ದಿನೇಶ್ ಗುಂಡೂರಾವ್ ಕುಟುಂಬದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ; ಬಸನಗೌಡ ಪಾಟೀಲ ಯತ್ನಾಳ್ ನಡೆಗೆ ಹೈಕೋರ್ಟ್ ಆಕ್ಷೇಪ

ಬೆಂಗಳೂರು: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮನೆಯಲ್ಲಿ ಅರ್ಧ ಪಾಕಿಸ್ತಾನವಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ನೀಡಿದ್ದ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಹೈಕೋರ್ಟ್‌, ನಿರ್ದಿಷ್ಟ ಸಮುದಾಯವನ್ನು ಹಾಗೆ ವ್ಯಾಖ್ಯಾನಿಸಲಾಗದು. ಈ ರೀತಿ ಮಾಡುವುದಿಂದ ನಿಮಗೇನು ಸಿಗುತ್ತದೆ? ಎಂದು ಕಿಡಿಕಾರಿದೆ.

ಸಚಿವ ದಿನೇಶ್‌ ಗುಂಡೂರಾವ್‌ ಪತ್ನಿ ತಬಸ್ಸುಮ್‌ ರಾವ್‌ ದಾಖಲಿಸಿರುವ ಮಾನಹಾನಿ ಪ್ರಕರಣ ರದ್ದು ಕೋರಿ ವಿಜಯಪುರ ಶಾಬಸನಗೌಡ ಪಾಟೀಲ್‌ ಯತ್ನಾಳ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ಆರಂಭವಾಗುತ್ತಿದ್ದಂತೆ ನ್ಯಾಯಪೀಠ, ನಿಮಗೆ (ಯತ್ನಾಳ್) ಇದು ಏಕೆ ಬೇಕು? ಇದೆಲ್ಲವನ್ನು ನೀವೇಕೆ ಮಾತನಾಡಬೇಕು? ಯಾವ ಪ್ರತಿಕ್ರಿಯೆ? ನಿಮ್ಮ ತಲೆಗೆ ಬಂದಿದ್ದೆಲ್ಲವನ್ನೂ ಮಾತನಾಡುತ್ತೀರಲ್ಲ. ಅರ್ಧ ಪಾಕಿಸ್ತಾನ ಎಂದರೆ ಏನರ್ಥ? ಅದೆಲ್ಲವನ್ನೂ ನೀವೇಕೆ ಹೇಳಿದ್ದೀರಿ? ನಿರ್ದಿಷ್ಟ ಸಮುದಾಯವನ್ನು ನೀವು ಹಾಗೆ ವ್ಯಾಖ್ಯಾನಿಸಲಾಗದು. ಆ ಸಮುದಾಯ ಈ ದೇಶದಲ್ಲಿದೆ. ಪ್ರತಿ ಬಾರಿಯೂ ಪ್ರತಿ ಪ್ರಕರಣದಲ್ಲೂ ನಾನು ಹೇಳುತ್ತಿದ್ದೇನೆ. ಕೆಸರು ಎರಚುವುದು ನಿಲ್ಲಬೇಕು. ಇದರಿಂದ ಏನು ಸಿಗುತ್ತದೆ? ಎಂದು ಯತ್ನಾಳ್ ಪರ ವಕೀಲರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು.

ಮುಸ್ಲಿಂ ಆದ ಮಾತ್ರಕ್ಕೆ ಪಾಕಿಸ್ತಾನ ಎನ್ನಬಹುದೇ?
ಯಾರದೋ ಪತ್ನಿ ಮುಸ್ಲಿಂ ಎಂದ ಮಾತ್ರಕ್ಕೆ ಅದನ್ನು ಅರ್ಧ ಪಾಕಿಸ್ತಾನ ಎನ್ನಬಹುದೇ? ಏನದು? ಇದು ಮಾತನಾಡುವ ರೀತಿಯಲ್ಲ. ನೀವು ವೈಯಕ್ತಿಕ ಹೇಳಿಕೆ ಏಕೆ ನೀಡುತ್ತೀರಿ? ನಾನು ಇದಕ್ಕೆ ತಡೆ ನೀಡುವುದಿಲ್ಲ. ನೀವು ಎಲ್ಲರನ್ನೂ ಹಾಗೆ ವ್ಯಾಖ್ಯಾನಿಸುವುದು ಸರಿಯಲ್ಲ. ಸ್ವಲ್ಪ ತಡೆ ಹಿಡಿದು ಮಾತನಾಡಿ ಅಂಥ ಹೇಳಿದ್ದೇವೆ. ನಾವು ಇಲ್ಲಿ ಸಲಹೆ ನೀಡಲು ಕುಳಿತಿಲ್ಲ ಎಂದು‌ ನ್ಯಾಯಪೀಠ ತೀಕ್ಷ್ಣವಾಗಿ ನುಡಿಯಿತು.

ಇದಕ್ಕೆ ತಬಸ್ಸುಮ್‌ ರಾವ್‌ ಪ್ರತಿನಿಧಿಸಿದ್ದ ವಕೀಲರಾದ ಎಸ್‌.ಎ. ಅಹ್ಮದ್‌ ಮತ್ತು ಸೂರ್ಯ ಮುಕುಂದರಾಜ್, ನಮ್ಮ ಕಕ್ಷಿದಾರರು ರಾಜಕೀಯದಲ್ಲಿಲ್ಲ. ಆದರೂ, ಈ ರೀತಿಯ ಹೇಳಿಕೆ ನೀಡಲಾಗಿದೆ ಎಂದರು.

ಯತ್ನಾಳ್‌ ಪರ ವಕೀಲ ವೆಂಕಟೇಶ್‌ ದಳವಾಯಿ ಅವರು, ದಿನೇಶ್‌ ಗುಂಡೂರಾವ್ ಅವರ ಹೇಳಿಕೆಗೆ ಅರ್ಜಿದಾರರು ಪ್ರತಿಕ್ರಿಯಿಸಿದ್ದಾರೆ. ಮರುದಿನವೇ ಸ್ಪಷ್ಟನೆಯನ್ನೂ ನೀಡಲಾಗಿದೆ. ಉದ್ದೇಶ ಪೂರ್ವಕವಾಗಿ ಆ ಹೇಳಿಕೆ ನೀಡಿಲ್ಲ. ನಾಳೆಗೆ ವಿಚಾರಣಾಧೀನ ನ್ಯಾಯಾಲಯದ ಮುಂದೆ ಹಾಜರಾಗಬೇಕಿದೆ. ಅದಕ್ಕೆ ತಡೆ ನೀಡಬೇಕು ಎಂದು ಕೋರಿದರು.

ಅದಕ್ಕೆ ಪ್ರತಿಕ್ರಿಯಿಸಿದ ಪೀಠ, ಪ್ರಕರಣಕ್ಕೆ ತಡೆ ನೀಡುವುದಿಲ್ಲ. ಬಿಎನ್‌ಎಸ್‌ಎಸ್‌ ಸೆಕ್ಷನ್‌ 200ರ ಅಡಿ ಸಂಜ್ಞೇ (ಕಾಗ್ನಿಜೆನ್ಸ್) ಪರಿಗಣಿಸುವುದಕ್ಕೂ ಮುನ್ನ ಆರೋಪಿಯ ವಾದವನ್ನು ಆಲಿಸಬೇಕು. ಇಲ್ಲಿ ಪ್ರಕ್ರಿಯೆ ಲೋಪ ಕಾಣುತ್ತಿದೆ. ಆದ್ದರಿಂದ, ಸೆಪ್ಟೆಂಬರ್‌ 23ರಂದು ಹೊಸದಾಗಿ ನಿಯಮದ ಪ್ರಕಾರ ಸಂಜ್ಞೇ ಪರಿಗಣಿಸಲು ಅಧೀನ ನ್ಯಾಯಾಲಯಕ್ಕೆ ಪ್ರಕರಣವನ್ನು ಮರಳಿಸಲಾಗುವುದು ಎಂದು, ವಿಚಾರಣೆ ಮುಂದೂಡಿತು. ಇದೇ ವೇಳೆ, ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತ ವಕೀಲ ಎಸ್‌.ಎ. ಅಹ್ಮದ್‌ ಅವರಿಗೆ ನ್ಯಾಯಾಲಯ ಸೂಚಿಸಿತು.

ಪ್ರಕರಣವೇನು?
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಮನೇಲಿ ಅರ್ಧ ಪಾಕಿಸ್ತಾನವಿದೆ. ದೇಶವಿರೋಧಿ ಹೇಳಿಕೆ ನೀಡುವುದು ಚಟವಾಗಿದೆ ಎಂದು ಆರೋಪಿಸಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಆದೇಶಿಸಿತ್ತು.

ನನ್ನನ್ನು ದೇಶವಿರೋಧಿ ಎಂದಿರುವ ಯತ್ನಾಳ್‌ ಅವರ ಹೇಳಿಕೆಯಿಂದ ನನಗೆ ನೋವಾಗಿದೆ ಎಂದು ಆರೋಪಿಸಿ ತಬಸ್ಸುಮ್‌ ಅವರು ಯತ್ನಾಳ್‌ ವಿರುದ್ಧ ಐಪಿಸಿ ಸೆಕ್ಷನ್‌ 499 ಮತ್ತು 500ರ ಅಡಿಯಲ್ಲಿ 2024ರ ಏಪ್ರಿಲ್‌ 15ರಂದು ಖಾಸಗಿ ದೂರು ದಾಖಲಿಸಿದ್ದರು. ಈ ದೂರನ್ನು ಪರಿಗಣಿಸಿರುವ ನ್ಯಾಯಾಲಯವು ಆರೋಪಿ ವಿರುದ್ಧ ಮಾನನಷ್ಟ ಪ್ರಕರಣ ದಾಖಲಿಸಲು ಸಂಬಂಧಿಸಿದ ಪೊಲೀಸರಿಗೆ ನಿರ್ದೇಶಿಸಿದೆ. ಇದರಿಂದ, ಪ್ರಕರಣ ರದ್ದುಕೋರಿ ಯತ್ನಾಳ್‌ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

Related Articles

Comments (0)

Leave a Comment