ಜರುಗಿಸುವಂತೆ ಸಿಜೆಗೆ ಪತ್ರ ಬರೆದ ಎಎಬಿ
- by Jagan Ramesh
- September 21, 2024
- 111 Views
ಬೆಂಗಳೂರು: ನ್ಯಾಯಾಲಯದ ಕಲಾಪಗಳ ನೇರಪ್ರಸಾರದ (ಲೈವ್ ಸ್ಟ್ರೀಮಿಂಗ್) ದೃಶ್ಯಾವಳಿಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಮನಬಂದಂತೆ ಬಳಸಿಕೊಳ್ಳುತ್ತಿರುವುದರಿಂದ ಹೊಸ ಹೊಸ ಸಮಸ್ಯೆಗಳು ಉದ್ಭವಿಸುತ್ತಿದ್ದು, ಅದನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಬೆಂಗಳೂರು ವಕೀಲರ ಸಂಘ ಮನವಿ ಮಾಡಿದೆ.
ಈ ಕುರಿತು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಅವರಿಗೆ ವಕೀಲರ ಸಂಘದ ಅಧ್ಯಕ್ಷರೂ ಆದ ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ ಅವರು ಶನಿವಾರ ಪತ್ರ ಬರೆದಿದ್ದು, ಸಾಮಾಜಿಕ ಮಾಧ್ಯಮಗಳ ಹಾವಳಿಯಿಂದ ವಕೀಲರು ಮತ್ತು ಅವರ ವೃತ್ತಿಯ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರುತ್ತಿದ್ದು, ಕೋರ್ಟ್ ಕಲಾಪಗಳ ನೇರ ಪ್ರಸಾರವು ನ್ಯಾಯಾಲಯದ ಚರ್ಚೆಗಳನ್ನು ಹೊಸ ಮತ್ತು ಅನಿರೀಕ್ಷಿತ ಮಟ್ಟಕ್ಕೆ ಕೊಂಡೊಯ್ಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕಲಾಪದ ದೃಶ್ಯ ಬಳಕೆ ನಿರ್ಬಂಧಕ್ಕೆ ಮನವಿ:
ಇತ್ತೀಚಿನ ಕೆಲ ಬೆಳವಣಿಗೆಗಳಿಂದ ನ್ಯಾಯಾಂಗ ಚರ್ಚೆಗಳ ನೇರ ಪ್ರಸಾರದ ವೇಳೆ ನ್ಯಾಯಾಲಯಗಳು, ನ್ಯಾಯಮೂರ್ತಿಗಳು ಹಾಗೂ ವಕೀಲರು ಅತ್ಯಂತ ಜಾಗರೂಕತೆಯಿಂದ ನಡೆದುಕೊಳ್ಳಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹೊಸ ವಾಣಿಜ್ಯ ಮಾರುಕಟ್ಟೆ ಸೃಷ್ಟಿಯಾಗಿದ್ದು, ನ್ಯಾಯಾಲಯದ ಕೆಲವೊಂದು ಚರ್ಚೆಗಳನ್ನು ತಮಗೆ ಬೇಕಾದಂತೆ ತಿರುಚಿ, ಟೀಕೆ ಮಾಡಲಾಗುತ್ತಿದೆ. ನ್ಯಾಯಮೂರ್ತಿಗಳು, ವಕೀಲರು ಹಾಗೂ ಕಕ್ಷಿದಾರರೂ ಸೇರಿ ಇಡೀ ವ್ಯವಸ್ಥೆಯನ್ನೇ ಅಪಮಾನಿಸಲಾಗುತ್ತಿದೆ. ಲಕ್ಷಾಂತರ ಲೈಕ್ಸ್ ಹಾಗೂ ವೀಕ್ಷಣೆ ಗಳಿಸಲು ಹಾತೊರೆಯುತ್ತಿರುವ ಸಾಮಾಜಿಕ ಮಾಧ್ಯಮಗಳಲ್ಲಿನ ವಾಣಿಜ್ಯ ಮಾರುಕಟ್ಟೆಗಳು ನ್ಯಾಯಾಲಯದ ಚರ್ಚೆಗಳನ್ನು ತಮ್ಮ ಮಾಧ್ಯಮಗಳಲ್ಲಿ ಪ್ರಕಟಿಸಿ ಹಣಗಳಿಸಲು ಮುಂದಾಗಿವೆ ಎಂದು ವಿವೇಕ್ ಸುಬ್ಬಾರೆಡ್ಡಿ ಪತ್ರದಲ್ಲಿ ವಿವರಿಸಿದ್ದಾರೆ.
ಸಾರ್ವಜನಿಕರಲ್ಲಿ ಕಾನೂನಿನ ಅರಿವು ಮೂಡಿಸುವ ಉದ್ದೇಶದಿಂದ ಹೈಕೋರ್ಟ್ ಕಲಾಪಗಳ ನೇರಪ್ರಸಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಅದರಿಂದ ಬೇರೆ ಬೇರೆ ರೀತಿಯ ಸಮಸ್ಯೆಗಳು ಉಂಟಾಗುತ್ತಿವೆ. ನ್ಯಾಯಾಂಗ ಚರ್ಚೆಗಳು ಜನರಲ್ಲಿ ಜಾಗೃತಿ ಮೂಡಿಸಲು ಇವೆಯೇ ಹೊರತು, ಅವುಗಳನ್ನು ಬಳಸಿಕೊಂಡು ಹಣ ಮಾಡುವುದಕ್ಕಲ್ಲ. ಆದ್ದರಿಂದ, ಕೋರ್ಟ್ ಕಲಾಪಗಳ ದೃಶ್ಯಗಳನ್ನು ಎಡಿಟ್ ಮಾಡುವುದು ಹಾಗೂ ಪೋಸ್ಟ್ ಮಾಡುವುದನ್ನು ನಿರ್ಬಂಧಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಮಾಡಿದ್ದಾರೆ.
ಕಾಮೆಂಟ್ ವಿಭಾಗ ನಿಷ್ಕ್ರಿಯಗೊಳಿಸಿ:
ನ್ಯಾಯಾಲಯದ ಕಲಾಪಗಳ ಯೂಟ್ಯೂಬ್ ನೇರ ಪ್ರಸಾರದ ಕಾಮೆಂಟ್ ವಿಭಾಗದಲ್ಲಿ ಸಾರ್ವಜನಿಕರಿಗೆ ಕಾಮೆಂಟ್ ಮಾಡಲು ಸ್ವಾತಂತ್ರ್ಯ ಕಲ್ಪಿಸಲಾಗಿದೆ. ವಿಷಾದದ ಸಂಗತಿಯೆಂದರೆ ವಕೀಲರು, ನ್ಯಾಯಮೂರ್ತಿಗಳು, ಕಕ್ಷಿದಾರರ ಬಗ್ಗೆ ಕೆಲವರು ಅಸಹ್ಯಕರ ಪದಗಳನ್ನು ಬಳಸಿ ಕಾಮೆಂಟ್ ಮಾಡುತ್ತಿದ್ದಾರೆ. ಪ್ರಕರಣಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲದವರೂ ಸಹ ಅವಹೇಳನಕಾರಿ ಹೇಳಿಕೆ ನೀಡುತ್ತಿರುವುದು ಆಶ್ಚರ್ಯಕರವಾಗಿದೆ. ವಕೀಲರು ಮತ್ತು ನ್ಯಾಯಮೂರ್ತಿಗಳನ್ನು ಅಪಮಾನಿಸುವ ಹಾಗೂ ಕೀಳುಮಟ್ಟದ ಕಾಮೆಂಟ್ ಹಾಕುತ್ತಿರುವುದು ಆಘಾತ ಮೂಡಿಸಿದೆ. ಕೇವಲ ವಿಡಿಯೋ ನೋಡಿ ಕೀಳುಮಟ್ಟದ ಕಾಮೆಂಟ್ ಮಾಡುವ ಮೂಲಕ ನ್ಯಾಯಮೂರ್ತಿಗಳು ಹಾಗೂ ವಕೀಲರ ಪ್ರಾಮಾಣಿಕತೆ ಮೇಲೆ ದಾಳಿ ನಡೆಸಲಾಗುತ್ತಿದೆ. ಆದ್ದರಿಂದ, ನ್ಯಾಯಾಂಗ ವ್ಯವಸ್ಥೆಯ ಹಿತದೃಷ್ಟಿಯಿಂದ ಹೈಕೋರ್ಟ್ನ ಯೂಟ್ಯೂಬ್ ನೇರ ಪ್ರಸಾರದ ಕಾಮೆಂಟ್ ವಿಭಾಗವನ್ನು ನಿಷ್ಕ್ರಿಯಗೊಳಿಸಬೇಕು. ಇಲ್ಲವಾದರೆ, ನ್ಯಾಯಾಂಗ ವ್ಯವಸ್ಥೆ ಬಗ್ಗೆ ಅರಿವಿಲ್ಲದವರೂ ಸಹ ಮನಬಂದಂತೆ ಕಾಮೆಂಟ್ ಮಾಡಿ ಸಂಸ್ಥೆಯ ಘನತೆಯನ್ನು ಬೀದಿಗೆ ಎಳೆಯುತ್ತಾರೆ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಯುವ ವಕೀಲರ ಭವಿಷ್ಯಕ್ಕೆ ಮಾರಕ:
ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಕೋರ್ಟ್ ಕಲಾಪಗಳ ದೃಶ್ಯಗಳಿಗೆ ಪ್ರಚೋದನಾತ್ಮಕ ಶೀರ್ಷಿಕೆಯನ್ನು ನೀಡಿ ಪ್ರಸಾರ ಮಾಡಲಾಗುತ್ತಿದೆ. ಉದ್ದೇಶಪೂರ್ವಕವಾಗಿ ವಕೀಲರನ್ನು ಅಪಮಾನಿಸಲು ಹಾಗೂ ವೀಕ್ಷಕರ ಸಂಖ್ಯೆ ಹೆಚ್ಚಿಸಿಕೊಳ್ಳುವ ಸಲುವಾಗಿ ಈ ರೀತಿ ಕೀಳುಮಟ್ಟದ ಶೀರ್ಷಿಕೆಗಳನ್ನು ನೀಡಲಾಗುತ್ತಿದೆ. ವಕೀಲರನ್ನು ನ್ಯಾಯಮೂರ್ತಿಗಳು ಬೈಯುತ್ತಿರುವ ವಿಡಿಯೊಗಳು ಹೆಚ್ಚು ವೀಕ್ಷಕರನ್ನು ಆಕರ್ಷಿಸುತ್ತಿವೆ. ನ್ಯಾಯಮೂರ್ತಿಗಳಿಂದ ತರಾಟೆಗೆ ಒಳಗಾದ ಯುವ ವಕೀಲರೊಬ್ಬರ ಪೋಟೋವನ್ನು ಪರದೆ ಮೇಲೆ ತೋರಿಸಲಾಗಿದೆ. ಇದರಿಂದ, ಆ ವಕೀಲನ ವೃತ್ತಿಪರತೆ ಹಾಗೂ ಸಾಮರ್ಥ್ಯದ ಬಗ್ಗೆ ಆತನ ಸಂಬಂಧಿಕರೂ ಸೇರಿ ಹಲವರು ಶಂಕೆ ವ್ಯಕ್ತಪಡಿಸಿದ್ದಾರೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.
ಈ ಒಂದು ಋಣಾತ್ಮಕ ಜನಪ್ರಿಯತೆಯ ಘಾಸಿಯಿಂದ ಹೊರಬರಲು ಆ ಯುವ ವಕೀಲನಿಗೆ ಹಲವು ವರ್ಷಗಳೇ ಬೇಕಾಗುತ್ತದೆ. ಆದ್ದರಿಂದ, ಯುವ ವಕೀಲರ ಕಾರ್ಯಕ್ಷಮತೆ ಬಗ್ಗೆ ವ್ಯತಿರಿಕ್ತವಾಗಿ ಕಾಮೆಂಟ್ ಮಾಡುವಾಗ ನಾವು ಅವರ ಭವಿಷ್ಯವನ್ನು ಅಪಾಯಕ್ಕೆ ದೂಡುತ್ತಿದ್ದೇವೆ ಎಂಬ ಅರಿವು ನಮ್ಮಲ್ಲಿ ಇರಬೇಕಾಗುತ್ತದೆ. ಕಲಾಪದ ನೇರ ಪ್ರಸಾರದ ವೇಳೆ ವಕೀಲರು ಮತ್ತವರ ಕಾರ್ಯಕ್ಷಮತೆ ಬಗ್ಗೆ ಕಾಮೆಂಟ್ ಮಾಡುವಾಗ ನ್ಯಾಯಮೂರ್ತಿಗಳು ಅತ್ಯಂತ ಎಚ್ಚರಿಕೆಯಿಂದ ಇರಬೇಕು. ಇದು ಲಘುವಾಗಿ ಪರಿಗಣಿಸುವ ವಿಚಾರವಲ್ಲ. ವಕೀಲರ ಸಂಘದ ಅಧ್ಯಕ್ಷರಾಗಿ ಈ ಪ್ರಮುಖ ವಿಚಾರವನ್ನು ಒತ್ತಿ ಹೇಳುತ್ತಿದ್ದೇನೆ ಎಂದು ವಿವೇಕ್ ರೆಡ್ಡಿ ಹೇಳಿದ್ದಾರೆ.
ಅನೇಕ ನ್ಯಾಯಮೂರ್ತಿಗಳು ಈ ವಿಚಾರದಲ್ಲಿ ಎಚ್ಚರಿಕೆಯಿಂದ ವರ್ತಿಸುತ್ತಿದ್ದು, ವಕೀಲರ ಕಾರ್ಯಕ್ಷಮತೆ ಬಗ್ಗೆ ವ್ಯತಿರಿಕ್ತ ಕಾಮೆಂಟ್ ಮಾಡುವುದರಿಂದ ದೂರ ಉಳಿದಿದ್ದಾರೆ. ಕೆಲ ನ್ಯಾಯಮೂರ್ತಿಗಳು ವಕೀಲರ ಭವಿಷ್ಯಕ್ಕೆ ತೊಂದರೆಯಾಗಬಾರದೆಂಬ ಕಾಳಜಿ ವಹಿಸಿ ಸಂವೇದನೆಶೀಲತೆಯಿಂದ ವರ್ತಿಸಬೇಕಾದ ಅಗತ್ಯವಿದೆ. ಆದ್ದರಿಂದ, ನ್ಯಾಯಮೂರ್ತಿಗಳು ವಕೀಲರ ವೈಯಕ್ತಿಕ ಕಾರ್ಯಕ್ಷಮತೆ ಬಗ್ಗೆ ಕಾಮೆಂಟ್ ಮಾಡುವುದನ್ನು ಬಿಟ್ಟು, ಪ್ರಕರಣದ ಕಾನೂನಾತ್ಮಕ ಅಂಶಗಳ ಮೇಲೆ ವಿಚಾರಣೆ ನಡೆಸಿ ತೀರ್ಮಾನ ಕೈಗೊಳ್ಳಬೇಕೆಂದು ವಿವೇಕ್ ರೆಡ್ಡಿ ಪತ್ರದಲ್ಲಿ ಮನವಿ ಮಾಡಿದ್ದಾರೆ.
Related Articles
Thank you for your comment. It is awaiting moderation.
Comments (0)