ಅತ್ಯಾಚಾರ, ಅಶ್ಲೀಲ ವಿಡಿಯೋ ಹಂಚಿಕೆ ಆರೋಪ; ಪ್ರಜ್ವಲ್ ಜಾಮೀನು ಅರ್ಜಿ ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಸಲ್ಲಿಸಿರುವ ಜಾಮೀನು ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್, ತೀರ್ಪು ಕಾಯ್ದಿರಿಸಿದೆ.

ಮನೆ ಕೆಲಸದ ಮಹಿಳೆಯ ಮೇಲೆ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಜಾಮೀನು ಹಾಗೂ ಹಾಸನ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆಯ ಮೇಲೆ ಅತ್ಯಾಚಾರ ಆರೋಪ ಮತ್ತು ಅಶ್ಲೀಲ ವಿಡಿಯೊಗಳ ಹಂಚಿಕೆಯ ಸಂಬಂಧ ದಾಖಲಾಗಿರುವ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಕೋರಿ ಪ್ರಜ್ವಲ್‌ ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಅರ್ಜಿದಾರರು ಹಾಗೂ ಪ್ರಾಸಿಕ್ಯೂಷನ್ ಪರ ವಕೀಲರ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿತು.

ಹೇಳಿಕೆಗಳಲ್ಲಿ ವ್ಯತ್ಯಾಸವಿದೆ:
ಪ್ರಜ್ವಲ್‌ ಪರವಾಗಿ ಹಿರಿಯ ವಕೀಲ ಪ್ರಭುಲಿಂಗ ಕೆ. ನಾವದಗಿ ವಾದ ಮಂಡಿಸಿ, ಆರೋಪಿ ಮತ್ತು ಸಂತ್ರಸ್ತೆಯು ವಿಡಿಯೊದಲ್ಲಿ ಇರುವ ಕುರಿತು ವಿಧಿವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ಸ್ಪಷ್ಟತೆ ನೀಡಿಲ್ಲ. ಸಂತ್ರಸ್ತೆ ನೀಡಿರುವ ದೂರಿನ ವಿಶ್ವಾಸಾರ್ಹತೆಯ ಬಗ್ಗೆ ಆಕ್ಷೇಪಗಳಿವೆ. ಲೋಕಸಭೆ ಚುನಾವಣೆಯ ಮತದಾನಕ್ಕೂ ಕೆಲವು ದಿನಗಳಿಗೆ ಮೊದಲು ವಿದ್ಯುನ್ಮಾನ ಮಾಧ್ಯಮವೊಂದಕ್ಕೆ ಸಂತ್ರಸ್ತೆ ಸಂದರ್ಶನ ನೀಡಿದ್ದಾರೆ. ಅಲ್ಲಿ ಅತ್ಯಾಚಾರದ ಆರೋಪ ಮಾಡಿಲ್ಲ. ಸಿಆರ್‌ಪಿಸಿ ಸೆಕ್ಷನ್‌ 164ರ ಹೇಳಿಕೆಯಲ್ಲಿಯೂ ಅತ್ಯಾಚಾರ ಆರೋಪ ಮಾಡಿಲ್ಲ. ಐದು ವರ್ಷ ತಡವಾಗಿ ದೂರು ನೀಡಿರುವುದಕ್ಕೆ ಆಕೆ ವಿವರಣೆ ನೀಡಿಲ್ಲ ಎಂದರಲ್ಲದೆ, ಸಂತ್ರಸ್ತೆಯ ಪುತ್ರಿಯ ಹೇಳಿಕೆಯನ್ನು ಸಾಕ್ಷ್ಯವಾಗಿ ಪರಿಗಣಿಸಲಾಗಿದೆ. ಆದರೆ, ಆಕೆಯ ಹೇಳಿಕೆಯಲ್ಲಿ ವ್ಯತ್ಯಾಸಗಳಿವೆ. ಒಂದೊಮ್ಮೆ ಕೃತ್ಯ ನಡೆದಿರುವುದೇ ನಿಜವೆಂದು ಊಹಿಸಿಕೊಂಡರೂ, ಅದು ಒತ್ತಾಯಪೂರ್ವಕ ಕ್ರಿಯೆಯಲ್ಲ, ಒಪ್ಪಿಗೆಯಿಂದ ನಡೆದಿರುವ ಕೃತ್ಯದಂತಿದೆ ಎಂದರು.

ಹಾಸನ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆಯೂ ಅತ್ಯಾಚಾರ ಆರೋಪ ಮಾಡಿದ್ದಾರೆ. ಆದರೆ, ದೂರು ನೀಡುವುದಕ್ಕೂ ಕೆಲ ದಿನಗಳ ಮುಂಚೆ ಆಕೆಯೂ ಲೋಕಸಭೆ ಚುನಾವಣಾ ಸಮಾವೇಶದಲ್ಲಿ ಅರ್ಜಿದಾರರ ಜತೆ ಭಾಗಿಯಾಗಿದ್ದಾರೆ. ಇನ್ನೊಂದು ಪ್ರಕರಣ ಅಶ್ಲೀಲ ವಿಡಿಯೊಗಳ ಹಂಚಿಕೆ ಪ್ರಕರಣವಾಗಿದೆ. ಇದರಲ್ಲಿ ಅರ್ಜಿದಾರರ ಯಾವುದೇ ಪಾತ್ರವಿಲ್ಲ. ಮೇ 30ರಿಂದ ಪ್ರಜ್ವಲ್ ಅವರು ಕಸ್ಟಡಿಯಲ್ಲಿದ್ದಾರೆ. ನ್ಯಾಯಾಲಯ ವಿಧಿಸುವ ಯಾವುದೇ ಷರತ್ತಿಗೆ ಅರ್ಜಿದಾರರು ಬದ್ಧರಾಗಿರುತ್ತಾರೆ. ಇದನ್ನು ಪರಿಗಣಿಸಿ ಜಾಮೀನು ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.

ಬೆದರಿಕೆಯೊಡ್ಡಿದ್ದರಿಂದಲೇ ದೂರು ವಿಳಂಬ:
ಪ್ರಜ್ವಲ್ ಪರ ವಕೀಲರ ವಾದಕ್ಕೆ ಆಕ್ಷೇಪಿಸಿದ ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ. ರವಿವರ್ಮ ಕುಮಾರ್‌, ಅರ್ಜಿದಾರ ತಂದೆಯಾದ ಶಾಸಕ ಎಚ್‌.ಡಿ. ರೇವಣ್ಣ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬರುತ್ತಿದ್ದಂತೆ ಪ್ರಜ್ವಲ್‌ ವಿರುದ್ಧ ಅತ್ಯಾಚಾರದ ಆರೋಪ ಆರಂಭವಾಗಿದೆ. ಸಂಸದನಾಗಿದ್ದು, ಅತ್ಯಾಚಾರದ ವಿವರ ಬಹಿರಂಗಪಡಿಸಿದರೆ ಪತಿಯನ್ನು ಕೊಲೆ ಮಾಡಿಸುವುದಾಗಿ ಮನೆಕೆಲಸದಾಕೆಗೆ ಅರ್ಜಿದಾರರು ಬೆದರಿಕೆ ಹಾಕಿದ್ದಾರೆ. ಅಶ್ಲೀಲ ವಿಡಿಯೊಗಳನ್ನು ಬಿಡುಗಡೆ ಮಾಡುವುದಾಗಿಯೂ ಹೆದರಿಸಿದ್ದಾರೆ. ದೂರು ದಾಖಲಿಸುವುದು ವಿಳಂಬವಾಗಿರುವುದಕ್ಕೆ ಇದೇ ಪ್ರಮುಖ ಕಾರಣವಾಗಿದೆ ಎಂದರು.

ದೂರು ದಾಖಲಾಗುತ್ತಿದ್ದಂತೆಯೇ ಪ್ರಜ್ವಲ್‌ ದೇಶ ತೊರೆದಿದ್ದರು. ಇದುವರೆಗೂ ಆತ ತನ್ನ ಫೋನ್‌ ಅನ್ನು ತನಿಖಾಧಿಕಾರಿಗಳಿಗೆ ಒಪ್ಪಿಸಿಲ್ಲ. ಸಂತ್ರಸ್ತೆಯ ಪುತ್ರಿಯ ಹೇಳಿಕೆ ಹಾಗೂ ಎಫ್‌ಎಸ್‌ಎಲ್‌ ವರದಿ ಕೃತ್ಯವನ್ನು ಖಾತ್ರಿ ಪಡಿಸಿದೆ. ಪ್ರಜ್ವಲ್‌ ಅವರ ಶೌಚಗೃಹದಲ್ಲಿ ತೆಗೆದಿರುವ ಚಿತ್ರಗಳು, ಸ್ಥಳದ ಪಂಚನಾಮೆ, ಎಫ್‌ಎಸ್‌ಎಲ್‌ ವರದಿ ಎಲ್ಲವೂ ಹೊಂದಾಣಿಕೆಯಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ವಿಡಿಯೊ ಹಂಚಿಕೆಯಲ್ಲಿ ಪ್ರಜ್ವಲ್ ಪಾತ್ರವಿಲ್ಲ:
ಅಶ್ಲೀಲ ವಿಡಿಯೊ ಹಂಚಿಕೆ ಪ್ರಕರಣದಲ್ಲಿ ಪ್ರಜ್ವಲ್‌ ಅವರನ್ನು ಆರೋಪಿಯನ್ನಾಗಿಸಲಾಗಿದೆ. ಇದರಲ್ಲಿ ಪ್ರಜ್ವಲ್‌ ಪಾತ್ರವಿಲ್ಲ. ಬಿಜೆಪಿ ಮಾಜಿ ಶಾಸಕ ಪ್ರೀತಮ್‌ ಗೌಡ ಮತ್ತಿತರರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಹೇಳಿದರು.

ಆಗ ನ್ಯಾಯಪೀಠ, ಅಶ್ಲೀಲ ವಿಡಿಯೊಗಳನ್ನು ಹಂಚಿಕೆ ಮಾಡುವ ಮೂಲಕ ಪ್ರತಿಯೊಬ್ಬ ಮಹಿಳೆಗೆ ಕಳಂಕ ಉಂಟು ಮಾಡಿರುವುದು ಅತ್ಯಂತ ಹೀನಾಯ ಕೃತ್ಯ ಎಂದಿತು. ಅಶ್ಲೀಲ ವಿಡಿಯೊ ಹಂಚಿಕೆಗೆ ಸಂಬಂಧಿಸಿದ ಪ್ರಕರಣವನ್ನು ಏಕೆ ವಿಚಾರಣೆಗೆ ಪಟ್ಟಿ ಮಾಡಿಲ್ಲ ಎಂದ ಪೀಠವು ಅದನ್ನು ಮುಂದಿನ ವಿಚಾರಣೆಗೆ ಪಟ್ಟಿ ಮಾಡುವಂತೆ ಸೂಚಿಸಿತು.

ಪ್ರಕರಣವೇನು?
ಹಾಸನ ಜಿಲ್ಲೆಯ ಹೊಳೆನರಸೀಪುರ ಠಾಣೆಯಲ್ಲಿ ಶಾಸಕ ಎಚ್‌.ಡಿ. ರೇವಣ್ಣ ಮನೆಯಲ್ಲಿ ಮನೆ ಕೆಲಸ ಮಾಡುತ್ತಿದ್ದ ಮಹಿಳೆ ನೀಡಿದ ದೂರಿನ ಅನ್ವಯ ಪ್ರಜ್ವಲ್‌ ಪ್ರಕರಣ ದಾಖಲಾಗಿತ್ತು. ಆನಂತರ, ಅತ್ಯಾಚಾರ ಆರೋಪ ಹೊರಿಸಲಾಗಿದೆ. ಈ ಪ್ರಕರಣದಲ್ಲಿ ಜಾಮೀನು ಕೋರಿದ್ದಾರೆ.

ಇದಲ್ಲದೆ, ಹಾಸನ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆಯೊಬ್ಬರು ನೀಡಿದ ದೂರಿನ ಅನ್ವಯ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಅಶ್ಲೀಲ ವಿಡಿಯೊಗಳ ಹಂಚಿಕೆ ಆರೋಪದ ಮೇಲೆಯೂ ಪ್ರಜ್ವಲ್‌ ವಿರುದ್ಧ ಪ್ರತ್ಯೇಕವಾಗಿ ಬೆಂಗಳೂರಿನ ಸಿಐಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಎರಡೂ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಪ್ರಜ್ವಲ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

Related Articles

Comments (0)

Leave a Comment