ಎನ್‌ಡಿಪಿಎಸ್ ಕಾಯ್ದೆ; ಎಇಇ ವಿರುದ್ಧದ ತನಿಖೆಗೆ ತಡೆಯಾಜ್ಞೆ ನೀಡಲು ಹೈಕೋರ್ಟ್ ನಕಾರ

ಬೆಂಗಳೂರು: ಕಿರುಕುಳ ನೀಡುತ್ತಿರುವ ಪೊಲೀಸರಿಂದ ಕಾಪಾಡುವಂತೆ ನ್ಯಾಯಮೂರ್ತಿಗಳ ಮುಂದೆ ಕಣ್ಣೀರಿಟ್ಟಿದ್ದ ಕೆಪಿಟಿಸಿಎಲ್‌ನ ಸೊರಬ ಸಹಾಯಕ ಕಾರ್ಯಕಾರಿ ಇಂಜಿನಿಯರ್ ಎಂ.ಜಿ. ಶಾಂತಕುಮಾರಸ್ವಾಮಿ ವಿರುದ್ಧ ಮಾದಕ ದ್ರವ್ಯ ಮತ್ತು ಅಮಲು ಪದಾರ್ಥಗಳು (ಎನ್‌ಡಿಪಿಎಸ್) ಕಾಯ್ದೆ ಆರೋಪಗಳಡಿ ದಾಖಲಾಗಿರುವ ಪ್ರಕರಣದ ತನಿಖೆಗೆ ತಡೆಯಾಜ್ಞೆ ನೀಡಲು ಹೈಕೋರ್ಟ್‌ ನಿರಾಕರಿಸಿದೆ.

ಎನ್‌ಡಿಪಿ‌ಎಸ್ ಕಾಯ್ದೆಯಡಿ ದಾಖಲಾಗಿರುವ ಪ್ರಕರಣ ರದ್ದುಕೋರಿ ಶಾಂತಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ಸರ್ಕಾರದ ಪರ ವಕೀಲರು ಹಾಜರಾಗಿ, ಹೈಕೋರ್ಟ್‌ ಹಿಂದಿನ ಸೂಚನೆಯಂತೆ ಅರ್ಜಿದಾರರಿಗೆ ಸಾಗರ ಪೊಲೀಸರು ಕಿರುಕುಳ ನೀಡಿರುವ ಬಗ್ಗೆ ಮಾಹಿತಿಯನ್ನು ಕೇಳಲಾಗಿದೆ. ಆ ಕುರಿತ ವರದಿ ಬರಬೇಕಿದೆ. ಅದನ್ನು ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಕೋರಿದರು.

ಶಾಂತಕುಮಾರಸ್ವಾಮಿ ಪರ ವಕೀಲರು, ಅರ್ಜಿದಾರರ ವಿರುದ್ಧದ ಎಫ್‌ಐಆರ್‌ಗಳಿಗೆ ಸಂಬಂಧಿಸಿದ ತನಿಖೆಗೆ ತಡೆಯಾಜ್ಞೆ ನೀಡಬೇಕು ಎಂದು ಕೋರಿದರು.

ಅದಕ್ಕೆ ನಿರಾಕರಿಸಿದ ನ್ಯಾಯಪೀಠ, ತನಿಖೆಗೆ ತಡೆಯಾಜ್ಞೆ ನೀಡಲಾಗದು. ತನಿಖೆ ಮುಂದುವರಿಯಲಿ. ತನಿಖೆ ವೇಳೆ ಅರ್ಜಿದಾರರ ವಿರುದ್ಧ ಪೊಲೀಸರು ಯಾವುದೇ ಬಲವಂತದ ಕ್ರಮ ಜುರುಗಿಸಬಾರದು. ಅರ್ಜಿದಾರರು ಸಹ ಪೊಲೀಸರ ತನಿಖೆಗೆ ಸಹಕರಿಸಬೇಕು. ಒಂದೊಮ್ಮೆ ಪೊಲೀಸರಿಂದ ಯಾವುದಾದರೂ ಸಮಸ್ಯೆ ಉಂಟಾದರೆ, ಆಗ ಅರ್ಜಿದಾರರು ನ್ಯಾಯಾಲಯಕ್ಕೆ ಬರಬಹುದು. ಆದರೆ, ನಾಟಕ ಮಾಡಿಕೊಂಡು ಕೋರ್ಟ್‌ಗೆ ಬರಬಾರದು ಎಂದು ತಿಳಿಸಿ ಅರ್ಜಿ ವಿಚಾರಣೆ ಮುಂದೂಡಿತು.

ಸಾಗರ ಡಿವೈಎಸ್‌ಪಿ ನನಗೆ ಕಿರುಕುಳ ನೀಡುತ್ತಿದ್ದಾರೆ. ರಿವಾಲ್ವರ್‌ ತೋರಿಸಿ ಬೆದರಿಸುತ್ತಿದ್ದಾರೆ. ರೌಡಿಶೀಟರ್‌ ತೆರೆಯುವುದಾಗಿ ಹೇಳುತ್ತಿದ್ದಾರೆ. ನನ್ನನ್ನು ಕಾಪಾಡಿ. ನಾನು ನ್ಯಾಯಾಲಯ ಬಿಟ್ಟು ಹೊರಗೆ ಹೋಗುವುದಿಲ್ಲ ಎಂದು ಈ ಹಿಂದೆ ಶಾಂತಕುಮಾರಸ್ವಾಮಿ, ನ್ಯಾಯಮೂರ್ತಿಗಳ ಎದುರು ಹಾಜರಾಗಿ ಕಣ್ಣೀರು ಹಾಕಿದ್ದರು.

Related Articles

Comments (0)

Leave a Comment