ತಂಗಿಯ ಮೇಲೆ ನಾಯಿ ಛೂ ಬಿಟ್ಟು ಜೀವ ಬೆದರಿಕೆಯೊಡ್ಡಿದ ಆರೋಪ; ಅಣ್ಣ-ಅತ್ತಿಗೆ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆ
- by Jagan Ramesh
- September 20, 2024
- 35 Views
ಬೆಂಗಳೂರು: ಆಸ್ತಿ ವಿಚಾರವಾಗಿ ನಡೆದ ವಾಗ್ವಾದದ ವೇಳೆ ಸಹೋದರಿಯ ಮೇಲೆ ನಾಯಿ ಛೂ ಬಿಟ್ಟು ಅಕ್ರಮವಾಗಿ ಪ್ರತಿಬಂಧಿಸಿದ ಹಾಗೂ ಜೀವ ಬೆದರಿಕೆಯೊಡ್ಡಿದ ಆರೋಪದಲ್ಲಿ ಸಹೋದರ ಮತ್ತವರ ಪತ್ನಿ ವಿರುದ್ಧ ದಾಖಲಾಗಿರುವ ದೂರಿಗೆ ಸಂಬಂಧಿಸಿದ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಪ್ರಕರಣ ಸಂಬಂಧ ಬೆಂಗಳೂರು ಎಸಿಎಂಎಂ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ರದ್ದುಪಡಿಸುವಂತೆ ಕೋರಿ ಹಲಸೂರು ನಿವಾಸಿಗಳಾದ ಪುರುಷೋತ್ತಮ್ ಮತ್ತವರ ಪತ್ನಿ ಭಾಗ್ಯ ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ಹಲಸೂರು ಠಾಣೆ ಪೊಲೀಸರು ಮತ್ತು ಪ್ರಕರಣದ ದೂರುದಾರೆ ಪುರುಷೋತ್ತಮ್ ಸಹೋದರಿ ಭುವನೇಶ್ವರಿ ಅವರಿಗೆ ನೋಟಿಸ್ ಜಾರಿಗೊಳಿಸಿತು. ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಪ್ರತಿವಾದಿಗಳಿದೆ ಸೂಚಿಸಿ, ವಿಚಾರಣೆಯನ್ನು ಅಕ್ಟೋಬರ್ 23ಕ್ಕೆ ಮುಂದೂಡಿದ ಪೀಠ, ಮುಂದಿನ ವಿಚಾರಣೆವರೆಗೆ ಅರ್ಜಿದಾರರ ವಿರುದ್ಧ ಎಸಿಎಂಎಂ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿತು.
ರಾಜೀ ಸಂಧಾನಕ್ಕೆ ನ್ಯಾಯಮೂರ್ತಿಗಳ ಸಲಹೆ:
ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರು, ದೂರುದಾರರು ತಮ್ಮ ದೂರಿನಲ್ಲಿಯೇ ಅರ್ಜಿದಾರರ ಮನೆಯಲ್ಲಿ ನಾಯಿಯನ್ನು ಕಟ್ಟಿಹಾಕಲಾಗಿತ್ತು ಎಂದು ಹೇಳಿದ್ದಾರೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಆಗ ನ್ಯಾಯಮೂರ್ತಿಗಳು, ಹಾಗಾದರೆ ಕಟ್ಟಿದ ನಾಯಿಯನ್ನು ಬಿಟ್ಟವರು ಯಾರು ಎಂದು ಪ್ರಶ್ನಿಸಿದರು.
ಅದಕ್ಕುತ್ತರಿಸಿದ ಅರ್ಜಿದಾರರ ಪರ ವಕೀಲರು, ನಾಯಿಯನ್ನು ಯಾರೂ ಬಿಟ್ಟಿಲ್ಲ. ದೂರಿನ ಆಧಾರದ ಮೇಲೆ ಅರ್ಜಿದಾರರ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 504 ಹಾಗೂ 506ರ ಅಡಿಯಲ್ಲಿ ಜೀವ ಬೆದರಿಕೆ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ನಂತರ ಅಕ್ರಮ ಪ್ರತಿಬಂಧಕ ಪ್ರಕರಣವನ್ನು ದಾಖಲಿಸಲಾಗಿದೆ. ವಾಸ್ತವದಲ್ಲಿ ಎರಡನೇ ಅರ್ಜಿದಾರರು ದೂರುದಾರರ ಮೇಲೆ ಪ್ರಕರಣ ದಾಖಲಿಸಿದ್ದರು. ಈ ಕಾರಣಕ್ಕೆ ದೂರುದಾರರು ಅರ್ಜಿದಾರರ ಮೇಲೆ ಪ್ರತಿದೂರು ದಾಖಲಿಸಿದ್ದಾರೆ ಎಂದು ವಿವರಿಸಿದರು.
ನ್ಯಾಯಮೂರ್ತಿಗಳು ಪ್ರತಿಕ್ರಿಯಿಸಿ, ಪ್ರಕರಣದಲ್ಲಿ ಮೊದಲನೇ ಅರ್ಜಿದಾರರು ಮತ್ತು ದೂರುದಾರರು ಅಣ್ಣ-ತಂಗಿಯಾಗಿದ್ದಾರೆ. ಈ ಪ್ರಕರಣವನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರ ಪರ ವಕೀಲರು, ಪ್ರಕರಣವು ರಾಜೀ ಸಂಧಾನ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಶಿಫಾರಸು ಆಗಿತ್ತು. ಆದರೆ, ಅದಾಲತ್‌ಗೆ ದೂರುದಾರರು ಹಾಜರಾಗಲೇ ಇಲ್ಲ ಎಂದು ತಿಳಿಸಿದರು.
ಪ್ರಕರಣವೇನು?
ಆಸ್ತಿ ವಿಚಾರವಾಗಿ ಚರ್ಚೆ ಮಾಡಲು ಮನಗೆ ಹೋದಾಗ ತಮ್ಮ ಮೇಲೆ ನಾಯಿಯನ್ನು ಛೂ ಬಿಟ್ಟು ಹೆದರಿಸಿದ್ದಾರೆ ಎಂದು ಆರೋಪಿಸಿ ಅರ್ಜಿದಾರರ ಮೇಲೆ ಭುವನೇಶ್ವರಿ ಅವರು 2020ರಲ್ಲಿ ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಕುರಿತು ತನಿಖೆ ನಡೆಸಿದ್ದ ಪೊಲೀಸರು, ಜೀವ ಬೆದರಿಕೆ, ಅಕ್ರಮ ಪ್ರತಿಬಂಧಕ, ಮಾರಕಾಸ್ತ್ರಗಳಿಂದ ಗಾಯಗೊಳಿಸಿದ ಆರೋಪ ಸಂಬಂಧ ಎಸಿಎಂಎಂ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಅರ್ಜಿದಾರರಿಗೆ ವಿಚಾರಣಾ ನ್ಯಾಯಾಲಯವು ಜಾಮೀನು ರಹಿತ ವಾರಂಟ್ ಜಾರಿ ಮಾಡಿತ್ತು. ಇದರಿಂದ, ಅರ್ಜಿದಾರರು ವಿಚಾರಣಾ ನ್ಯಾಯಾಲಯದ ಮುಂದಿರುವ ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
Related Articles
Thank you for your comment. It is awaiting moderation.
Comments (0)