ಕಲಾಪಗಳ ವಿಡಿಯೊ ಬಳಕೆ ನಿರ್ಬಂಧಿಸಿದ ಹೈಕೋರ್ಟ್; ಪೂರ್ವಾನುಮತಿ ಇಲ್ಲದೆ ಬಳಸಿದರೆ ಕಾನೂನು ಕ್ರಮ
- by Jagan Ramesh
- September 20, 2024
- 274 Views
ಬೆಂಗಳೂರು: ನ್ಯಾಯಾಲಯದ ಕಲಾಪಗಳ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ಪೂರ್ವಾನುಮತಿ ಪಡೆಯದೆ ಕಲಾಪದ ವಿಡಿಯೋಗಳನ್ನು ರೆಕಾರ್ಡ್ ಹಾಗೂ ಹಂಚಿಕೆ ಮಾಡುವುದಕ್ಕೆ ನಿರ್ಬಂಧ ಹೇರಿದೆ.
ಹೈಕೋರ್ಟ್ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರು ಗೋರಿಪಾಳ್ಯವನ್ನು ಪಾಕಿಸ್ತಾನಕ್ಕೆ ಹೋಲಿಕೆ ಮಾಡಿದ ಮತ್ತು ಮಹಿಳಾ ವಕೀಲೆಯನ್ನು ಉದ್ದೇಶಿಸಿ ಲಘುವಾಗಿ ಕಾಮೆಂಟ್ ಮಾಡಿರುವುದಕ್ಕೆ ಸಂಬಂಧಿಸಿದ ವಿಡಿಯೊ ದೃಶ್ಯಗಳು ಯೂಟ್ಯೂಬ್ ಸೇರಿ ಇತರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿ ರಾಷ್ಟ್ರದಾದ್ಯಂತ ಚರ್ಚೆಯಾದ ಬೆನ್ನಲ್ಲೇ ನ್ಯಾಯಾಲಯದ ಕಲಾಪದ ವಿಡಿಯೊಗಳ ಬಳಕೆಯನ್ನು ಹೈಕೋರ್ಟ್ ನಿರ್ಬಂಧಿಸಿದೆ.
ಅನುಮತಿ ಪಡೆದಿರುವ ವ್ಯಕ್ತಿ ಅಥವಾ ಸಂಸ್ಥೆ ಹೊರತುಪಡಿಸಿ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ (ಮುದ್ರಣ, ವಿದ್ಯುನ್ಮಾನ ಮತ್ತು ಸಾಮಾಜಿಕ ಜಾಲತಾಣಗಳು) ನ್ಯಾಯಾಲಯಗಳ ಕಲಾಪದ ಲೈವ್ ಸ್ಟ್ರೀಮಿಂಗ್ ಅಥವಾ ಹೈಕೋರ್ಟ್ ಯೂಟ್ಯೂಬ್ ಚಾನಲ್ನಲ್ಲಿನ ವಿಡಿಯೊಗಳನ್ನು ರೆಕಾರ್ಡ್, ಹಂಚಿಕೆ ಮಾಡುವಂತಿಲ್ಲ ಎಂದು ವೀಕ್ಷಕರಿಗೆ ಎಚ್ಚರಿಸಿ ಲೈವ್ ಸ್ಟ್ರೀಮಿಂಗ್ಗೂ ಮುನ್ನ ಸಂದೇಶ ನೋಟಿಸ್ ಅನ್ನು ಎಲ್ಲ ಕೋರ್ಟ್ ಹಾಲ್ಗಳ ವಿಡಿಯೊ ಕಾನ್ಫರೆನ್ಸ್ ಪರದೆಯ ಮೇಲೆ ಕಲಾಪ ಆರಂಭವಾಗುವ ಮೊದಲು ಮತ್ತು ಮಧ್ಯಾಹ್ನ ಭೋಜನ ವಿರಾಮದ ವೇಳೆಯಲ್ಲಿ ಪ್ರಸಾರ ಮಾಡಲಾಗಿದೆ.
ಕಲಾಪಗಳ ರೆಕಾರ್ಡಿಂಗ್ ಮತ್ತು ಅರ್ಕ್ವೈವ್ ದತ್ತಾಂಶದ ಮೇಲೆ ನ್ಯಾಯಾಲಯಕ್ಕೆ ವಿಶೇಷ ಹಕ್ಕುಸ್ವಾಮ್ಯವಿದೆ. ನ್ಯಾಯಾಲಯದ ನಿಯಮ ಉಲ್ಲಂಘಿಸಿದ ವ್ಯಕ್ತಿ ಅಥವಾ ಸಂಸ್ಥೆಯ ವಿರುದ್ಧ ಕಾನೂನಿನಡಿ ಕ್ರಮ ಕೈಗೊಳ್ಳಲಾಗುತ್ತದೆ. ಈ ನಿರ್ಬಂಧವು ಎಲ್ಲ ಸಂದೇಶ ಅಪ್ಲಿಕೇಶನ್ಗಳಿಗೂ ಅನ್ವಯಿಸಲಿದೆ ಎಂದು ನೋಟಿಸ್ನಲ್ಲಿ ಹೇಳಲಾಗಿದೆ.
ಕರ್ನಾಟಕ ಹೈಕೋರ್ಟ್ 2022ರ ಜನವರಿ 1ರಿಂದ ‘ಕರ್ನಾಟಕ ನ್ಯಾಯಾಲಯ ಕಲಾಪಗಳ ನೇರಪ್ರಸಾರ (ಲೈವ್ಸ್ಟ್ರೀಮ್) ಮತ್ತು ರೆಕಾರ್ಡಿಂಗ್ ನಿಯಮಗಳು 2021’ ಅನ್ನು ಜಾರಿಗೊಳಿಸಿದೆ. ಇದರಲ್ಲಿ ಲೈವ್ ಸ್ಟ್ರೀಮಿಂಗ್ ರೆಕಾರ್ಡಿಂಗ್ ನಿಯಮಗಳನ್ನು ಅಡಕಗೊಳಿಸಲಾಗಿದೆ.
Related Articles
Thank you for your comment. It is awaiting moderation.
Comments (0)