ಉದ್ಯಮಿ ರತ್ನಾಕರ ಶೆಟ್ಟಿಗೆ ಜೀವ ಬೆದರಿಕೆಯೊಡ್ಡಿದ ಆರೋಪ; ಬನ್ನಂಜೆ ಸಹಚರ ಶಶಿ ಪೂಜಾರಿಗೆ ಜಾಮೀನು ನೀಡಿದ ಹೈಕೋರ್ಟ್

ಬೆಂಗಳೂರು: ಉಡುಪಿಯ ಉದ್ಯಮಿ ರತ್ನಾಕರ ಡಿ. ಶೆಟ್ಟಿ ಅವರಿಗೆ ಜೀವ ಬೆದರಿಕೆಯೊಡ್ಡಿದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ಕುಖ್ಯಾತ ರೌಡಿಶೀಟರ್‌ ಬನ್ನಂಜೆ ರಾಜನ ಸಹಚರ ಶಶಿ ಪೂಜಾರಿ ಅಲಿಯಾಸ್‌ ಶಶಿಕುಮಾರ್‌ಗೆ ಹೈಕೋರ್ಟ್‌ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಪ್ರಕರಣ ಸಂಬಂಧ ನ್ಯಾಯಾಂಗ ಬಂಧನದಲ್ಲಿದ್ದ ಶಶಿ ಪೂಜಾರಿ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ. ತೀರ್ಪಿನ ವಿಸ್ತೃತ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ಪ್ರಕರಣವೇನು?
ತಮಗೆ ಜೀವ ಬೆದರಿಕೆಯೊಡ್ಡಲಾಗಿದೆ ಎಂದು ಆರೋಪಿಸಿ 2019ರ ಮಾರ್ಚ್‌ 3ರಂದು ಉದ್ಯಮಿ ರತ್ನಾಕರ ಶೆಟ್ಟಿ ಉಡುಪಿ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಆ ದೂರು ಆಧರಿಸಿ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್‌ 384 (ವಸೂಲಿ), 387 (ವಸೂಲಿ ಮಾಡುವುದಕ್ಕಾಗಿ ಜೀವ ಬೆದರಿಕೆ ಹಾಕಿದ ಹಾಗೂ ಹಲ್ಲೆ ನಡೆಸಿದ) 504, 506, 507 (ಜೀವ ಬೆದರಿಕೆ), 120(ಬಿ) ಅಪರಾಧಿಕ ಒಳಸಂಚು, 109 (ಯಾವುದೇ ಅಪರಾಧಕ್ಕೆ ಕುಮ್ಮಕ್ಕು ನೀಡುವುದು) 201 (ಸಾಕ್ಷ್ಯ ನಾಶ) ಹಾಗೂ ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆಯಡಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು.

ಪ್ರಕರಣ ಸಂಬಂಧ ಆರೋಪಿಗಳಾದ ಬನ್ನಂಜೆ ರಾಜ, ಶಶಿ ಪೂಜಾರಿ ಅಲಿಯಾಸ್‌ ಶ್ಯಾಡೊ ಶಶಿಕುಮಾರ್‌, ಧನರಾಜ್‌ ಪೂಜಾರಿ, ರವಿಚಂದ್ರ ಪೂಜಾರಿ, ಉಲ್ಲಾಸ್‌ ಶೆಣೈ ಅವರನ್ನು ಪೊಲೀಸರು ಬಂಧಿಸಿದ್ದರು. ಬನ್ನಂಜೆ ರಾಜ ಸಂಘಟಿತ ಅಪರಾಧ ಸಿಂಡಿಕೇಟ್‌ನ ಕಿಂಗ್‌ಪಿನ್‌ ಆಗಿದ್ದು, ಶ್ರೀಮಂತ ಉದ್ಯಮಿಗಳಿಗೆ ಜೀವ ಬೆದರಿಕೆ ಹಾಕಿ ಹಣ ಸುಲಿಗೆ ಮಾಡಿದ ಆರೋಪ ಆತನ ಸಹಚರ ಶಶಿ ಪೂಜಾರಿ ಮೇಲಿದೆ. ಆರೋಪಿಗಳಾದ ಬನ್ನಂಜೆ ರಾಜ, ಶಶಿ ಪೂಜಾರಿ ಅಲಿಯಾಸ್‌ ಶಾಡೊ ಶಶಿಕುಮಾರ್‌, ಧನರಾಜ್‌ ಪೂಜಾರಿ, ರವಿಚಂದ್ರ ಪೂಜಾರಿ, ಉಲ್ಲಾಸ್‌ ಶೆಣೈ ಅವರನ್ನು ಪೊಲೀಸರು ಬಂಧಿಸಿದ್ದರು. ವಿಚಾರಣಾ ನ್ಯಾಯಾಲಯ ಜಾಮೀನು ನಿರಾಕರಿಸಿದ್ದರಿಂದ ಶಶಿ ಪೂಜಾರಿ ಜಾಮೀನಿಗಾಗಿ ಹೈಕೋರ್ಟ್‌ ಮೆಟ್ಟಿಲೇರಿದ್ದ.

Related Articles

Comments (0)

Leave a Comment