- ಟ್ರಯಲ್ ಕೋರ್ಟ್
- Like this post: 3
ಜೀವ ಬೆದರಿಕೆ ಪ್ರಕರಣದಲ್ಲಿ ಶಾಸಕ ಮುನಿರತ್ನಗೆ ನಿರೀಕ್ಷಣಾ ಜಾಮೀನು; ಜಾತಿ ನಿಂದನೆ ಕೇಸ್ ಜಾಮೀನು ಆದೇಶ ಕಾಯ್ದಿರಿಸಿದ ಕೋರ್ಟ್
- by Jagan Ramesh
- September 18, 2024
- 87 Views
ಬೆಂಗಳೂರು: ಘನತ್ಯಾಜ್ಯ ವಿಲೇವಾರಿ ಗುತ್ತಿಗೆಗೆ ಲಂಚದ ಬೇಡಿಕೆ ಇಟ್ಟ ಹಾಗೂ ಜೀವ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬಿಜೆಪಿ ಶಾಸಕ ಮುನಿರತ್ನ ನಾಯ್ಡುಗೆ ಜನಪ್ರತಿನಿಧಿಗಳ ವಿಶೇಷ ಸತ್ರ ನ್ಯಾಯಾಲಯವು ಬುಧವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಇದೇ ವೇಳೆ, ಎಸ್ಸಿ/ಎಸ್ಟಿ ದೌರ್ಜನ್ಯ ನಿಷೇಧ ಪ್ರಕರಣದಲ್ಲಿ ಜಾಮೀನು ಕೋರಿ ಮುನಿರತ್ನ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ನ್ಯಾಯಾಲಯ ಈ ಕುರಿತ ಆದೇಶವನ್ನು ಗುರುವಾರಕ್ಕೆ ಕಾಯ್ದಿರಿಸಿದೆ.
ಗುತ್ತಿಗೆದಾರ ಚೆಲುವರಾಜು ನೀಡಿದ ದೂರಿನ ಅನ್ವಯ ವೈಯಾಲಿಕಾವಲ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ಗೆ ಸಂಬಂಧಿಸಿದ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಶಾಸಕ ಮುನಿರತ್ನ ಹಾಗೂ ಸರ್ಕಾರಿ ಅಧಿಕಾರಿಯಾಗಿರುವ ಅವರ ಅಂಗರಕ್ಷಕ ವಿಜಯಕುಮಾರ್ ಸಲ್ಲಿಸಿದ್ದ ಅರ್ಜಿಗಳನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು ಪುರಸ್ಕರಿಸಿದ್ದಾರೆ.
ಮುನಿರತ್ನ ಮತ್ತು ವಸಂತ್ ಕುಮಾರ್ ಅವರು ತಲಾ 1 ಲಕ್ಷ ರೂ. ಮೌಲ್ಯದ ವೈಯಕ್ತಿಕ ಬಾಂಡ್ ಮತ್ತು ಒಬ್ಬರ ಭದ್ರತೆ ಒದಗಿಸಬೇಕು. ಅರ್ಜಿದಾರರು ಸಾಕ್ಷ್ಯ ನಾಶಕ್ಕೆ ಯತ್ನಿಸಬಾರದು, ತನಿಖಾ ಸಂಸ್ಥೆ ವಿಚಾರಣೆಗೆ ಸೂಚಿಸಿದಾಗ ಹಾಜರಾಗಬೇಕು. ಪ್ರಕರಣದ ಸಂಬಂಧ 3 ತಿಂಗಳವರೆಗೆ ಅಥವಾ ಆರೋಪ ಪಟ್ಟಿ ಸಲ್ಲಿಕೆಯಾಗುವವರೆಗೆ ಅರ್ಜಿದಾರರು ಪ್ರತಿ ತಿಂಗಳ ಎರಡನೇ ಭಾನುವಾರ ಬೆಳಗ್ಗೆ 9 ರಿಂದ 5ರವರೆಗೆ ಠಾಣೆಗೆ ಹಾಜರಾಗಿ ಸಹಿ ಹಾಕಬೇಕು. ಅರ್ಜಿದಾರರು ಇಂಥದ್ದೇ ಅಪರಾಧದಲ್ಲಿ ಭಾಗಿಯಾಗಬಾರದು. ನ್ಯಾಯಾಲಯದ ಅನುಮತಿ ಇಲ್ಲದೆ ವ್ಯಾಪ್ತಿ ಬಿಟ್ಟು ಹೊರ ಹೋಗುವಂತಿಲ್ಲ ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ.
ಜಾತಿ ನಿಂದನೆ ಪ್ರಕರಣದ ಜಾಮೀನು ಆದೇಶ ಕಾಯ್ದಿರಿಸಿದ ಕೋರ್ಟ್:
ಬಿಬಿಎಂಪಿ ಮಾಜಿ ಸದಸ್ಯ ವೇಲುನಾಯ್ಕರ್ ನೀಡಿರುವ ಜಾತಿ ನಿಂದನೆ ದೂರಿನ ಆಧಾರದಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಜಾಮೀನು ಕೋರಿ ಮುನಿರತ್ನ ಸಲ್ಲಿಸಿದ್ದ ಅರ್ಜಿ ಕುರಿತ ಆದೇಶವನ್ನು ವಿಶೇಷ ನ್ಯಾಯಾಲಯವು ಸೆಪ್ಟೆಂಬರ್ 19ಕ್ಕೆ ಕಾಯ್ದಿರಿಸಿದೆ.
ಇದಕ್ಕೂ ಮುನ್ನ ಮುನಿರತ್ನ ಪರವಾಗಿ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ವಾದ ಮಂಡಿಸಿ, ಹಳೆಯ ಘಟನೆಗೆ ಸಂಬಂಧಿಸಿದಂತೆ ನೋಟಿಸ್ ನೀಡದೇ ಅರ್ಜಿದಾರರನ್ನು ಬಂಧಿಸಲಾಗಿದೆ. ಗುಂಪಿನ ನಡುವೆ ಅಥವಾ ಸಾರ್ವಜನಿಕವಾಗಿ ದೂರುದಾರರ ಜಾತಿ ನಿಂದನೆಯಾಗಿಲ್ಲ. ದೂರುದಾರರ ಮುಂದೆಯೂ ಜಾತಿ ನಿಂದನೆ ಮಾಡಲಾಗಿಲ್ಲ. ಗುತ್ತಿಗೆದಾರ ಚೆಲುವರಾಜು ಉಪಸ್ಥಿತಿಯಲ್ಲಿ ಜಾತಿ ನಿಂದನೆಯಾಗಿದೆ ಎನ್ನಲಾಗಿದೆ. ಇಬ್ಬರಿಗಿಂತ ಹೆಚ್ಚಿನ ವ್ಯಕ್ತಿಗಳ ಮುಂದೆ ಜಾತಿ ನಿಂದನೆ ನಡೆದಿಲ್ಲ. ಆದ್ದರಿಂದ, ಪ್ರಕರಣದಲ್ಲಿ ಎಸ್ಸಿ/ಎಸ್ಟಿ ಕಾಯ್ದೆ ಅನ್ವಯವಾಗುವುದಿಲ್ಲ. ವಿರೋಧ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದು, ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ನ್ಯಾಯಾಲಯಕ್ಕೆ ವಿವರಿಸಿದರು.
ಮುನಿರತ್ನ ಜಾಮೀನು ಅರ್ಜಿಗೆ ಆಕ್ಷೇಪಿಸಿದ ವಿಶೇಷ ಸರ್ಕಾರಿ ಅಭಿಯೋಜಕ ಪ್ರದೀಪ್ ಅವರು, ಹಲವು ವರ್ಷಗಳಿಂದ ಈ ರೀತಿಯಲ್ಲಿ ಮುನಿರತ್ನ ಜಾತಿ ನಿಂದನೆ ಮಾಡಿದ್ದಾರೆ. ಆದ್ದರಿಂದ, ಎಫ್ಐಆರ್ನಲ್ಲಿ 2015ರಿಂದ ಜಾತಿ ನಿಂದನೆ ಎಂದು ಉಲ್ಲೇಖಿಸಲಾಗಿದೆ. ಸ್ನೇಹಿತರ ಮುಂದೆಯೂ ಜಾತಿ ನಿಂದನೆ ಮಾಡಿದ್ದಾರೆ. ಮಹಿಳೆಯರ ಬಗ್ಗೆ ಅಶ್ಲೀಲವಾಗಿ ಮಾತನಾಡಿದ್ದಾರೆ. ಧ್ವನಿ ಮಾದರಿ ಸಂಗ್ರಹಿಸಲಾಗಿದೆ. ಶಾಸಕರ ಕಚೇರಿಯೂ ಸಾರ್ವಜನಿಕ ಸ್ಥಳವಾಗಿರುವುದರಿಂದ ಸಾರ್ವಜನಿಕವಾಗಿ ಜಾತಿ ನಿಂದನೆ ಮಾಡಿಲ್ಲ ಎನ್ನಲಾಗದು. ಮುನಿರತ್ನ ಇತಿಹಾಸ ತಿಳಿದವರಿಗೆ ಅವರು ಸಾಕ್ಷ್ಯ ನಾಶ ಮಾಡುತ್ತಾರೆ ಎಂಬುದರಲ್ಲಿ ಅನುಮಾನವಿಲ್ಲ. ಆದ್ದರಿಂದ, ಜಾಮೀನು ಮಂಜೂರು ಮಾಡಬಾರದು ಎಂದು ಮನವಿ ಮಾಡಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, ಜಾಮೀನು ಅರ್ಜಿ ಕುರಿತ ತೀರ್ಪನ್ನು ಗುರುವಾರಕ್ಕೆ ಕಾಯ್ದಿರಿಸಿತು.
Related Articles
Thank you for your comment. It is awaiting moderation.
Comments (0)