ಮದರಸಾಗೆ ಅತಿಕ್ರಮ ಪ್ರವೇಶ; ಪ್ರಿಯಾಂಕ್ ಕಾನುಂಗೋ ವಿರುದ್ಧದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್
- by Jagan Ramesh
- September 18, 2024
- 119 Views
ಬೆಂಗಳೂರು: ನಗರದ ಕಾವಲಬೈರಸಂದ್ರದಲ್ಲಿರುವ ದಾರುಲ್ ಉಲೂಮ್ ಸಯಿದಿಯಾ ಮುಸ್ಲಿಂ ಅನಾಥಾಲಯ ಹಾಗೂ ಮದರಸಾವನ್ನು 2023ರ ನವೆಂಬರ್ 19ರಂದು ಅಕ್ರಮವಾಗಿ ಪ್ರವೇಶಿಸಿದ ಮತ್ತು ಅಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಯುತ್ತಿವೆ ಎಂದು ಹೇಳಿಕೆ ನೀಡಿದ ಆರೋಪದಲ್ಲಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (ಎನ್‌ಸಿಪಿಸಿಆರ್) ಅಧ್ಯಕ್ಷ ಪ್ರಿಯಾಂಕ್ ಕಾನುಂಗೋ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.
ಪ್ರಕರಣ ಸಂಬಂಧ ಅನಾಥಾಲಯ ಮತ್ತು ಮದರಸಾದ ಕಾರ್ಯದರ್ಶಿ ಅಶ್ರಫ್ ಖಾನ್ ದೇವರಜೀವನಹಳ್ಳಿ ಪೊಲೀಸ್ ಠಾಣೆಯಲ್ಲಿ 2023ರ ನವೆಂಬರ್ 21ರಂದು ದಾಖಲಿಸಿರುವ ದೂರು ರದ್ದುಪಡಿಸುವಂತೆ ಕೋರಿ ಪ್ರಿಯಾಂಕ್ ಕಾನುಂಗೋ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿದಾರರ ವಿರುದ್ಧದ ಪ್ರಕರಣವನ್ನು ರದ್ದುಪಡಿಸಿತು. ಅಲ್ಲದೇ ವಿವರವಾದ ಆದೇಶವನ್ನು ನಂತರ ಹೊರಡಿಸುವುದಾಗಿ ನ್ಯಾಯಪೀಠ ಹೇಳಿತು.
ಇದಕ್ಕೂ ಮುನ್ನ ದೂರುದಾರರ ಪರ ವಕೀಲರು ವಾದ ಮಂಡಿಸಿ, ಅರ್ಜಿದಾರರು ಹಾಗೂ ಇತರ ಕೆಲವರು ತಮ್ಮನ್ನು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದವರು ಎಂದು ಹೇಳಿಕೊಂಡು ಅನುಮತಿ ಇಲ್ಲದೆ, ಮದರಸಾದೊಳಗೆ ಪ್ರವೇಶ ಮಾಡಿದ್ದಾರೆ. ಅನುಮತಿ ಇಲ್ಲದಿದ್ದರೂ ಆಡಳಿತ ಮಂಡಳಿ ಅವರಿಗೆ ಅಡ್ಡಿಪಡಿಸಿಲ್ಲ. ಎಲ್ಲ ಕಡೆ ತಪಾಸಣೆ ನಡೆಸಿದ ಅರ್ಜಿದಾರರು ವಿಡಿಯೊ ಮಾಡಿಕೊಂಡು, ಫೋಟೋಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಮಧ್ಯಾಹ್ನದ ಊಟದ ನಂತರ ಮಕ್ಕಳು ನೆಲದ ಮೇಲೆ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದರು. ಅದನ್ನೇ ದೊಡ್ಡ ವಿಷಯವನ್ನಾಗಿ ಮಾಡಿದ ಅರ್ಜಿದಾರರು ಮದರಸಾದಲ್ಲಿ ತಾಲಿಬಾನ್ ರೀತಿ ಭಯೋತ್ಪಾದಕ ಚಟುವಟಿಕೆ ನಡೆಯುತ್ತಿವೆ ಎಂದು ಆರೋಪಿಸಿದ್ದಾರೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ದೂರು ಪರಿಶೀಲಿಸಿದ ನ್ಯಾಯಪೀಠ, ದೂರಿನಲ್ಲಿ ತಾಲಿಬಾನ್ ರೀತಿ ಭಯೋತ್ಪಾದಕ ಚಟುವಟಿಕೆ ನಡೆಯುತ್ತಿವೆ ಎಂದು ಎಲ್ಲಿದೆ? ಒಂದೇ ಒಂದು ಪದ ಆ ರೀತಿ ಇಲ್ಲ ಎಂದು ದೂರುದಾರರ ಪರ ವಕೀಲರನ್ನು ಪ್ರಶ್ನಿಸಿತು. ದೂರಿನ ಅನುವಾದದ ಪ್ರತಿಯಲ್ಲಿ ಆ ಅಂಶ ಇದೆ ಎಂದು ವಕೀಲರು ಉತ್ತರಿಸಿದರು. ಮೂಲ ದೂರಿನಲ್ಲಿ ಏನಿದೆ ಅದು ಮುಖ್ಯ. ನಿಮ್ಮ ಮನಸ್ಸಿಗೆ ಬಂದಂತೆ ಅನುವಾದ ಮಾಡಿ ಅದನ್ನು ಸೇರಿಸಿದರೆ ಆಗುವುದಿಲ್ಲ ಎಂದು ನ್ಯಾಯಪೀಠ ತೀಕ್ಷ್ಣವಾಗಿ ನುಡಿಯಿತು.
ದೂರುದಾರರ ಪರ ವಕೀಲರು ಪ್ರತಿಕ್ರಿಯಿಸಿ, ಅರ್ಜಿದಾರರು ಆ ರೀತಿ ಟ್ವೀಟ್ ಮಾಡಿದ್ದಾರೆ ಎಂದು ತಿಳಿಸಿದರು. ಟ್ವೀಟ್ ಗಮನಿಸಿದ ನ್ಯಾಯಪೀಠ, ‘ತಾಲಿಬಾನ್ ಜೈಸೆ ಜೀವನ್ ಜೀ ರಹೆ ಹೈ’ ಎಂದು ಟ್ವೀಟ್‌ನಲ್ಲಿ ಹೇಳಲಾಗಿದೆ. ಇಲ್ಲಿಯೂ ತಾಲಿಬಾನ್ ರೀತಿ ಭಯೋತ್ಪಾದಕ ಚಟುವಟಿಕೆ ನಡೆಯುತ್ತಿವೆ ಎಂದು ಹೇಳಿಲ್ಲ. ಆತಂಕವಾದ ಎಂಬ ಪದವೇ ಬಳಸಿಲ್ಲ. ಅಷ್ಟಕ್ಕೂ ‘ತಾಲಿಬಾನ್ ಜೈಸೆ ಜೀ ರಹೆ ಹೈ’ ಎಂದು ಹೇಳುವುದಕ್ಕೂ, ಆತಂಕವಾದಕ್ಕೂ ಏನು ಸಂಬಂಧ? ತಾಲಿಬಾನ್ ಜೈಸೆ ಜಿ ರಹೆ ಹೈ ಅನ್ನುವುದನ್ನು ರೂಪಕದ ಅರ್ಥದಲ್ಲಿ ಹೇಳಿದ್ದಾರೆ. ಮಾನನಷ್ಟ ಮೊಕದ್ದಮೆಯಲ್ಲೂ ರೂಪಕ ಪ್ರಮುಖ ಅಪರಾಧವಾಗುವುದಿಲ್ಲ. ದೂರು ಹಾಗೂ ಟ್ವೀಟ್ ಅನ್ನು ತಪ್ಪಾಗಿ ಅನುವಾದಿಸಲಾಗಿದೆ ಎಂದು ಹೇಳಿದ ನ್ಯಾಯಪೀಠ, ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಿತು.
ಬಹಿರಂಗ ಹೇಳಿಕೆ ಎಷ್ಟು ಸರಿ?
ಈ ಮಧ್ಯೆ ದೂರುದಾರರ ಪರ ವಕೀಲರು, ಅರ್ಜಿದಾರರು ಮದರಸಾವನ್ನು ಅತಿಕ್ರಮವಾಗಿ ಪ್ರವೇಶಿಸಿದ್ದಾರೆ. ಇದನ್ನು ನ್ಯಾಯಾಲಯ ಗಮನಿಸಬೇಕು ಎಂದು ಹೇಳಿದರು. ಸರ್ಕಾರಿ ನೌಕರರಾಗಿರುವ ಅರ್ಜಿದಾರರಿಗೆ ಅಧಿಕಾರವಿದೆ ಎಂದು ನ್ಯಾಯಪೀಠ ಹೇಳಿತಾದರೂ, ಅಧಿಕೃತ ಕರ್ತವ್ಯ ನಿರ್ವಹಿಸುತ್ತ ಸರ್ಕಾರಿ ನೌಕರರು ವರದಿ, ಅಭಿಪ್ರಾಯ, ಶಿಫಾರಸುಗಳನ್ನು ನೀಡಬಹುದು. ಆದರೆ, ಅದರ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡುವುದು, ಟ್ವೀಟ್ ಮಾಡುವುದು ಎಷ್ಟು ಸರಿ ಎನ್ನುವುದನ್ನು ಗಮನಿಸಬೇಕು ಎಂದು ನ್ಯಾಯಪೀಠ ಸರ್ಕಾರದ ಪರ ವಕೀಲರಿಗೆ ಹೇಳಿತು.
Related Articles
Thank you for your comment. It is awaiting moderation.
Comments (0)